ಖಾಸಗಿ ಶಾಲೆ ಮಾನ್ಯತೆ ನವೀಕರಣ ಸರಳೀಕರಣ: ಭರವಸೆ

ಬೀದರ್: ಕನ್ನಡ ಮಾಧ್ಯಮ ಖಾಸಗಿ ಶಾಲೆಗಳ ಮಾನ್ಯತೆ ನವೀಕರಣ ಸರಳೀಕರಿಸಲಾಗುವುದು ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ವಿ. ಮಹೇಶ್ ಹೇಳಿದರು.
ಅಖಿಲ ಕರ್ನಾಟಕ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘದ ರಾಜ್ಯ ಅಧ್ಯಕ್ಷ ರೇವಣಸಿದ್ದಪ್ಪ ಜಲಾದೆ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಶನಿವಾರ ತಮ್ಮನ್ನು ಭೇಟಿಯಾದ ಸಂಘದ ನಿಯೋಗದ ಬೇಡಿಕೆಗೆ ಸ್ಪಂದಿಸಿ ಅವರು ಈ ಭರವಸೆ ನೀಡಿದರು.
ಷರತ್ತುಗಳ ಕಾರಣ ಶಾಲಾ ಮಾನ್ಯತೆ ನವೀಕರಣಕ್ಕೆ ಆಗುತ್ತಿರುವ ತೊಂದರೆ ಗಮನಕ್ಕೆ ಬಂದಿದೆ. ನ. ೨೦ಕ್ಕೆ ಕೊನೆಗೊಳ್ಳಲಿರುವ ನವೀಕರಣ ಅವಧಿಯನ್ನು ವಿಸ್ತರಿಸಲಾಗುವುದು ಎಂದು ತಿಳಿಸಿದರು.
ಇದಕ್ಕೂ ಮುನ್ನ ಸಂಘದ ರಾಜ್ಯ ಅಧ್ಯಕ್ಷ ರೇವಣಸಿದ್ದಪ್ಪ ಜಲಾದೆ ಅವರು, ಅನಾವಶ್ಯಕ ಷರತ್ತುಗಳಿಂದ ಕನ್ನಡ ಶಾಲೆಗಳ ಮಾನ್ಯತೆ ನವೀಕರಣಕ್ಕೆ ಬಹಳ ತೊಂದರೆಯಾಗುತ್ತಿದೆ. ಮಾನ್ಯತೆ ಅವಧಿ ಇಷ್ಟರಲ್ಲೇ ಮುಕ್ತಾಯಗೊಳ್ಳಲಿರುವ ಕಾರಣ ಶಾಲಾ ಆಡಳಿತ ಮಂಡಳಿಯವರು ಸಮಸ್ಯೆಯಲ್ಲಿದ್ದಾರೆ ಎಂದು ಗಮನ ಸೆಳೆದರು.
ಶಾಲಾ ಆಡಳಿತ ಮಂಡಳಿಗಳು ಸಂಕಷ್ಟದ ಮಧ್ಯೆ ಕನ್ನಡ ಮಾಧ್ಯಮ ಶಾಲೆಗಳನ್ನು ನಡೆಸಿಕೊಂಡು ಬರುತ್ತಿವೆ. ಅದಾಗಿಯೂ ನೂರೆಂಟು ಷರತ್ತುಗಳನ್ನು ವಿಧಿಸಿದರೆ ಶಾಲೆ ನಡೆಸುವುದು ಕಷ್ಟ. ಇದರಿಂದಾಗಿಯೇ ಕನ್ನಡ ಶಾಲೆಗಳು ಸೊರಗುತ್ತಿವೆ ಎಂದು ಖಾಸಗಿ ಶಾಲೆಗಳ ಸಮಸ್ಯೆ ಎಳೆ ಎಳೆಯಾಗಿ ಬಿಡಿಸಿಟ್ಟರು.
೧೯೯೫ ರ ನಂತರದ ಕನ್ನಡ ಮಾಧ್ಯಮ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಬೇಕು. ಆಯಾ ಜಿಲ್ಲೆಗಳಿಂದ ಅನುದಾನ ಸಂಬAಧ ಸಲ್ಲಿಸಲಾದ ಖಾಸಗಿ ಶಾಲೆಗಳ ಪಟ್ಟಿ ಖೊಟ್ಟಿಯಾಗಿದೆ. ಈ ಅವಧಿಯಲ್ಲಿ ಆರಂಭವಾದ ಶಾಲೆಗಳ ಪೈಕಿ ಬಹಳಷ್ಟು ಕನ್ನಡ ಮಾಧ್ಯಮ ಶಾಲೆಗಳು ಆಂಗ್ಲ ಮಾಧ್ಯಮ ಶಾಲೆಗಳಾಗಿ ಪರಿವರ್ತನೆ ಹೊಂದಿವೆ. ಹೀಗಾಗಿ ಅನುದಾನಕ್ಕೆ ಅರ್ಹತೆ ಹೊಂದಿದ ಕನ್ನಡ ಶಾಲೆಗಳ ಸಂಖ್ಯೆ ಕಡಿಮೆ ಇದೆ ಎಂದು ತಿಳಿಸಿದರು.
ಖಾಸಗಿ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸುವ ಕುರಿತು ಸರ್ಕಾರ ನಿರ್ಧಾರ ಕೈಗೊಂಡರೆ, ಶಾಲೆಗಳ ಪಟ್ಟಿ ಹಾಗೂ ಅಗತ್ಯ ಅನುದಾನದ ಕುರಿತು ವರದಿ ಸಲ್ಲಿಸಲಾಗುವುದು ಎಂದು ರಶ್ಮಿ ವಿ. ಮಹೇಶ್ ಹೇಳಿದರು.
ಸಂಘದ ರಾಜ್ಯ ಉಪಾಧ್ಯಕ್ಷರಾದ ಎಂ. ಮೌಲಾಲಿ, ಡಿ. ನದಾಫ್, ಕಾರ್ಯದರ್ಶಿ ಗುರುನಾಥ ರೆಡ್ಡಿ, ಪ್ರಮುಖರಾದ ಶಾಂತರೆಡ್ಡಿ ಯಾದಗೀರ, ಗುಂಡಯ್ಯ ತೀರ್ಥ, ಕೆ.ಎಂ. ಮಹಾಲಿಂಗನಗೌಡರ, ಪಂಪಾವತಿ ತಿಪ್ಪಣ್ಣ ಕ್ಯಾತನಾಳ್ ನಿಯೋಗದಲ್ಲಿದ್ದರು.
ಖಾಸಗಿ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸುವ ಕುರಿತು ಬೆಳಗಾವಿ ಅಧಿವೇಶನದಲ್ಲಿ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಸಂಘದಿAದ ಪ್ರತಿ ಪಕ್ಷದ ನಾಯಕರಾದ ಆರ್. ಅಶೋಕ್, ಬಿ.ವೈ. ವಿಜಯೇಂದ್ರ, ಛಲವಾದಿ ನಾರಾಯಣಸ್ವಾಮಿ ಹಾಗೂ ಶರಣಗೌಡ ಕಂದಕೂರ ಅವರಿಗೆ ಪ್ರತ್ಯೇಕ ಮನವಿ ಪತ್ರ ಸಲ್ಲಿಸಲಾಯಿತು.