ನಾಳೆಯಿಂದ ದಸರಾ ಬೊಂಬೆ ಪ್ರದರ್ಶನಕ್ಕೆ ಸಿದ್ಧತೆ

ಕೋಲಾರ,ಸೆ.೨೧- ಸ್ವಾತಂತ್ರ ಹೋರಾಟಗಾರ ಹಾಗೂ ಪತ್ರಕರ್ತರಾಗಿದ್ದ ದಿ ಕೆ ಆರ್ ಕೃಷ್ಣಸ್ವಾಮಿ ಅವರ ಸ್ವಗೃಹದಲ್ಲಿ ಇದೇ ೨೨ನೇ ಸೆಪ್ಟೆಂಬರ್ ಸೋಮವಾರ ದಿಂದ ೮೨ನೇ ವರ್ಷದ ದಸರಾ ಬೊಂಬೆ ಪ್ರದರ್ಶನಕ್ಕೆ ಭರದಿಂದ ಸಿದ್ಧತೆಗಳು ಆರಂಭವಾಗಿದ್ದು, ದಶಕಗಳ ಹಿಂದಿನ ಹಳೆಯ ಕಾಲದ ಮಣ್ಣಿನ, ಪಿಂಗಾಣಿ ಮತ್ತು ಇತರೆ ನೂರಾರು ಗೊಂಬೆಗಳು ಪ್ರದರ್ಶನಕ್ಕೆ ಇಡಲಾಗುತ್ತದೆ.


ಕೃಷ್ಣಸ್ವಾಮಿ ಅವರ ಧರ್ಮಪತ್ನಿ ಶ್ರೀಮತಿ ರತ್ನಮ್ಮ ನವರು ತಮ್ಮ ಮದುವೆಯಾದ ನಂತರ ೮೨ ವರ್ಷದ ಹಿಂದೆ ಪ್ರಾರಂಭ ಮಾಡಿರುವ ಗೊಂಬೆ ಕೂರಿಸುವ ಸಂಪ್ರದಾಯವು ಕುಟುಂಬಸ್ಥರು ಇಂದಿಗೂ ಮುಂದುವರೆಸಿದ್ದು ಸುಮಾರು ಹದಿನೆಂಟು ಅಡಿ ಅಗಲದ ಹತ್ತು ಅಂತಸ್ತಿನ ಮರದ ಮೆಟ್ಟಿಲುಗಳ ಮೇಲೆ ಗೊಂಬೆ ಕೂರಿಸುವ ಪದ್ಧತಿ ಇದ್ದು ಪಾಡ್ಯಮಿ ಅಂದರೆ ನವರಾತ್ರಿ ಹಬ್ಬದ ಪ್ರಥಮ ದಿನದಿಂದ ಕಳಸ ಪೂಜೆ ಮೂಲಕ ಪ್ರಾರಂಭವಾಗುವ ನವರಾತ್ರಿಯ ಹತ್ತೂ ದಿನ ದಿನಂಪ್ರತಿ ಪೂಜೆ, ನೈವೇದ್ಯ ಇತರೆ ಸಂಪ್ರದಾಯಗಳನ್ನು ಪರಿಪಾಲಿಸಿಕೊಂಡು ಬಂದಿದ್ದು ದಸರಾ ಹಬ್ಬವನ್ನು ವಿಶೇಷವಾಗಿ ಕುಟುಂಬದ ಸದಸ್ಯರು ಆಚರಿಸಿಕೊಂಡು ಬಂದಿದ್ದಾರೆ.


ರಾಮಾಯಣ, ಮಹಾಭಾರತ ಮಹಾಕಾವ್ಯಗಳ ಹಲವಾರು ಪ್ರಸಂಗಗಳ ಗೊಂಬೆಗಳು ಇವರ ಸಂಗ್ರಹದಲ್ಲಿ ಇದ್ದು ಸುಮಾರು ನೂರ ಇಪ್ಪತ್ತು ವರ್ಷ ಹಳೆಯದಾದ ಎರಡೂವರೆ ಅಡಿ ಎತ್ತರದ ಜೇಡಿ ಮಣ್ಣಿನ ಕೃಷ್ಣನ ಗೊಂಬೆ, ೮೨ ವರ್ಷದ ರಾಮ ಸೀತಾ ಗೊಂಬೆಗಳು, ರಾಮ ಪಟ್ಟಾಭಿಷೇಕ, ಶ್ರೀವಳ್ಳಿ, ದಶಾವತಾರದ ಮಣ್ಣಿನ ಬೊಂಬೆಗಳು, ಸುಮಾರು ಅರವತ್ತು ವರ್ಷದ ಪಿಂಗಾಣಿ ಬೊಂಬೆಗಳು ಆಕರ್ಷಣೀಯವಾಗಿದೆ.


ಅಯ್ಯಂಗಾರ್ ಸಂಪ್ರದಾಯದಂತೆ ಮದುವೆ ಸಮಯದಲ್ಲಿ ಕೊಡ ಮಾಡುವ ಮರದಿಂದ ತಯಾರಿಸಲಾಗಿರುವ ಪಟ್ಟದ ಗೊಂಬೆಗೆ ಕೂಡ ಪ್ರತಿ ದಿನ ಪೂಜೆ ಸಲ್ಲಿಸಲಾಗುತ್ತದೆ. ಕೆ ಆರ್ ಕೆ ಕುಟುಂಬದ ಸೊಸೆ ಶ್ರೀಮತಿ ವಾಣಿ ರಂಗನಾಥ್ ಅವರ ಅಜ್ಜಿಯ ಮದುವೆ ಸಮಯದಲ್ಲಿ ನೀಡಿದ್ದ ಪಟ್ಟದ ಗೊಂಬೆ ಸುಮಾರು ನೂರು ವರ್ಷ ಹಳೆಯದಾಗಿದ್ದು, ನೋಡಲು ಆಕರ್ಷಕವಾಗಿದೆ.


ಇತ್ತೀಚಿನ ಆಧುನಿಕ ಪೇಪರ್ ಮ್ಯಾಚಯಿಂದ ಮಾಡಿರುವ ಗಾರುಡಿ ಗೊಂಬೆ, ಕೀಲು ಕುದುರೆ, ಬೊಂಬೆಗಳು ಕೂಡ ಇವರ ಸಂಗ್ರಹದಲ್ಲಿ ಇದ್ದು ಪ್ರತಿ ವರ್ಷ ಹೊಸ ಹೊಸ ಬೊಂಬೆಗಳನ್ನು ಖರೀದಿ ಮಾಡುವ ಮೂಲಕ ಬೊಂಬೆ ಸಂಗ್ರಹವನ್ನು ಹೆಚ್ಚು ಮಾಡುತ್ತಿದ್ದಾರೆ. ಈ ವರ್ಷದ ಹೊಸ ಬೊಂಬೆಗಳ ಖರೀದಿ ಮುಗಿದಿದ್ದು ತಿರುಪತಿ ಬ್ರಹ್ಮೋತ್ಸವದ ಬೊಂಬೆಗಳು, ಗೀತೋಪದೇಶ, ಪೂತನಿ, ಮಹಿಷಾಸುರ ಮುಂತಾದ ಹೊಸ ಬೊಂಬೆಗಳ ಪ್ರದರ್ಶನಕ್ಕೆ ಸಿದ್ಧವಾಗಿವೆ.


ಇಂದಿನ ಜನಾಂಗಕ್ಕೆ ನಮ್ಮ ಹಿಂದೂ ಸಂಸ್ಕೃತಿಯ ಪರಿಚಯ ಮಾಡಿಕೊಡುವ ಹಾಗೂ ಧಾರ್ಮಿಕ ಹಬ್ಬಗಳ ವಿಶೇಷವನ್ನು ತಿಳಿ ಹೇಳುವ ಉದ್ದೇಶದಿಂದ ಹತ್ತೂ ದಿನ ಕಾಲ ಹಬ್ಬವನ್ನು ಆಚರಿಸಿ ನೆರೆ ಹೊರೆಯವರನ್ನು ಮನೆಗೆ ಆಮಂತ್ರಿಸುವ ಮೂಲಕ ಉತ್ತಮ ಬಾಂಧವ್ಯ ಬೆಳೆಸಲು ನೆರವಾಗುವುದು ಎಂದು ಕೃಷ್ಣ ಸ್ವಾಮಿ ಅವರ ಮೊಮ್ಮಗಳು ದೀಪ್ತಿ ತಿಳಿಸಿದ್ದಾರೆ.