ಐತಿಹಾಸಿಕ ತಾಣ ವೀರಗಲ್ಲುಗಳ ಸಂರಕ್ಷಣೆಗೆ ಆದ್ಯತೆ

ಕೋಲಾರ,ಜ,೨೩-ಜಿಲ್ಲೆಯ ಸಮೃದ್ಧ ಇತಿಹಾಸವನ್ನು ಸಾರುವ ಐತಿಹಾಸಿಕ ಸ್ಮಾರಕಗಳು ಹಾಗೂ ವೀರಗಲ್ಲುಗಳನ್ನು ವೈಜ್ಞಾನಿಕವಾಗಿ ಸಂರಕ್ಷಿಸಿ, ಮುಂದಿನ ಪೀಳಿಗೆಗೆ ಉಳಿಸಿಕೊಡಲು ಜಿಲ್ಲಾಡಳಿತ ಮಹತ್ವದ ಯೋಜನೆಗಳನ್ನು ರೂಪಿಸಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ತಿಳಿಸಿದರು.


ನಗರ ಹೊರವಲಯದ ಜಿಲ್ಲಾಧಿಕಾರಿಗಳ ಕೇಸ್ವಾನ್ ಸಭಾಂಗಣದಲ್ಲಿ ನಡೆದ ವಿಶೇಷ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ರಾಜ್ಯ ಪುರಾತತ್ವ ಇಲಾಖೆ ಈಗಾಗಲೇ ಗುರುತಿಸಲ್ಪಟ್ಟಿರುವ ಸ್ಮಾರಕಗಳನ್ನು ಸಂರಕ್ಷಿಸಲು ಅಧಿಕೃತವಾಗಿ ಅಧಿಸೂಚನೆ ಹೊರಡಿಸಿದ್ದು. ಈ ಕುರಿತು ಸೂಕ್ತ ಕ್ರಮ ವಹಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚಿಸಿದರು.


ತಾಲ್ಲೂಕು ಕಾರ್ಯನಿರ್ವಾಹ ಅಧಿಕಾರಿಗಳು ಮತ್ತು ತಹಶೀಲ್ದಾರರ ಮೂಲಕ ಜಿಲ್ಲೆಯ ಹೊಸ ಐತಿಹಾಸಿಕ ತಾಣಗಳನ್ನು ಗುರುತಿಸಿ, ಆಕ್ಷೇಪಣೆಗಳನ್ನು ಆಹ್ವಾನಿಸಿದ ನಂತರ ಅವುಗಳನ್ನು ಪಟ್ಟಿಗೆ ಸೇರಿಸಳು ಕ್ರಮ ಕೈಗೊಳ್ಳಬೇಕು. ಇತಿಹಾಸ ತಜ್ಞರು ಹಾಗೂ ಕಾಲೇಜು ವಿದ್ಯಾರ್ಥಿಗಳನ್ನು ಒಳಗೊಂಡಂತೆ ಸ್ಮಾರಕಗಳ ಸಂರಕ್ಷಣೆ ಕುರಿತು ಶೀಘ್ರದಲ್ಲೇ ಜಿಲ್ಲಾ ಮಟ್ಟದ ಸಮಿತಿ ಯೊಂದನ್ನು ರಚಿಸಲಾಗುವುದು. ಜಿಲ್ಲೆಯ ಎಲ್ಲಾ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿರುವ ’ಹೆರಿಟೇಜ್ ಕ್ಲಬ್ಗಳಿಗೆ ಮರುಜೀವ ನೀಡಿ, ವಿದ್ಯಾರ್ಥಿಗಳಲ್ಲಿ ಐತಿಹಾಸಿಕ ಪ್ರಜ್ಞೆ ಮೂಡಿಸಲು ಕ್ರಮಕೈಗೊಳ್ಳಬೇಕು ಎಂದರು.


ದೇವಾಲಯದ ಆವರಣದಲ್ಲಿ ಅಥವಾ ಅಸುಪಾಸಿನಲ್ಲಿ ಅಸುರಕ್ಷಿತವಾಗಿರುವ ವೀರಗಲ್ಲು ಹಾಗೂ ಶಾಸನಗಳನ್ನು ಗುರುತಿಸಿ, ಅವುಗಳಿಗೆ ಹಾನಿಯಾಗದಂತೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಲಾಯಿತು.


ಜಿಲ್ಲೆಯ ಪುರಾತತ್ವ ಇತಿಹಾಸವನ್ನು ಬಿಂಬಿಸಲು ೫ ಎಕರೆ ಜಮೀನನ್ನು ಮೀಸಲಿಡಲಾಗಿದ್ದು, ಇಲ್ಲಿ ಒಳಾಂಗಣ ಮತ್ತು ಹೊರಾಂಗಣ ಪ್ರದರ್ಶನ ವ್ಯವಸ್ಥೆಯುಳ್ಳ ಸುಸಜ್ಜಿತ ಮ್ಯೂಸಿಯಂ ನಿರ್ಮಿಸಲಾಗುವುದು. ಇದರ ನಿರ್ಮಾಣ ಜವಾಬ್ದಾರಿಯನ್ನು ಪುರಾತತ್ವ ಮತ್ತು ವಸ್ತುಸಂಗ್ರಹಾಲಯಗಳ ಇಲಾಖೆ ವಹಿಸಿಕೊಳ್ಳಲಿದೆ. ಅಲ್ಲದೆ, ಹಳೆಯ ಜೂನಿಯರ್ ಕಾಲೇಜು ಕಟ್ಟಡವನ್ನು ಹೆರಿಟೇಜ್ ಬಿಲ್ಡಿಂಗ್ ಆಗಿ ಪರಿವರ್ತಿಸುವ ಕುರಿತು ಡಿಡಿಪಿಐ ಅವರಿಂದ ಪ್ರಸ್ತಾವನೆ ಸಲ್ಲಿಸಲು ತಿಳಿಸಲಾಯಿತು.


ಸಭೆಯಲ್ಲಿ ಜಿಲ್ಲಾಧಿಕಾರಿ ಅಪರ ಜಿಲ್ಲಾಧಿಕಾರಿ ಎಸ್. ಎಂ. ಮಂಗಳ, ಪೊಲೀಸ್ ವರಿಷ್ಟಾಧಿಕಾರಿ ಕನ್ನಿಕಾ ಸಿಕ್ರಿವಾಲ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ತುಕಾರಾಂ, ರಾಜ್ಯ ಪುರಾತತ್ವ ಇಲಾಖೆಯ ಅಧಿಕಾರಿ ಕಾವ್ಯಶ್ರೀ, ಕೇಂದ್ರ ಪುರಾತತ್ವ ಇಲಾಖೆಯ ಅಧಿಕಾರಿ ಲಕ್ಷ್ಮಿ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇತಿಹಾಸ ತಜ್ಞರು, ಉಪನ್ಯಾಸಕರು ಸಮಾಜ ಸೇವಕರು ಉಪಸ್ಥಿತರಿದ್ದರು.