Home ಜಿಲ್ಲೆ ಅರಣ್ಯ ಸಂಪತ್ತು ಉಳಿಸಿ, ಬೆಳೆಸಿ: ಸಚಿವ ರಾಮಲಿಂಗಾರೆಡ್ಡಿ

ಅರಣ್ಯ ಸಂಪತ್ತು ಉಳಿಸಿ, ಬೆಳೆಸಿ: ಸಚಿವ ರಾಮಲಿಂಗಾರೆಡ್ಡಿ

ವಿಜಯಪುರ, ಆ. 31: ಪ್ರಕೃತಿಯೇ ಜಗತ್ತಿನ ಜೀವನಾಡಿಯಾಗಿದ್ದು, ಅರಣ್ಯ ಸಂಪತ್ತನ್ನು ಸಂರಕ್ಷಿಸಿ, ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಇಂಡಿ ತಾಲೂಕಿನ ಸಾವಳಸಂಗದಲ್ಲಿ ಸಾಮಾಜಿಕ ಅರಣ್ಯ ವಿಭಾಗ ಹಾಗೂ ಇಂಡಿ ಸಾಮಾಜಿಕ ಅರಣ್ಯ ವಲಯದ ಸಹಯೋಗದಲ್ಲಿ ?2.50 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ವೃಕ್ಷೋದ್ಯಾನವನ್ನು ಭಾನುವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಸಾವಳಸಂಗದಲ್ಲಿ ಹಸಿರೀಕರಣಕ್ಕೆ ಆದ್ಯತೆ ನೀಡಿ ಸುಂದರವಾಗಿ ವೃಕ್ಷೋದ್ಯಾನ ನಿರ್ಮಿಸಿರುವ ಅರಣ್ಯ ಇಲಾಖೆಯ ಕಾರ್ಯವನ್ನು ಶ್ಲಾಘಿಸಿದ ಸಚಿವರು, ಮುಂದಿನ ದಿನಗಳಲ್ಲಿ ಇಂಡಿ ನಗರದಲ್ಲಿ ಟ್ರೀ ಪಾರ್ಕ್ ಹಾಗೂ ಕೃಷ್ಣಮೃಗ ಮೀಸಲು ಪ್ರದೇಶ ಅಭಿವೃದ್ಧಿಪಡಿಸಲು ಅರಣ್ಯ ಇಲಾಖೆಯಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ನಡೆದಾಡುವ ದೇವರು ಎಂದೇ ಖ್ಯಾತರಾದ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಹೆಸರನ್ನು ವೃಕ್ಷೋದ್ಯಾನಕ್ಕೆ ಇಟ್ಟಿರುವುದು ಅರ್ಥಪೂರ್ಣವಾಗಿದೆ. ಸರಳತೆ, ಜ್ಞಾನ ಹಾಗೂ ಪರಿಸರ ಪ್ರೀತಿಯ ಸಂದೇಶ ಸಾರಿದ ಸಿದ್ದೇಶ್ವರ ಶ್ರೀಗಳ ಆಶಯಕ್ಕೆ ಈ ವೃಕ್ಷೋದ್ಯಾನ ಪೂರಕವಾಗಿದೆ. ಸಾರ್ವಜನಿಕರು ಇಲ್ಲಿಗೆ ಭೇಟಿ ನೀಡುವ ಸಂದರ್ಭದಲ್ಲಿ ಸಸಿ ನೆಟ್ಟು, ಈ ತಾಣವನ್ನು ತಮ್ಮ ಸ್ವಂತ ಆಸ್ತಿಯಂತೆ ಭಾವಿಸಿ ಸಂರಕ್ಷಿಸಬೇಕು ಎಂದು ಕರೆ ನೀಡಿದರು.
ಅರಣ್ಯ ಇಲಾಖೆಯ ಸತತ ಪರಿಶ್ರಮದ ಜತೆಗೆ ತಮ್ಮಿಂದ ನೀಡಲಾದ ?90 ಲಕ್ಷ ಅನುದಾನ ಸೇರಿದಂತೆ ವಿವಿಧ ಮೂಲಗಳ ಸಹಕಾರದಿಂದ ವೃಕ್ಷೋದ್ಯಾನ ನಿರ್ಮಾಣಗೊಂಡಿದೆ. ಜಿಲ್ಲೆಯ ಅರಣ್ಯ ಪ್ರದೇಶವನ್ನು ಹೆಚ್ಚಿಸಲು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಸಿ ನೆಟ್ಟು ಹಸಿರೀಕರಣಕ್ಕೆ ಕೈಜೋಡಿಸಬೇಕು ಎಂದರು.

ನೀರಾವರಿ ಯೋಜನೆಗಳಿಂದ ರೈತರಿಗೆ ಅನುಕೂಲ

ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ನಿಸರ್ಗ ಪ್ರಿಯರಾಗಿದ್ದ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ತತ್ವಗಳು ಮುಂದಿನ ಪೀಳಿಗೆಗೆ ಸರಳತೆ, ಸ್ವಚ್ಛತೆ ಹಾಗೂ ನಿಷ್ಠೆಯ ಮಾರ್ಗದರ್ಶನ ನೀಡಲಿವೆ ಎಂದರು.
ಆಲಮಟ್ಟಿ ಜಲಾಶಯ ನಿರ್ಮಾಣಕ್ಕಾಗಿ ಭೂಮಿ ತ್ಯಾಗ ಮಾಡಿದವರ ಕೊಡುಗೆಯನ್ನು ಸ್ಮರಿಸಿದ ಅವರು, ಬರದಿಂದ ತತ್ತರಿಸಿದ್ದ ಇಂಡಿ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ನಿವಾರಣೆಗೆ ಹಲವು ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈಗಾಗಲೇ ಕ್ಷೇತ್ರದ 19 ಕೆರೆಗಳನ್ನು ತುಂಬಿಸಿರುವುದರಿಂದ ಅಂತರ್ಜಲ ಮಟ್ಟ ಹೆಚ್ಚಾಗಿ ರೈತರಿಗೆ ಅನುಕೂಲವಾಗಿದೆ ಎಂದು ಹೇಳಿದರು.
ಮಳೆ ಕೊರತೆಯಿಂದ ಬೆಳೆ ಕಳೆದುಕೊಂಡಿರುವ ರೈತರ ಹಿತದೃಷ್ಟಿಯಿಂದ ಇಂಡಿ ತಾಲೂಕನ್ನು ಬರಪೀಡಿತ ಎಂದು ಘೋಷಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಸಂಕಷ್ಟದಲ್ಲಿರುವ ರೈತರಿಗೆ ಶೀಘ್ರ ಪರಿಹಾರ ದೊರಕಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು. ಇಂಡಿ ಭಾಗದ ಕುಡಿಯುವ ನೀರಿನ ಸಮಸ್ಯೆಗೂ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದರು.

ಭೀಮಾ ತೀರವನ್ನು ‘ಭೀಮಾ ಸಿರಿ’ ಮಾಡುವ ಗುರಿ

ಇಂಡಿಯ ಲಿಂಬೆಗೆ ಜಿಐ ಟ್ಯಾಗ್ ದೊರೆತಿರುವುದರಿಂದ ಇಂದು ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದೆ. ಲಿಂಬೆ ಅಭಿವೃದ್ಧಿ ಮಂಡಳಿ ಸ್ಥಾಪನೆಗೂ ಶ್ರಮಿಸಲಾಗಿದ್ದು, ಭೀಮಾ ತೀರವನ್ನು ‘ಭೀಮಾ ಸಿರಿ’ಯಾಗಿ ರೂಪಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಈ ಕಾರ್ಯಕ್ಕೆ ಸರ್ಕಾರದ ಜತೆಗೆ ಸಾರ್ವಜನಿಕರ ಸಹಭಾಗಿತ್ವವೂ ಅಗತ್ಯ ಎಂದು ಯಶವಂತರಾಯಗೌಡ ಪಾಟೀಲ ಹೇಳಿದರು.
ಕ್ಷೇತ್ರದ ಸಮಗ್ರ ಅಭಿವೃದ್ಧಿ ಹಾಗೂ ರೈತರ ಸಂಕಷ್ಟಗಳಿಗೆ ಸ್ಪಂದಿಸಲು ಬದ್ಧವಾಗಿದ್ದು, ಮುಖ್ಯಮಂತ್ರಿ ಅವರೂ ಇಂಡಿ ಕ್ಷೇತ್ರದ ಸವಾರ್ಂಗೀಣ ಅಭಿವೃದ್ಧಿಗೆ ಭರವಸೆ ನೀಡಿದ್ದಾರೆ ಎಂದರು.
ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಮಹಾಸ್ವಾಮಿಗಳು ಹಾಗೂ ಅಮೃತಾನಂದ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಅಮೋಘ ಸಿದ್ದೇಶ್ವರ ಸ್ವಾಮೀಜಿ, ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಬಿ.ಎಸ್. ಕವಲಗಿ, ತಾಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷ ಪ್ರಶಾಂತ ಕಾಳೆ, ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ಡಿಸಿಎಫ್ ಸ್ವಪ್ನಿಲ್, ಡಿವೈಎಸ್ಪಿ ಸದಾಶಿವ ಕಟ್ಟಿಮನಿ, ಮಹಾದೇವಪ್ಪ ಏವೂರ, ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಲ್ಲಿನಾಥ ಕುಸನಾಳ, ಆರ್‍ಎಫ್‍ಒ ಶಿವರುದ್ರಪ್ಪ ಕಬಾಡಗಿ, ಎಂ.ಆರ್. ಪಾಟೀಲ ಸೇರಿದಂತೆ ವಿವಿಧ ಮಠಾಧೀಶರು, ಪರಿಸರ ಪ್ರೇಮಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.