
ಚಿತ್ತಾಪುರ:ಜೂ.೧: ತಾಲೂಕಿನಾದ್ಯಂತ ಇರುವ ರೈತರಿಗೆ ಅವಶ್ಯಕವಾಗಿರುವ ರಸಗೊಬ್ಬರದ ಕೊರತೆಯನ್ನು ಅತಿ ಬೇಗನೆ ನೀಗಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆಯ ತಾಲೂಕ ಅಧ್ಯಕ್ಷ ರ ಜಕುಮಾರ ಯರಗೋಳ ಆಗ್ರಹಿಸಿದ್ದಾರೆ.
ರೈತಾಪಿ ಜನರಿಗೆ ಮುಂಗಾರು ಬಿತ್ತನೆಗಾಗಿ ಈಗಾಗಲೇ ತಾಲೂಕಿನಾದ್ಯಂತ ಉತ್ತಮ ಮಳೆಯಾಗಿ ಭೂಮಿಯು ಹದವಾಗಿದ್ದು ಬಿತ್ತನೆಗೆ ಸಿದ್ದತೆ ನಡೆಸುತ್ತಿದ್ದಾರೆ,ರೈತರಿಗೆ ಸರಿಯಾದ ಸಮಯಕ್ಕೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ವಿತರಣೆ ಮಾಡುವುದು ಅವಶ್ಯಕವಾಗಿದ್ದು ಬೀಜ ಮತ್ತು ರಸಗೊಬ್ಬರ ಕೊರತೆ ಎದ್ದು ಕಾಣುತ್ತಿದ್ದು ರೈತರು ಕಂಗಾಲಾಗಿದ್ದಾರೆ ಇದನ್ನು ಅಧಿಕಾರಿಗಳು ಗಂಭೀರ ಪರಿಗಣಿಸಿ ರೈತರ ಸಮಸ್ಯೆಯನ್ನು ಅತಿ ಬೇಗನೆ ಪರಿಹರಿಸಬೇಕು ಎಂದು ಆಗ್ರಹಿಸಿದ್ದಾರೆ.
ಕಲಬುರ್ಗಿ ಜಿಲ್ಲೆಯಲ್ಲಿ ತೊಗರಿ,ಹೆಸರು,ಉದ್ದು,ಕಡಲೆ,ಜೋಳ ವನ್ನು ಹೆಚ್ಚಾಗಿ ಬೆಳೆಯುತ್ತಾರೆ,ಮುಂಗಾರು ಪ್ರಾರಂಭ ಆದಾಗಿನಿಂದಲೆ ರೈತರು ಹೆಸರು ಕಾಳು ಮತ್ತು ಉದ್ದು ಬಿತ್ತನೆಗೆ ಪೂರಕವಾಗಿಯೇ ಸಿದ್ದತೆ ನಡೆಸಿದ್ದು ಅತಿ ಬೇಗನೆ ಬೀಜ ಮತ್ತು ರಸಗೊಬ್ಬರ ವಿತರಣೆ ಮಾಡಬೇಕು.
ಅಲ್ಲದೆ ರೈತರ ಅನೂಕೂಲಕ್ಕಾಗಿ ಕಡಿಮೆ ದರದಲ್ಲಿ ಸಿಗುವ ಬಿತ್ತನೆ ಬೀಜ ಮತ್ತು ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ಕೆಲ ಅಂಗಡಿಯವರು ದುಪ್ಪಟ್ಟು ದರಕ್ಕೆ ಕಾಳಸಂತೆಯಲ್ಲಿ ಮಾರಾಟಮಾಡಿ ರೈತರ ಜೇಬಿಗೆ ಕತ್ತರಿ ಹಾಕುತ್ತಿದ್ದು ಅಧಿಕಾರಿಗಳು ಇಂಥವರನ್ನು ಪತ್ತೆಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.