
ಚಿಟಗುಪ್ಪ:ಫೆ.೨೧: ಚಿಟಗುಪ್ಪ ತಾಲ್ಲೂಕಿನ ೩ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸುವ ಉದ್ದೇಶದಿಂದ ಇಂದು ಪೂರ್ವ ಸಿದ್ಧತೆ ಸಭೆ ಜರುಗಿತು. ಸಭೆಯಲ್ಲಿ ವಿವಿಧ ಶಿಕ್ಷಣ, ಸಾಹಿತ್ಯ ಹಾಗೂ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿ ಸಮ್ಮೇಳನದ ಸಿದ್ಧತೆಗಳ ಕುರಿತು ಚರ್ಚಿಸಿದರು.
ಸಭೆಯನ್ನು ಉದ್ದೇಶಿಸಿ ಬಿ.ಇ.ಒ ವೆಂಕಟೇಶ ಗುಡಾಲ ಮಾತನಾಡಿ, ಸಾಹಿತ್ಯ ಸಮ್ಮೇಳನ ಅತ್ಯಂತ ಅದ್ದೂರಿಯಾಗಿ ನೆರವೇರಲು ಎಲ್ಲರ ಸಹಕಾರ ಅತ್ಯಾವಶ್ಯಕವಾಗಿದೆ ಎಂದರು. ಈ ಮಹತ್ವದ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರೂ ತನು-ಮನದಿಂದ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.
ಸಹಾಯಕ ನಿರ್ದೇಶಕ ಡಾ. ಗೋವಿಂದಪ್ಪ ಮಾತನಾಡಿ, ಗಡಿಭಾಗದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಅತ್ಯಂತ ಸಂತಸದ ಸಂಗತಿ ಎಂದು ಹೇಳಿದರು. ಬೆಳಿಗ್ಗೆಯಿಂದ ಸಂಜೆವರೆಗೆ ನಡೆಯುವ ಕಾರ್ಯಕ್ರಮಗಳಲ್ಲಿ ಎಲ್ಲರೂ ಸಕ್ರಿಯವಾಗಿ ಪಾಲ್ಗೊಂಡು ಸಮ್ಮೇಳನವನ್ನು ಯಶಸ್ವಿಗೊಳಿಸೋಣ ಎಂದು ಅವರು ಮನವಿ ಮಾಡಿದರು.
ಸಭೆಯಲ್ಲಿ ಸಮ್ಮೇಳನಾಧ್ಯಕ್ಷರಾದ ಮಾಣಿಕ ನೇಳಗಿ ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು. ಜೊತೆಗೆ ಕಸಾಪ ಅಧ್ಯಕ್ಷ ಅನೀಲಕುಮಾರ ಸಿಂಧೆ, ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ರಾಜಪ್ಪ ಜಮಾದಾರ, ಪ್ರೌಢ ಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಅಶೋಕ ಮಹೇಂದ್ರಕರ್, ರಮೇಶ ಸಲಗರ, ಮಹಾರುದ್ರಪ್ಪ ಆಣದೂರ, ನಾರಾಯಣರಾವ ಭಂಗಿ, ಕಿರಣ ಹಮೀಲಪೂರ್ಕರ, ಸಂತೋಷ ಹಂದಿಕೇರೆ, ಸತ್ಯನಾರಾಯಣ ಮಾಳಾ, ಮಹೇಶ ಸಿಂಗೆ, ರೇವಶೆಟ್ಟಿ ತಂಗಾ, ಪ್ರಭು ಕಂಚನಾಳ, ರಮೇಶ ಕ್ಯಾತಾ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು ಸೇರಿದಂತೆ ಹಲವರು ಭಾಗವಹಿಸಿದರು.
ಸಭೆಯಲ್ಲಿ ಸಮ್ಮೇಳನದ ಯಶಸ್ಸಿಗಾಗಿ ಅಗತ್ಯ ಪೂರ್ವ ಸಿದ್ಧತೆಗಳು, ವಿವಿಧ ಸಮಿತಿಗಳ ರಚನೆ ಹಾಗೂ ಕಾರ್ಯ ಹಂಚಿಕೆ ಕುರಿತಾಗಿ ಚರ್ಚೆ ನಡೆಯಿತು. ತಾಲೂಕು ಮಟ್ಟದಲ್ಲಿ ನಡೆಯಲಿರುವ ಈ ಸಾಹಿತ್ಯ ಸಮ್ಮೇಳನವನ್ನು ಭವ್ಯವಾಗಿ ನಡೆಸಲು ಎಲ್ಲರ ಸಹಕಾರ ಅಗತ್ಯವೆಂದು ಸಭೆಯಲ್ಲಿ ಒತ್ತಿಹೇಳಲಾಯಿತು



























