
ರಬಕವಿ-ಬನಹಟ್ಟಿ,ಜ15: ದೇಶದ ಜನರಲ್ಲಿ ರಾಷ್ಟ್ರಾಭಿಮಾನವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ರಾಷ್ಟ್ರೀಯ ಹಬ್ಬಗಳಲ್ಲಿ ಕಡ್ಡಾಯವಾಗಿ, ಸ್ವಯಃ ಪ್ರೇರಣೆಯಿಂದ ಭಾಗವಹಿಸಬೇಕು ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.
ಅವರು ರಬಕವಿ-ಬನಹಟ್ಟಿ ತಹಶೀಲ್ದಾರ್ ಕಾರ್ಯಾಲಯದಲ್ಲಿ ಗಣರಾಜ್ಯೋತ್ಸವ ನಿಮಿತ್ತವಾಗಿ ಹಮ್ಮಿಕೊಂಡ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಗಣರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುವುದು. ಆ ನಿಟ್ಟಿನಲ್ಲಿ ತಾಲೂಕಿನಾದ್ಯಂತ ಎಲ್ಲ ಕಛೇರಿಗಳಲ್ಲಿ ರಾಷ್ಟ್ರೀಯ ಹಬ್ಬವನ್ನು ಸಂಭ್ರಮದಿಂದ ಆರಿಸಬೇಕು. ಈ ಸಲ ಗಣರಾಜ್ಯೋತ್ಸವವನ್ನು ರಬಕವಿಯ ರಾಮಪ್ಪ ಚಿಕ್ಕೋಡಿ ಕ್ರೀಡಾಂಗಣದಲ್ಲಿ ಮುಂಜಾನೆ 9ಕ್ಕೆ ಆಚರಿಸಲಾಗುವುದು ಆ ನಿಟ್ಟಿನಲ್ಲಿ ಎಲ್ಲ ಸರಕಾರಿ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ತಹಶೀಲ್ದಾರ್ ಗಿರೀಶ ಸ್ವಾದಿ ಮಾತನಾಡಿ, ಶಿಸ್ತು ಬದ್ಧವಾದ ಕಾರ್ಯಕ್ರಮಕ್ಕೆ ಪ್ರತಿಯೊಬ್ಬರ ಸಹಾಯ ಸಹಕಾರ ಅಗತ್ಯವಾಗಿದೆ. ತಾಲೂಕಿನ ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ಯಾವುದೇ ನೆಪ ಹೇಳದೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಪ್ಲಾಸ್ಟಿಕ್ ಧ್ವಜ್ ನಿಷೇಧಿಸಲಾಗಿದ್ದು, ಪ್ಲಾಸ್ಟಿಕ್ ಧ್ವಜ ಮಾರಾಟ ಮಾಡುವುದು ಕಂಡು ಬಂದಲ್ಲಿ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಸಭೆಯಲ್ಲಿ ರಬಕವಿಬನಹಟ್ಟಿ ತಾ. ಪಂ. ಇಓ ಸಿದ್ದಪ್ಪ ಪಟಿಹಾಳ, ಶಿರಸ್ತೆದಾರ ಆರ್. ಎಸ್. ಸಾತಿಹಾಳ, ಜಮಖಂಡಿ ಕ್ಷೇತ್ರ ಶಿಕ್ಷಣಾಧಿಕಾರಿ ಎ. ಕೆ. ಬಸಣ್ಣವರ, ಜಿಎಲ್‍ಬಿಸಿಯ ಶ್ರೀಧರ ನಂದ್ಯಾಳ, ಬನಹಟ್ಟಿ ಪೆÇಲೀಸ್ ಠಾಣೆಯ ಪಿಎಸ್‍ಐ ಶಾಂತಾ ಹಳ್ಳಿ, ಬಿ. ಆರ್. ಗೊಡ್ಡಾಳೆ, ಬಿ. ಎಂ. ಹಳೇಮನಿ, ಬಿ. ಜೆ. ಜೋರಾಪುರ, ಚಿದಾನಂದ ಸೊಲ್ಲಾಪೂರ, ಶಿವು ಕೊಕಟನೂರ, ಮಹಾಂತೇಶ ಮುರಗೋಡ, ಪ್ರಕಾಶ ಕೊಣ್ಣೂರ, ಸಂತೋಷ ಬಡ್ಡಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಮುಖಂಡರು ಇದ್ದರು.
























