ಔರಾದ್ : ಅ.1:ಮಂಗಳೂರು ಸಮಾಚಾರ ಪತ್ರಿಕೆ ಯಿಂದ ಶುರುವಾದ ಪತ್ರಿಕಾ ದಿನಾಚರಣೆ ನಿಖರತೆ ಜೊತೆಗೆ ಪ್ರಖರತೆಯನ್ನು ಉಳಿಸಿ ಕೊಂಡಿದೆ, ಮುದ್ರಣ ಮಾಧ್ಯಮವು ಸತ್ಯಾಂಶಗಳನ್ನು ಒಳಗೊಂಡಿರುತ್ತದೆ ಎಂದು ವಿಜಯ ಕರ್ನಾಟಕ ಸ್ಥಾನಿಕ ಸಂಪಾದಕ ದೇವಯ್ಯ ಗುತ್ತೆದಾರ ಹೇಳಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು ಪತ್ರಿಕಾ ದಿನಾಚರಣೆ ಇಂದು ಒಂದು ಸಂಭ್ರಮ ಅದರ ಜೊತೆಗೆ ಆತ್ಮಾವಲೋಕನ ಮಾಡಿಕೊಳ್ಳುವ ದಿನ ಪತ್ರಕರ್ತರು ಎದುರಿಸುತ್ತಿರುವ ಸವಾಲುಗಳು ಮೆಲುಕು ಹಾಕಬೇಕು, ಮುದ್ರಣ ಮಾಧ್ಯಮ ಮಿತ್ರರಿಗೆ ಹೆಚ್ಚಿನ ಜವಾಬ್ದಾರಿ ಇದೆ ಎಂದು ಸುಪ್ರೀಂ ಕೋರ್ಟ್ ಹೇಳುತ್ತದೆ, ಅನೇಕ ಮಹಾತ್ಮರೂ ಸಹ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದಾರೆ ಅದರಂತೆ ನಾವು ಆ ಕಾರ್ಯ ಮುಂದುವರೆಸಿಕೊಂಡು ಬರುತ್ತಾ ಇರುವುದು ಶ್ಲಾಘನೀಯ. ಡಿಜಿಟಲ್ ಮಾಧ್ಯಮದಲ್ಲಿ ಸಾಮಾನ್ಯವಾಗಿ ಕೊರತೆಯಿರುವ ವಿಶ್ವಾಸಾರ್ಹತೆಯ ಅಂಶ ಮುದ್ರಣ ಮಾಧ್ಯಮದಲ್ಲಿದೆ. ಜನರು ಡಿಜಿಟಲ್ ವಿಷಯಕ್ಕಿಂತ ಭೌತಿಕ ವಸ್ತುಗಳನ್ನು ಹೆಚ್ಚು ನಂಬುತ್ತಾರೆ, ಎಲೆಕ್ಟ್ರಾನಿಕ್ ಮೀಡಿಯಾ ಬಂದರು ಸಹ ಮುದ್ರಣ ಮಾಧ್ಯಮದ ಮೇಲೆ ಯಾವುದೇ ಪ್ರಕಾರದ ಪರಿಣಾಮ ಬಿದ್ದಿಲ್ಲ, ಜನಪರ ಹಾಗೂ ಜೀವಪರವಾದ ಸುದ್ದಿಗಳನ್ನು ಮುದ್ರಣ ಮಾಧ್ಯಮ ನೀಡುತ್ತಾ ಬಂದಿದೆ. ಪ್ರಜಾಪ್ರಭುತ್ವ ಉಳಿಯಲು ಮೂಲ ಕಾರಣವೇ ಪತ್ರಿಕಾ ರಂಗ. ಸಾಮಾಜಿಕ ಮಾಧ್ಯಮಗಳಿಂದ ಅಶಾಂತಿ ಉಂಟಾಗಿರುವುದನ್ನು ಕಾಣಬಹುದು ಆದರೆ ಮುದ್ರಣ ಮಾಧ್ಯಮದಿಂದ ಅಶಾಂತಿ ಉಂಟಾಗಿರುವ ಯಾವುದೇ ನಿದರ್ಶನಗಳು ಸಿಗುವುದಿಲ್ಲ ಆದ್ದರಿಂದ ಪತ್ರಕರ್ತರು ಸತ್ಯಾಂಶದ ಪರವಾಗಿ ನಿಲ್ಲಬೇಕು ಪತ್ರಿಕೋದ್ಯಮ ಬಲಶಾಲಿಯಾಗಬೇಕು ಪತ್ರಕರ್ತರು ಅಧ್ಯಯನಶೀಲರಾಗಬೇಕು ಎಂದು ತಿಳಿಸಿದರು.
ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದೇವರು ಮಾತನಾಡಿ ಕಲ್ಯಾಣ ಕರ್ನಾಟಕ ಭಾಗದ ಧ್ವನಿಯಾಗಿ ನಿಂತಿರುವ ದೇವಯ್ಯ ಗುತ್ತೆದಾರ ಅವರ ಕಾರ್ಯ ವೈಖರಿ ಅನೇಕ ಜ್ವಲಂತ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಈ ಭಾಗದ ಧ್ವನಿಯಾಗಿದ್ದಾರೆ, ಅವರಿಗೆ ಡಾ.ಬಸವಲಿಂಗಪಟ್ಟದೇವರ ಅಮೃತ ಮಹೋತ್ಸವ ನಿಮಿತ್ತ ಕನ್ನಡ ಜಂಗಮ ಪ್ರಶಸ್ತಿ ನೀಡುತ್ತಿರುವುದು ಸಂತಸದ ಸಂಗತಿ, ಈ ಗಡಿ ಭಾಗದಲ್ಲಿ ಕನ್ನಡ ಉಳಿಸಿ ಬೆಳೆಸಿದ ಕೀರ್ತಿ ಪೂಜ್ಯ ಡಾ.ಚನ್ನಬಸವ ಪಟ್ಟದೇವರಿಗೆ ಸಲ್ಲುತ್ತದೆ. ಅದರಂತೆ ಈ ಭಾಗದಲ್ಲಿ ಕನ್ನಡ ಬೆಳೆಸಿ ಉಳಿಸುವ ಕಾರ್ಯ ಪತ್ರಿಕಾ ಮಾದ್ಯಮ ಮಾಡುತ್ತಿದೆ ಎಂದು ತಿಳಿಸಿದರು.
ಮಾಜಿ ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ಅವರು ಮಾತನಾಡಿ ಔರಾದ ಮೇಲೆ ನನಗೆ ವಿಶೇಷ ಕಾಳಜಿ ಇದೆ ಯಾಕೆಂದರೆ ನನಗೆ ರಾಜಕೀಯ ಆಸಕ್ತಿ ಹುಟ್ಟಿದ್ದು ಇದೆ ಔರಾದ ನಿಂದಲೇ ಇಲ್ಲಿನ ಜನರ ಪ್ರೀತಿ ನನ್ನನ್ನು ಎಂಎಲ್ಸಿ ಆಗಲು ಕಾರಣವಾಯಿತು. ಜನಪ್ರತಿನಿಧಿಗಳೆ ಆಗಲಿ ಅಧಿಕಾರಿಗಳೇ ಆಗಲಿ ಜನ ಸಂಪರ್ಕ ಹೊಂದಿರಬೇಕು ಜನ ಸಂಪರ್ಕ ಇಲ್ಲದೆ ಇದ್ದಲ್ಲಿ ಅಧಿಕಾರ ಇದ್ದರು ಸಹ ವ್ಯರ್ಥ ಇಲ್ಲಿನ ಜನರ ಮೇಲೆ ಇರುವ ಪ್ರೀತಿ ಸದಾ ಜೀವಂತವಾಗಿರುತ್ತದೆ. ಇಲ್ಲಿನ ಪತ್ರಕರ್ತ ಮಿತ್ರರು ಸಮಾಜಕ್ಕೆ ನಿಖರತೆಯ ಸುದ್ದಿಗಳನ್ನು ನೀಡುತ್ತಾ ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಡಿಕೆ ಗಣಪತಿ, ತಹಸೀಲ್ದಾರ ಮಹೇಶ ಪಾಟೀಲ, ತಾಲೂಕು ಅಧ್ಯಕ್ಷ ಶಿವಾನಂದ ಮುಕ್ತೆದಾರ ಮಾತನಾಡಿದರು. ಈ ವೇಳೆ ಪತ್ರಕರ್ತ ಮಿತ್ರರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪಪಂ ಅಧ್ಯಕ್ಷೆ ಸರುಬಾಯಿ ಘುಳೆ, ತಾಪಂ ಇಒ ಶಿವಕುಮಾರ ಘಾಟೆ, ಪ್ರಥ್ವಿರಾಜ, ವಿಜಯಕುಮಾರ ಬೆಲ್ದೆ, ಸುನೀಲ ಜಿರೋಬೆ, ಪತ್ರಕರ್ತರಾದ ಅನಿಲ ದೇಶಮುಖ, ಮಲ್ಲಪ್ಪಗೌಡ, ಚನ್ನಬಸವ ಮುಕ್ತೆದಾರ, ಬಾಲಾಜಿ ಕುಂಬಾರ, ಶಿವಕುಮಾರ ಸಾದುರೆ ಸೇರಿದಂತೆ ಅನೇಕರಿದ್ದರು. ಮನ್ಮಥಪ್ಪ ಸ್ವಾಮಿ ಸ್ವಾಗತಿಸಿದರು, ರಿಯಾಜಪಾಶಾ ಕೊಳ್ಳುರ, ಅಮರಸ್ವಾಮಿ ಸ್ಥಾವರಮಠ ನಿರೂಪಿಸಿದರು.
ದೇವಯ್ಯ ಗುತ್ತೆದಾರಗೆ ಕನ್ನಡ ಜಂಗಮ ಪ್ರಶಸ್ತಿ ಪ್ರದಾನ
ತಾಪಂ ಸಭಾಂಗಣದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಡೆದ ಪತ್ರಿಕಾ ದಿನಾಚರಣೆಯಲ್ಲಿ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ನಾಡೋಜ ಡಾ.ಬಸವಲಿಂಗಪಟ್ಟದೇವರ ಅಮೃತ(75ನೇ ಜನ್ಮದಿನ) ಮಹೋತ್ಸವ ಅಂಗವಾಗಿ ಎರಡುವರೆ ದಶಕಗಳಿಂದ ಪತ್ರಿಕಾ ರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ದೇವಯ್ಯ ಗುತ್ತೆದಾರ ಅವರಿಗೆ ರಾಜ್ಯ ಮಟ್ಟದ “ಕನ್ನಡ ಜಂಗಮ” ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.























