ಮಾಲೂರು,ಆ.೧- ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿರುವ ಪದಾಧಿಕಾರಿಗಳು ಬಹಳಷ್ಟು ಮಂದಿ ಬಡವರಾಗಿದ್ದರೂ ಸಹ ವೃತ್ತಿಗೆ ಅವಮಾನ ಮಾಡದೇ ಯಾರ ಬಳಿ ಹಣಕ್ಕಾಗಿ ಕೈಚಾಚದೆ ಬಹಳ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.
ನಗರದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ, ಜಿಲ್ಲಾಮಟ್ಟದ ಪ್ರಶಸ್ತ್ರಿ ಪುರಸ್ಕೃತರಿಗೆ ಅಭಿನಂದನೆ ಕಾರ್ಯಕ್ರಮವನ್ನು ಉದ್ಟಾಟಿಸಿ ಮಾತನಾಡಿದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿರುವ ಪದಾಧಿಕಾರಿಗಳು ಬಹಳಷ್ಟು ಮಂದಿ ಬಡವರಾಗಿದ್ದರೂ ಸಹ ವೃತ್ತಿಗೆ ಅವಮಾನ ಮಾಡದೇ ಯಾರ ಬಳಿ ಹಣಕ್ಕಾಗಿ ಕೈಚಾಚದೆ ಬಹಳ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಿಮ್ಮ ಬಗ್ಗೆ ಮಾತನಾಡಲು ಸಾದ್ಯವಿಲ್ಲ. ಈ ಬಗ್ಗೆ ಹಲವು ಗಣ್ಯರು ಮಾತನಾಡಿದ್ದಾರೆ. ನನ್ನ ಬಗ್ಗೆಯೇ ಸುದ್ದಿಯನ್ನು ಮಾಡಿ ಎಂದೂ ಎಲ್ಲಿಯೂ ಹೇಳಿಲ್ಲ. ನಾನು ತಪ್ಪು ಮಾಡಿದ್ದರೆ ಅದನ್ನು ಖಂಡಿಸಿ ಸುದ್ದಿ ಪ್ರಕಟ ಮಾಡಿದ್ದೀರಿ. ನಾನು ಹಲವು ವಿಷಯಗಳ ಬಗ್ಗೆ ಪತ್ರಕರ್ತರ ಬಳಿ ಕೇಳಿ ಮಾತನಾಡುತ್ತೇನೆ. ನಾವು ಮಾಡುವಂತಹ ಕಾರ್ಯಗಳೇ ನಮ್ಮನ್ನು ಉಳಿಸುತ್ತದೆ. ಈ ನಿಟ್ಟಿನಲ್ಲಿ ನಾನು ಕಾರ್ಯನಿರ್ವಹಿಸುತ್ತಿದ್ದೇನೆ. ಯಾವುದೇ ಕಾರ್ಯ ಮಾಡಲು ಸಮಯ ಹಿಡಿಯುತ್ತದೆ. ಇದಕ್ಕೆ ಬೇಸರ ಪಟ್ಟುಕೊಳ್ಳಬಾರದು. ತಾಳ್ಮೇ, ಪ್ರಯತ್ನ, ನಂಬಿಕೆ ಇದ್ದರೆ ಜೀವನದಲ್ಲಿ ಏನಾದರೂ ಸಾಧನೆ ಮಾಡಬಹುದು. ನಾನು ಸಹ ಕೆಳಹಂತದಿಂದ ಈ ಹಂತಕ್ಕೆ ಬಂದಿದ್ದೇನೆ ಎಂದರು.

ನಗರದ ಅರಳೇರಿ ಮುಖ್ಯ ರಸ್ತೆಯಲ್ಲಿ ನಗರಸಭೆಗೆ ಸೇರಿದ ಒಳ್ಳೆಯ ನಿವೇಶನವನ್ನು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನೀಡಲಾಗಿದೆ. ಸಂಘದಿಂದ ೪ ಲಕ್ಷಕ್ಕೂ ಹೆಚ್ಚಿನ ಮೊತ್ತವನ್ನು ನೀಡಿದ್ದಾರೆ. ಇನ್ನೂ ೯ ಲಕ್ಷ ಹಣ ಫಾವತಿಸಿ ಖಾತೆ ಮಾಡಿಸಿಕೊಳ್ಳಬೇಕು. ಈ ಬಗ್ಗೆ ಸಂಘದ ಪದಾಧಿಕಾರಿಗಳೊಂದಿಗೆ ಕುಳಿತು ಚರ್ಚೆ ಮಾಡಿ ನಂತರ ಖಾತೆ ಮಾಡಿಸಲಾಗುವುದು. ನಿವೇಶನದಲ್ಲಿ ಬಿಲ್ಡಿಂಗ್ ಕಟ್ಟಿಸುವುದು ಸುಲಭ, ಈಗಾಗಲೇ ನಿವೇಶನದಲ್ಲಿ ಪೂಜೆಯನ್ನು ಸಲ್ಲಿಸಲಾಗಿದೆ. ಹಲವು ಕಾರಣಗಳಿಂದ ಖಾತೆ ನಿಂತಿದೆ. ಬಿಲ್ಡಿಂಗ್ ಹೇಗೆ ಕಟ್ಟುವುದು ಎನ್ನುವುದನ್ನು ನಂತರ ತೀರ್ಮಾನಿಸಲಾಗುವುದು. ಕೋಲಾರ ನಗರದಲ್ಲಿ ಪತ್ರಕರ್ತರ ಭವನವು ಇಡೀ ರಾಜ್ಯದಲ್ಲಿಯೇ ಮಾದರಿಯಾಗಿದೆ. ಅದರಂತೆ ಇಲ್ಲಿಯೂ ಕಟ್ಟಡವನ್ನು ನಿರ್ಮಿಸಲಾಗುವುದು. ಇಲ್ಲಿಯೂ ನನ್ನ ಅವಧಿಯಲ್ಲಿಯೇ ಎಲ್ಲರ ಸಹಕಾರದಿಂದ ಸುಸಜ್ಜಿತವಾಗಿ ಭವನವನ್ನು ನಿರ್ಮಿಸಲಾಗುವುದು. ನಗರದಲ್ಲಿ ಈಗಾಗಲೇ ಗುರುಭವನವನ್ನು ೫ ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿದ್ದು, ಇನ್ನೇನು ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಈ ಹಿನ್ನಲೆಯಲ್ಲಿ ಪತ್ರಕರ್ತರಿಗೂ ದಾನಿಗಳ ನೆರವಿನಿಂದ ಕಟ್ಟಡವನ್ನು ನಿರ್ಮಿಸಲಾಗುವುದು ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ, ಪತ್ರಕರ್ತರು ಗ್ರಾಮಗಳ ಹಿತರಕ್ಷಣೆ ಮಡುವ ಕೆಲಸ ಮಾಡಬೇಕು. ಅದನ್ನು ಬಿಟ್ಟು ನಾವೇ ಸಮಾಜಕ್ಕೆ ಕಸವಾಗಬಾರದು. ಸಾರ್ವಜನಿಕರು ಪತ್ರಕರ್ತರ ಬಗ್ಗೆ ಗೌರವವನ್ನು ಸಿಗುವ ರೀತಿಯಲ್ಲಿ ನಡೆದುಕೊಳ್ಳಬೇಕು. ಹಣ ಪಡೆದು ಸುದ್ದಿ ಮಾಡುವವರಿಗಿಂತ ದೇವಾಲಯದ ಸಮೀಪ ಭಕ್ತರಿಂದ ಹಣ ಪಡೆಯುವವರಂತಾಗಬಾರದು. ಜಾಗತೀಕರಣದ ಪ್ರಭಾವದಿಂದ ಹಣದಿಂದಲೇ ಎಲ್ಲವನ್ನು ಅಲೆಯಬಾರದು. ಪತ್ರಕರ್ತರು ಸ್ವಲ್ಪಮಟ್ಟಿಗಾದರೂ ಮೌಲ್ಯಗಳನ್ನು ಹೊಂದಿರಬೇಕು. ಹಣವನ್ನು ಸಂಪಾದನೆ ಮಾಡಲು ಹಲವು ಮಾರ್ಗಗಳಿವೆ. ಪೆನ್ನನ್ನು ಅಡಹಿಟ್ಟು ಹಣ ಸಂಪಾದನೆ ಮಾಡಬೇಕು ಎನ್ನುವ ಸಂಸ್ಕೃತಿಗೆ ಮಾರುಹೋಗಬಾರದು. ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗದವರು ಬೆಲೆಕೊಡುವಂತಹ ಮಟ್ಟದಲ್ಲಿ ಮುನ್ನಡೆಯಬೇಕು ಎಂದರು.
ಕಾರ್ಯಕ್ರಮವನ್ನು ಕುರಿತು ತಹಸೀಲ್ಥಾರ್ ಎಂ.ವಿ.ರೂಪ, ನಗರಸಭೆ ಅಧ್ಯಕ್ಷೆ ವಿಜಯಲಕ್ಷ್ಮೀ ಲಕ್ಷ್ಮೀನಾರಾಯಣ್, ಮುಖ್ಯಾಧಿಕಾರಿ ಪ್ರದೀಪ್ ಕುಮಾರ್, ತಾಪಂ ಇಒ ಎಂ.ಕೃಷ್ಣಪ್ಪ, ತಾಪಂ ಮಾಜಿ ಅಧ್ಯಕ್ಷ ಸಂಪಂಗೆರೆ ವಿ.ಮುನಿರಾಜ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಜಿಲ್ಲಾಮಟ್ಟದ ಪ್ರಶಸ್ತ್ರಿ ಪುರಸ್ಕೃತರಾದ ರವೀಂದ್ರ ಅವರನ್ನು ಅಭಿನಂದಿಸಲಾಯಿತು. ಸಂಘದ ವತಿಯಿಂದ ಶಾಸಕ ಕೆ.ವೈ.ನಂಜೇಗೌಡ ಹಾಗೂ ಅಧಿಕಾರಿಗಳು, ಗಣ್ಯರನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎ.ರಾಜಪ್ಪ, ಮಾಜಿ ಸದಸ್ಯ ಹನುಮಂತರೆಡ್ಡಿ, ಪೊಲೀಸ್ ಇನ್ಸ್‌ಪೆಕ್ಟರ್ ವಸಂತ್, ಜಿಲ್ಲಾ ಸಂಘದ ಖಜಾಂಚಿ ಎ.ಜಿ.ಸುರೇಶ್, ಜಿಲ್ಲಾ ಸಂಘದ ಉಪಾಧ್ಯಕ್ಷ ಎಸ್.ಲಕ್ಷ್ಮೀಶ್, ಕಾರ್‍ಯದರ್ಶಿ ರವಿಕುಮಾರ್, ತಾ.ಅಧ್ಯಕ್ಷ ಡಿ.ಎಂ.ವಿಜಯ್ ಕುಮಾರ್, ಪ್ರ.ಕಾರ್‍ಯದರ್ಶಿ ಎಸ್.ನಾರಾಯಣಸ್ವಾಮಿ, ಉಪಾಧ್ಯಕ್ಷ ಟಿ.ಕೆ.ನಾಗರಾಜ್, ಖಜಾಂಚಿ ಮಾರುತೇಶ್ ಕುಮಾರ್, ಸಂಘರ್ಷ, ಜಿಲ್ಲಾ ಸಂಘದ ಸದಸ್ಯರಾದ ರಾಜೇಂದ್ರ ವೈಧ್ಯ, ಜಿ.ಮಂಜುನಾಥ್ ಗೌಡ, ಸದಸ್ಯರಾದ ಪವನ್ ರಮೇಶ್, ಡಿ.ಎನ್.ಕೆಂಪರತ್ನಂ, ವಿ.ಶ್ರೀನಿವಾಸ್, ಮಾಸ್ತಿ ಮೂರ್ತಿ, ಕೆ.ಆರ್.ಚಂದ್ರಶೇಖರ್, ಸಿ.ಎಂ.ನಾರಾಯಣಸ್ವಮಿ, ಸಾ.ಪು.ಮಲ್ಲಿಕಾರ್ಜುನ್, ವಿ.ರಾಜಗೋಪಾಲ್, ಕೋಟೆ ಮುನಿರಾಜ್, ಲಕ್ಷ್ಮಣ್ ಯಾದವ್, ನಟರಾಜ್, ಸಂಚಿಕೆ ನಾರಾಯಣಪ್ಪ, ಮುನಿನಾರಾಯಣಪ್ಪ ಇನ್ನಿತರರು ಹಾಜರಿದ್ದರು.

































