Home ಜಿಲ್ಲೆ ಬೆಂಗಳೂರು ಮಹಿಳಾ ಸ್ವಸಹಾಯ ಸಂಘಗಳ ಸಬಲೀಕರಣಕ್ಕೆ ಆದ್ಯತೆ ನೀಡಿ

ಮಹಿಳಾ ಸ್ವಸಹಾಯ ಸಂಘಗಳ ಸಬಲೀಕರಣಕ್ಕೆ ಆದ್ಯತೆ ನೀಡಿ

ಕೋಲಾರ,ಆ,೫-ಕೇವಲ ಉತ್ಪಾದನೆಗೆ ಸೀಮಿತವಾಗದೆ ಕೃಷಿ ಬೆಳೆಗಳ ಮೌಲ್ಯವರ್ಧನೆ ಹಾಗೂ ಗ್ರಾಮೀಣ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಹೆಚ್ಚಿನ ಒತ್ತು ನೀಡುವಂತೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ಉಮಾ ಮಹಾದೇವನ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.


ಇಂದು ಕೋಲಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲೆಯ ಅಭಿವೃದ್ಧಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕುಡಿಯುವ ನೀರು ನಿರ್ವಹಣೆ, ಮೀನುಗಾರಿಕೆ ಹಾಗೂ ಕೋಳಿ ಸಾಕಾಣಿಕೆ ಸೇರಿದಂತೆ ಗ್ರಾಮೀಣ ಆರ್ಥಿಕತೆಯ ಪ್ರತಿಯೊಂದು ಹಂತದಲ್ಲೂ ಸಂಜೀವಿನಿ ಮಹಿಳಾ ಸ್ವಸಹಾಯ ಸಂಘಗಳನ್ನು ತೊಡಗಿಸಿಕೊಳ್ಳುವಂತೆ ನಿರ್ದೇಶನ ನೀಡಿದರು.


ಟೊಮೆಟೊ ಬೆಲೆ ಪ್ರತಿ ಕೆಜಿಗೆ ೧೬ ರೂಪಾಯಿಗಿಂತ ಕಡಿಮೆಯಾಗಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಆಯುಕ್ತರು, ಟೊಮೆಟೊ ಮತ್ತು ಮಾವಿನ ಹಣ್ಣಿನ ಮೌಲ್ಯವರ್ಧನೆಗೆ ತಕ್ಷಣದ ಕ್ರಮ ಕೈಗೊಳ್ಳಬೇಕು ಎಂದರು. ವಿಶೇಷವಾಗಿ ಸನ್ ಡ್ರ್ರೈಡ್ ಟೊಮೆಟೊ ತಯಾರಿಸಿ ಯುರೋಪ್ ಹಾಗೂ ಗಲ್ಫ್ ರಾಷ್ಟ್ರಗಳಿಗೆ ರಫ್ತು ಮಾಡುವ ಸಾಧ್ಯತೆಗಳನ್ನು ಪರಿಶೀಲಿಸಲು ಮತ್ತು ಜಿಲ್ಲೆಯಲ್ಲೇ ಪಲ್ಪಿಂಗ್ ಯೂನಿಟ್ ಗಳನ್ನು ಸ್ಥಾಪಿಸಲು ನಬಾರ್ಡ್ ನೆರವು ಪಡೆಯುವಂತೆ ಕೃಷಿ ಮತ್ತು ತೋಟಗಾರಿಕಾ ಇಲಾಖೆಗೆ ಸೂಚಿಸಿದರು. ಇದೇ ವೇಳೆ ಜಿಲ್ಲೆಯಲ್ಲಿ ರಸಗೊಬ್ಬರ ಕೊರತೆಯಿಲ್ಲ ಹಾಗೂ ಮಳೆ ಕೊರತೆಯಾದರೆ ಪರ್ಯಾಯ ಬೆಳೆ ಯೋಜನೆ ಸಿದ್ಧವಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.


ಅಂತರ್ಜಲ ಮಟ್ಟ ಕುಸಿದು ೯೦೩ ಬೋರ್ ವೆಲ್ ಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿರುವ ಬಗ್ಗೆ ಮಾಹಿತಿ ಪಡೆದ ಅವರು, ಜಲ ಜೀವನ್ ಮಿಷನ್ (ಎಎಒ) ಅಡಿ ಕುಡಿಯುವ ನೀರಿನ ಘಟಕಗಳ ನಿರ್ವಹಣೆಯನ್ನು ಗ್ರಾಮ ಪಂಚಾಯತಿ ಮಟ್ಟದಲ್ಲಿ ತರಬೇತಿ ಪಡೆದ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ವಹಿಸುವಂತೆ ಸೂಚಿಸಿದರು. ಅಲ್ಲದೆ, ಜಿಲ್ಲೆಯ ೩೫೦ಕ್ಕೂ ಹೆಚ್ಚು ಕೆರೆಗಳಲ್ಲಿ ೫೦% ಕ್ಕಿಂತ ಹೆಚ್ಚು ನೀರಿದ್ದು, ಈ ಕೆರೆಗಳಲ್ಲಿ ಮೀನು ಮರಿಗಳನ್ನು ಬಿಡುವ ಜವಾಬ್ದಾರಿಯನ್ನು ಎಸ್.ಎಚ್.ಜಿ ಮಹಿಳೆಯರಿಗೆ ನೀಡುವ ಮೂಲಕ ಅವರಿಗೆ ಸ್ಥಳೀಯವಾಗಿ ಆದಾಯ ತಂದುಕೊಡಬೇಕು. ಅಲ್ಲದೆ ಸ್ಥಳೀಯವಾಗಿ ಮೀನು, ಕುರಿ, ಕೋಳಿ ಮೊಟ್ಟೆಗಳನ್ನು ಸ್ಥಳೀಯವಾಗಿ ಮಾರುಕಟ್ಟೆ ಮಾಡಲು ಪ್ರೋತ್ಸಾಹಿಸಬೇಕೆಂದು ಅವರು ತಿಳಿಸಿದರು.