Home ಜಿಲ್ಲೆ ನಗರ ಹಾಗೂ ಗ್ರಾಮೀಣ ಭಾಗದ ಮೂಲಭೂತ ಸೌಕರ್ಯಗಳಿಗೆ ಆದ್ಯತೆ: ಶಾಸಕ ತುನ್ನೂರ

ನಗರ ಹಾಗೂ ಗ್ರಾಮೀಣ ಭಾಗದ ಮೂಲಭೂತ ಸೌಕರ್ಯಗಳಿಗೆ ಆದ್ಯತೆ: ಶಾಸಕ ತುನ್ನೂರ

ಯಾದಗಿರಿ:ಮೇ.೨೫: ಜಿಲ್ಲಾ ಕೇಂದ್ರವಾಗಿ ಯಾದಗಿರಿ ನಗರ ಸ್ಥಾಪನೆಯಾಗಿ ೧೫ ವರ್ಷಗಳು ಕಳೆದಿದ್ದು, ವರ್ಷದಿಂದ ವರ್ಷಕ್ಕೆ ನಗರ ವಿಸ್ತಾರವಾಗುತ್ತಿದೆ. ಜನರು ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳ ಪರಿಹಾರಕ್ಕಾಗಿ ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಹೇಳಿದರು.

ನಗರದ ಹೊಸಳ್ಳಿ ಕ್ರಾಸ್‌ನಲ್ಲಿ ಲೋಕೋಪಯೋಗಿ ಇಲಾಖೆಯಿಂದ ?೭ ಕೋಟಿ ವೆಚ್ಚದಲ್ಲಿ ಕೈಗೊಳ್ಳಲಿರುವ ರಸ್ತೆ ಅಗಲೀಕರಣ, ವಿಭಜಕ ನಿರ್ಮಾಣ, ಪಾದಚಾರಿ ಮಾರ್ಗ, ವಿದ್ಯುತ್ ಸೌಲಭ್ಯ ಕಲ್ಪನೆ ಹಾಗೂ ೪.೮ ಕಿಲೋಮೀಟರ್ ರಸ್ತೆ ಮರು ಡಾಂಬರೀಕರಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಹೊಸಳ್ಳಿ ಕ್ರಾಸ್‌ನಿಂದ ಜೆಸ್ಕಾಂ ಉಪಕೇಂದ್ರದ ಕಚೇರಿವರೆಗೆ ಸುಮಾರು ೯೦೦ ಮೀಟರ್ ರಸ್ತೆ ಅಗಲೀಕರಣ ಕೈಗೊಳ್ಳಲಾಗುತ್ತಿದ್ದು, ಇದು ನಗರದ ಅತೀ ಜನಸಂದಣಿ ಪ್ರದೇಶವಾಗಿರುವುದರಿಂದ ವಾಹನ ನಿಲುಗಡೆ ಹಾಗೂ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದರು. ರಸ್ತೆ ಮರು ಡಾಂಬರೀಕರಣದಿAದ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲ ದೊರೆಯಲಿದೆ ಎಂದರು.

ಪ್ರತಿ ಮಳೆಗಾಲದಲ್ಲಿ ಪಗಲಾಪೂರ ಸೇತುವೆ ಕಿರಿದಾಗಿರುವುದರಿಂದ ಗ್ರಾಮಸ್ಥರು ಹಾಗೂ ಶಾಲಾ ವಿದ್ಯಾರ್ಥಿಗಳು ಸಂಚಾರದಲ್ಲಿ ತೀವ್ರ ತೊಂದರೆ ಅನುಭವಿಸುತ್ತಿದ್ದರು. ಸಮಸ್ಯೆಯನ್ನು ಮನಗಂಡು ?೮ ಕೋಟಿ ವೆಚ್ಚದಲ್ಲಿ ಹೊಸ ದೊಡ್ಡ ಸೇತುವೆ ಹಾಗೂ ರಸ್ತೆ ಸುಧಾರಣೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಇದರಿಂದ ಶಾಶ್ವತ ಪರಿಹಾರ ದೊರೆಯಲಿದೆ ಎಂದು ಹೇಳಿದರು.

ನಗರದ ಮತ್ತೊಂದು ಪ್ರಮುಖ ಸ್ಥಳವಾದ ಹತ್ತಿಕುಣಿ ಕ್ರಾಸ್‌ನಲ್ಲಿಯೂ ಇದೇ ಮಾದರಿಯ ಅಭಿವೃದ್ಧಿ ಕಾಮಗಾರಿಗಳಿಗೆ ?೫ ಕೋಟಿ ಅನುದಾನ ಮೀಸಲಿಡಲಾಗಿದೆ. ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ನೀಡಿ ಜನರಿಗೆ ಅನುಕೂಲತೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಜೊತೆಗೆ ಜನಪರ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದಿದೆ. ಕ್ಷೇತ್ರದ ಪ್ರಮುಖ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ ಎಂದು ಶಾಸಕರು ಹೇಳಿದರು.

“ನನ್ನ ಕಾರ್ಯವೈಖರಿಯಿಂದ ಅಸಮಾಧಾನಗೊಂಡಿರುವ ಕೆಲ ವಿರೋಧಿಗಳು ಕ್ಷುಲ್ಲಕ ಟೀಕೆಗಳು ಹಾಗೂ ಅಪಪ್ರಚಾರ ನಡೆಸುತ್ತಿದ್ದಾರೆ. ಆದರೆ ಜನರು ವಾಸ್ತವಿಕ ಅಭಿವೃದ್ಧಿ ಕಾರ್ಯಗಳನ್ನು ಗಮನಿಸುತ್ತಿದ್ದು, ಸಮಯ ಬಂದಾಗ ತಕ್ಕ ಉತ್ತರ ನೀಡಲಿದ್ದಾರೆ” ಎಂದು ಪರೋಕ್ಷವಾಗಿ ವಿರೋಧಿಗಳಿಗೆ ಟಾಂಗ್ ನೀಡಿದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಸುದರ್ಶನ ನಾಯಕ ಮಾತನಾಡಿ, ಶಾಸಕ ತುನ್ನೂರ ಅವರು ಜನಸಾಮಾನ್ಯರಿಗೆ ಸುಲಭವಾಗಿ ಸಿಗುವ ಸರಳ ವ್ಯಕ್ತಿತ್ವದ ನಾಯಕರು. ಕ್ಷೇತ್ರದ ಅಭಿವೃದ್ಧಿ ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸಿ ನಗರಕ್ಕೆ ಹೊಸ ಕಾಯಕಲ್ಪ ನೀಡಲು ಶ್ರಮಿಸುತ್ತಿದ್ದಾರೆ ಎಂದು ಪ್ರಶಂಸಿಸಿದರು.

ಶಾAತಿ ಮತ್ತು ಸಾಮರಸ್ಯಕ್ಕೆ ಹೆಸರಾಗಿರುವ ಕ್ಷೇತ್ರದಲ್ಲಿ ಶಾಸಕರು ನಿರಂತರ ಗ್ರಾಮ ಪ್ರವಾಸ ನಡೆಸಿ ಜನರ ಕುಂದುಕೊರತೆಗಳನ್ನು ಆಲಿಸಿ ತುರ್ತು ಕಾಮಗಾರಿಗಳಿಗೆ ಚಾಲನೆ ನೀಡುವ ಮೂಲಕ ಜನರಿಗೆ ಅನುಕೂಲತೆ ಒದಗಿಸುತ್ತಿದ್ದಾರೆ ಎಂದು ಹೇಳಿದರು.

ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪರಶುರಾಮ ಕಾಮಗಾರಿಗಳ ವಿವರ ನೀಡಿದರು.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಾಬುರಾವ ಕಾಡ್ಲೂರ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಈಟಿ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಮರೆಪ್ಪ ಬಿಳ್ಹಾರ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ನಿಲೋಫರ ಬಾದಲ್, ಜಿಲ್ಲಾ ಕಾಂಗ್ರೆಸ್ ವಕ್ತಾರ ಶಾಮಸನ್ ಮಾಳಿಕೇರಿ, ಸುರೇಶ ಮಡ್ಡಿ, ಸಾಯಿಬಣ್ಣ ಬಾಡಿಯಾಳ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಚಮರಡ್ಡಿ ಇಮಾನವೆಲ್, ಮಲ್ಲಣ್ಣ ದಾಸನಕೇರಿ, ಬಸರಾಜಪ್ಪ ಬಾಗ್ಲಿ, ಗಣೇಶ ದುಪ್ಪಲ್ಲಿ ಹಾಗೂ ಚನ್ನಕೇಶವಗೌಡ ಬಾಣತಿಹಾಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.