Home ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಅಧಿಕಾರಕ್ಕಿಂತ ಸೇವೆಗೆ ಆದ್ಯತೆ: ಡಾ. ಸಿ. ಸೋಮಶೇಖರ್

ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಅಧಿಕಾರಕ್ಕಿಂತ ಸೇವೆಗೆ ಆದ್ಯತೆ: ಡಾ. ಸಿ. ಸೋಮಶೇಖರ್

ಬೀದರ್: ‘ಕನ್ನಡ ಸಾಹಿತ್ಯ ಪರಿಷತ್ತು ಅಧಿಕಾರದ ಕೇಂದ್ರವಾಗದೆ, ಕನ್ನಡ ನಾಡು, ನುಡಿ, ಸಾಹಿತ್ಯ ಮತ್ತು ಸಂಸ್ಕøತಿಯ ಸೇವಾ ಕೇಂದ್ರವಾಗಬೇಕು. ಆಡಳಿತವೆಂದರೆ ಅಧಿಕಾರವಲ್ಲ, ಅದೊಂದು ಸೇವೆ ಎಂಬ ತತ್ವವನ್ನು ಜೀವನದುದ್ದಕ್ಕೂ ಪಾಲಿಸಿಕೊಂಡು ಬಂದಿದ್ದೇನೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ, ನಿವೃತ್ತ ಐಎಎಸ್ ಅಧಿಕಾರಿ ಡಾ. ಸಿ. ಸೋಮಶೇಖರ್ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಮುಂಬರುವ ಚುನಾವಣೆಯ ಹಿನ್ನೆಲೆಯಲ್ಲಿ ಬೀದರ್, ವಿಜಯಪುರ ಹಾಗೂ ಬಸವಕಲ್ಯಾಣದಲ್ಲಿ ಹಮ್ಮಿಕೊಂಡಿದ್ದ ಪ್ರಚಾರ ಸಭೆಗಳಲ್ಲಿ ಮಾತನಾಡಿದ ಅವರು, ಪರಿಷತ್ತಿನಲ್ಲಿ ಸಾಮಾಜಿಕ ನ್ಯಾಯ, ಭೌಗೋಳಿಕ ನ್ಯಾಯ, ಪ್ರಾದೇಶಿಕ ನ್ಯಾಯ ಹಾಗೂ ಪ್ರತಿಭಾ ನ್ಯಾಯಕ್ಕೆ ಆದ್ಯತೆ ನೀಡುವುದು ತಮ್ಮ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.

‘ಅಧಿಕಾರದಲ್ಲಿದ್ದಾಗಲೂ ಜನಸಾಮಾನ್ಯರೊಂದಿಗೆ ಬೆರೆತು ಕೆಲಸ ಮಾಡಿದ್ದೇನೆ. ಜನರಿಂದ ದೊರೆಯುವ ಪ್ರೀತಿ, ವಿಶ್ವಾಸವೇ ನನ್ನ ನಿಜವಾದ ಶಕ್ತಿ. ಅದೇ ಪ್ರೀತಿ ಮತ್ತು ವಿಶ್ವಾಸದೊಂದಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ನಾಡು, ನುಡಿಯ ಸೇವೆ ಮಾಡಲು ಮುಂದಾಗಿದ್ದೇನೆ’ ಎಂದರು.

ಅಬಕಾರಿ ಆಯುಕ್ತರಾಗಿ, ಕೃಷಿ ಮಾರುಕಟ್ಟೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿದಂತೆ ವಿವಿಧ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವವಿದೆ. ಆಡಳಿತದಲ್ಲಿ ಗಳಿಸಿದ ಅನುಭವವನ್ನು ಸಾಹಿತ್ಯ ಪರಿಷತ್ತಿನ ಅಭಿವೃದ್ಧಿಗೆ ಬಳಸಿಕೊಳ್ಳುವ ಉದ್ದೇಶ ಹೊಂದಿದ್ದೇನೆ ಎಂದು ಹೇಳಿದರು.

ಬಸವಣ್ಣನವರ ವಚನಗಳು ತಮ್ಮ ಬದುಕಿಗೆ ಮಾರ್ಗದರ್ಶಿಯಾಗಿವೆ. ಸಮಾನತೆ, ಮಾನವೀಯತೆ, ಮಹಿಳೆಯರ ಬಗ್ಗೆ ಗೌರವ ಹಾಗೂ ಸಾಮಾಜಿಕ ನ್ಯಾಯದ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದೇನೆ. ಸ್ತ್ರೀಶಕ್ತಿಯನ್ನು ಗೌರವಿಸುವುದು ತಮ್ಮ ಕುಟುಂಬದ ಸಂಪ್ರದಾಯವಾಗಿದೆ ಎಂದು ತಿಳಿಸಿದರು.

ಗಡಿ ಜಿಲ್ಲೆಗಳಿಗೆ ನ್ಯಾಯ ಒದಗಿಸಲು ಆಗ್ರಹ: ಸಭೆಯಲ್ಲಿ ಮಾತನಾಡಿದ ವಿವಿಧ ಮುಖಂಡರು, ಕನ್ನಡ ಸಾಹಿತ್ಯ ಪರಿಷತ್ತಿನ ಹಿಂದಿನ ಆಡಳಿತ ಮಂಡಳಿಗಳ ಅವಧಿಯಲ್ಲಿ ಬೀದರ್ ಸೇರಿದಂತೆ ಗಡಿ ಜಿಲ್ಲೆಗಳಿಗೆ ನಿರೀಕ್ಷಿತ ಪ್ರಾತಿನಿಧ್ಯ ದೊರೆತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬೀದರ್‍ನಂತಹ ಗಡಿ ಜಿಲ್ಲೆಗಳಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುವಂತೆ ಮನವಿ ಮಾಡಿದರೂ ಸೂಕ್ತ ಸ್ಪಂದನೆ ದೊರೆತಿಲ್ಲ. ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಉಳಿವಿಗೆ ಗಡಿ ಜಿಲ್ಲೆಗಳ ಕೊಡುಗೆ ಅಪಾರವಾಗಿದ್ದು, ಅವುಗಳಿಗೆ ಪರಿಷತ್ತಿನಲ್ಲಿ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದು ಒತ್ತಾಯಿಸಿದರು.

ಡಾ. ಸಿ. ಸೋಮಶೇಖರ್ ಅವರು ಅಧ್ಯಕ್ಷರಾಗಿ ಆಯ್ಕೆಯಾದರೆ ಗಡಿ ಜಿಲ್ಲೆಗಳ ಸಮಸ್ಯೆಗಳಿಗೆ ಸ್ಪಂದಿಸುವುದರೊಂದಿಗೆ ಸಾಹಿತ್ಯ, ವಿಜ್ಞಾನ ಮತ್ತು ಸಂಸ್ಕೃತಿಯನ್ನು ಒಗ್ಗೂಡಿಸಿ ಪರಿಷತ್ತನ್ನು ಮುನ್ನಡೆಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಸರಳ ವ್ಯಕ್ತಿತ್ವಕ್ಕೆ ಮೆಚ್ಚುಗೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ರೈತ ಕುಟುಂಬದ ಹಿನ್ನೆಲೆಯಿಂದ ಬಂದ ಡಾ. ಸೋಮಶೇಖರ್ ಅವರು ಕಠಿಣ ಪರಿಶ್ರಮದ ಮೂಲಕ ಐಎಎಸ್ ಅಧಿಕಾರಿಯಾಗಿ ಬೆಳೆದಿದ್ದಾರೆ. ತುಮಕೂರಿನಲ್ಲಿ ಜಿಲ್ಲಾಧಿಕಾರಿಯಾಗಿ, ರಾಮನಗರದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಮುಖಂಡರು ಸ್ಮರಿಸಿದರು.

ಉನ್ನತ ಹುದ್ದೆಗಳನ್ನು ಅಲಂಕರಿಸಿದರೂ ಅಧಿಕಾರದ ಅಹಂಕಾರವಿಲ್ಲದೆ ಜಾತಿ, ಧರ್ಮದ ಭೇದವಿಲ್ಲದೆ ಜನಸಾಮಾನ್ಯರೊಂದಿಗೆ ಬೆರೆತು ಕೆಲಸ ಮಾಡಿರುವುದು ಅವರ ವ್ಯಕ್ತಿತ್ವದ ವಿಶೇಷತೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಿವೃತ್ತಿಯ ನಂತರವೂ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ಅವರು, ಕಳೆದ ನಾಲ್ಕು ವರ್ಷಗಳಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಸಂಚರಿಸಿ ಸಾಹಿತ್ಯಾಸಕ್ತರು ಹಾಗೂ ಪರಿಷತ್ತಿನ ಸದಸ್ಯರನ್ನು ಸಂಪರ್ಕಿಸುತ್ತಿದ್ದಾರೆ. ಪರಿಷತ್ತನ್ನು ಜನಸಾಮಾನ್ಯರಿಗೆ ಮತ್ತಷ್ಟು ಹತ್ತಿರವಾಗಿಸುವ ದೃಷ್ಟಿಕೋನ ಹೊಂದಿದ್ದಾರೆ ಎಂದು ಹೇಳಿದರು.

ಮತದಾನ ಪ್ರಮಾಣ ಹೆಚ್ಚಿಸಲು ಕರೆ: ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗಳಲ್ಲಿ ಸಾಮಾನ್ಯವಾಗಿ ಶೇ 40ರಿಂದ 45ರಷ್ಟು ಮಾತ್ರ ಮತದಾನವಾಗುತ್ತಿದೆ. ಈ ಪ್ರಮಾಣವನ್ನು ಹೆಚ್ಚಿಸಲು ಸದಸ್ಯರನ್ನು ಖುದ್ದಾಗಿ ಸಂಪರ್ಕಿಸಿ ಮತದಾನದ ಮಹತ್ವ ತಿಳಿಸಬೇಕು ಎಂದು ಡಾ. ಸೋಮಶೇಖರ್ ಕಾರ್ಯಕರ್ತರಿಗೆ ಮನವಿ ಮಾಡಿದರು.

ಚುನಾವಣೆ ಸಂದರ್ಭದಲ್ಲಿ ಟೀಕೆ, ವಿರೋಧ ಹಾಗೂ ಅಪಪ್ರಚಾರಗಳು ಸಹಜ. ಆದರೆ ಯಾರ ಮೇಲೂ ದ್ವೇಷ ಸಾಧಿಸದೆ ಎಲ್ಲರ ಪ್ರೀತಿ, ವಿಶ್ವಾಸ ಗಳಿಸಿಕೊಂಡು ಅಜಾತಶತ್ರುವಾಗಿ ಉಳಿಯುವುದು ತಮ್ಮ ಆಶಯವಾಗಿದೆ ಎಂದರು.

20 ಸಾವಿರ ಮತಗಳ ಗುರಿ: ಬೀದರ್ ಜಿಲ್ಲೆಯಲ್ಲಿ ಸುಮಾರು 22 ಸಾವಿರ ಕನ್ನಡ ಸಾಹಿತ್ಯ ಪರಿಷತ್ತಿನ ಮತದಾರರಿದ್ದು, ಅವರಲ್ಲಿ ಕನಿಷ್ಠ 20 ಸಾವಿರ ಮತಗಳನ್ನು ಡಾ. ಸೋಮಶೇಖರ್ ಅವರಿಗೆ ದೊರಕಿಸಿಕೊಡುವ ಗುರಿಯೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಬೆಂಬಲಿಗರು ಕರೆ ನೀಡಿದರು.

ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಅಪಾರ ಕಾಳಜಿ ಹೊಂದಿರುವ, ಬಸವಣ್ಣನವರ ಸಮಾನತೆಯ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಿರುವ ಡಾ. ಸೋಮಶೇಖರ್ ಅವರಂತಹ ವ್ಯಕ್ತಿಗೆ ಪರಿಷತ್ತಿನ ನಾಯಕತ್ವ ನೀಡುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಬೀದರ್ ಜಿಲ್ಲೆಯ ಸಾಹಿತ್ಯಾಸಕ್ತರು, ಕನ್ನಡಪರ ಸಂಘಟನೆಗಳು ಹಾಗೂ ಪರಿಷತ್ತಿನ ಸದಸ್ಯರು ಅವರಿಗೆ ಹೆಚ್ಚಿನ ಬೆಂಬಲ ನೀಡಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಪ್ರಚಾರ ಸಭೆಯಲ್ಲಿ ವಿಚಾರವಾದಿ ಹುಲಿಕಲ್ ನಟರಾಜ್, ನೀಲ್ ಶೆಟ್ಟಿ, ರಾಜಕುಮಾರ್ ಹೆಬ್ಬಾಳೆ, ವಿಜಯಲಕ್ಷ್ಮಿ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು, ಸಾಹಿತ್ಯಾಸಕ್ತರು ಹಾಗೂ ಪರಿಷತ್ತಿನ ಸದಸ್ಯರು ಭಾಗವಹಿಸಿದ್ದರು.