
ಕಲಬುರಗಿ,ಸೆ.5 : ಜನ ಸೇವೆಯೇ ಜನಾರ್ದನ ಸೇವೆ ಎಂಬ ತತ್ವವನ್ನು ನಂಬಿರುವ ನಮ್ಮ ಸರ್ಕಾರ ರಾಜ್ಯದಲ್ಲಿ ಜನತೆಯ ಅಹವಾಲುಗಳನ್ನು ಆಲಿಸಿ ಮನೆ ಬಾಗಿಲಿನಲ್ಲಿಯೇ ಸಮಸ್ಯೆಗಳಿಗೆ ಪರಿಹಾರ ನೀಡಲು ಹೊಸದಾಗಿ ಪ್ರಜಾ ಸೇವೆ ಅಭಿಯಾನ ಕೈಗೊಂಡಿದ್ದೇವೆ. ಇದು ಆಳುವ ಸರ್ಕಸರವಲ್ಲ, ಜನರ ಸಮಸ್ಯೆ ಆಲಿಸುವ ಸರ್ಕಾರ ಎಂದು ರಾಜ್ಯದ ಗೃಹ, ಐ.ಟಿ-ಬಿ.ಟಿ, ಇ-ಆಡಳಿತ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಶನಿವಾರ ಜಿಲ್ಲೆಯ ಕಮಲಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಪ್ರಜಾ ಸೇವೆ ಅಭುಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು. ಪ್ರಜೆಗಳ ಸೇವೆಯೇ ನಮ್ಮ ಮೊದಲ ಆದ್ಯತೆಯಾಗಿದ್ದು, ಇದಕ್ಕಾಗಿಯೆ ನಿಮ್ಮ ಸೇವೆ ಮಾಡಲು ನಿಮ್ಮ ಬಾಗಿಲಿಗೆ ಬಂದಿದ್ದೇವೆ ಎಂದರು.
ಹಿಂದೆ ಜನಸ್ಪಂದನ ಮೂಲಕವು ಸಹ ಸಾರ್ವಜನಿಕರ ಸಮಸ್ಯೆ ಅಲಿಸಲಾಗುತ್ತಿತ್ತು. ಆದರೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಜನರ ಅಹವಾಲು ಕಾಲಮಿತಿಯಲ್ಲಿ ಖಾತ್ರಿಪಡಿಸಲು “ಪ್ರಜಾ ಸೇವಾ” ಎಂಬ ಇಲಾಖೆಯನ್ನೆ ಹೊಸದಾಗಿ ತೆರೆದಿದ್ದು, ಇಲಾಖೆ ಜನರ ಸಮಸ್ಯೆ ಆಲಿಸಲಿದೆ. ಜನಸಾಮಾನ್ಯರ ಮನೆ-ಬಾಗಿಲಿಗೆ ಆಡಳಿತ ಕೊಂಡೊಯ್ದು, ಅವರ ದುಃಖ-ದುಮ್ಮಾನ, ನೋವು-ನಲಿವುಗಳಿಗೆ ಕಾನೂನಿನ ಚೌಕಟ್ಟಿನಡಿ ಸ್ಥಳದಲ್ಲೇ ಸೂಕ್ತ ಪರಿಹಾರ ಕಲ್ಪಿಸುವ ಜನಸ್ನೇಹಿ ಆಡಳಿತಕ್ಕೆ ಹೊಸ ಆಂದೋಲನವನ್ನೇ ನಮ್ಮ ಸರ್ಕಾರ ಆರಂಭಿಸಿದೆ. ಇಲ್ಲಿ ಪ್ರತಿ ಅರ್ಜಿಗೆ ಸ್ವೀಕೃತಿ ಸಂಖ್ಯೆ ನೀಡಿ ಕಾಲಮಿತಿಯಲ್ಲಿ ವಿಲೇವಾರಿ ಮಾಡಲಾಗುತ್ತದೆ. ಪ್ರಜೆಗಳ ಕಣ್ಣೀರು ಒರೆಸುವುದೆ ಪ್ರಜಾಪ್ರಭುತ್ವ ಸರ್ಕಾರದ ಮೂಲ ಆಶಯವಾಗಿದ್ದು, ಇನ್ನು ಮುಂದೆ ತಿಂಗಳ ಮೊದಲನೇ, ಮೂರನೇ ಶನಿವಾರ ತಾಲೂಕಿನಲ್ಲಿ ಸಾರ್ವಜನಿಕರ ಅಹವಾಲು ಆಲಿಸುವೆ ಎಂದರು.
ಅನ್ನ, ಅಕ್ಷರ, ಆರೋಗ್ಯ ಆವಿಷ್ಕಾರ ಯೋಜನೆಗಳನ್ನು ಜಿಲ್ಲೆಯಲ್ಲಿ ಜಾರಿಗೊಳಿಸಿದೆ. ಕಳೆದ ವರ್ಷ ರಾಷ್ಟ್ರದಲ್ಲಿಯೇ ದಾಖಲೆ ಪ್ರಮಾಣದಲ್ಲಿ 653 ಕೋಟಿ ರೂ. ಬೆಳೆ ಪರಿಹಾರ ನಮ್ಮಜಿಲ್ಲೆತ ರೈತರಿಗೆ ನೀಡಲಾಗಿದೆ. ಈ ವರ್ಷ ಸಹ ಜಿಲ್ಲೆಯಲ್ಲಿ 4.50 ಲಕ್ಷ ರೈತರು ಬೆಳೆ ವಿಮೆ ನೋಂದಣಿ ಮಾಡಿಕೊಂಡಿದ್ದು, ಈ ಬಾರಿಯೂ ಸಹ ಪ್ರಾಮಾಣಿಕ ಪರಿಹಾರ ನೀಡಲಾಗುವುದು ಎಂದರು.
ಶಾಸಕ ಬಸವರಾಜ ಮತ್ತಿಮೂಡ ಅವರು ಬರಗಾಲ ಪೀಡಿತ ಘೋಷಣೆ ಮಾಡಬೇಕೆಂಬ ಪ್ರಸ್ತಾವನೆ ಕುರಿತು ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, ಕೇಂದ್ರದ ಎನ್.ಡಿ.ಆರ್.ಎಫ್ ಮಾರ್ಗಸೂಚಿಯೆ ನಮ್ಮ ಸರ್ಕಾರಕ್ಕೆ ಬರಗಾಲ ಪ್ರದೇಶ ಘೋಷಣೆಗೆ ಕಟ್ಟಿ ಹಾಕಿದೆ. ಇದು ಸರಳೀಕರಣಗೊಳಿಸಬೇಕೆಂಬುದು ನಮ್ಮದು ಬಹುದಿನಗಳ ಬೇಡಿಕೆಯಾಗಿದೆ. ಇನ್ನು ಸಾಲ ಮನ್ನಾ ವಿಷಯ ಪ್ರಸ್ತಾಪಿಸಿ ಕೇಂದ್ರ ಸರ್ಕಾರ ಉದ್ದಿಮೆದಾರರಿಗೆ ಮಾಡುವ ಸಾಲ ಮನ್ನಾವನ್ನು ರೈತರಿಗೂ ವಿಸ್ತರಿಸಲಿ ಎಂದರು.
ಮಹಿಳೆಗೆ ಮಾತನಾಡಿಸಿದ ಸಿ.ಎಂ.:
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅಚರು ಕೂಡ್ಲಿಯಿಂದಲೆ ರಾಜ್ಯದ ವಿವಿಧ ಜಿಲ್ಲೆಯ ಉಸ್ತುವಸರಿ ಸಚಿವರು, ಶಾಸಕರು, ಸಾರ್ವಜನಿಕರೊಂದಿಗೆ ಸಂವಾದ ನಡೆಸಿದರು. ಕಮಲಾಪೂರ ಪ್ರಜಾ ಸೇವೆಯಲ್ಲಿ ಬಾಗವಹಿಸಿದ ಶೇಖಮ್ಮ ಮಹಿಳೆ ಮನೆ ನಿರ್ಮಾಣಕ್ಕೆ ಎರಡು ಕಂತು ಹಣ ಬಂದಿದೆ, ಮುರನೇಕಂತು ಬಂದಿಲ್ಲ. ಗಂಡ ನಿಧನ ಹೊಂದಿದ್ದಾರೆ, ಮಕ್ಕಳು ಇಲಗಲ, ಮನೆ ಕಕಟ್ಟಿಸಿಕೊಡಿ ಎಂದು ಸಿ.ಎಂ.ಗೆ ಬೇಡಿಕೆ ಇಟ್ಟರು. ಸಚಿವ ಪ್ರಿಯಾಂಕ್ ನಿಮ್ಮ ಬೇಡಿಕೆ ಈಡೇರಿಸಲಿದ್ದಾರೆ ಎಂದರು.
ಶಾಸಕ ಬಸವರಾಜ ಮತ್ತಿಮೂಡ ಅವರು ಸಿ.ಎಂ. ಅವರೊಂದಿಗೆ ಮಾತನಾಡಿ, ಕಮಲಾಪೂರ ತಾಲೂಕು ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಬೇಕೆಂದು ಮನವಿ ಮಾಡಿಕೊಂಡರು.
40 ಸ್ಟಾಲ್ ಸ್ಥಾಪನೆ:
ಪ್ರಜಾ ಸೇವೆ ಅಂಗವಾಗಿ ತಾಲೂಕಿನ 19 ಗ್ರಾಮ ಪಂಚಾಯತಿವಾರು ಮತ್ತು ಕಮಲಾಪುರ ಪಟ್ಟಣ ಪಂಚಾಯತಿಗೆ ಸಂಬಂಧಿಸಿದಂತೆ ಸ್ಟಾಲ್ ತೆರೆದು ಸಾರ್ವಜನಿಕರ ಅರ್ಜಿ ಸ್ವೀಕರಿಸಲಾಯಿತು. ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಕಂದಾಯ, ಗ್ರಾಮೀಣಾಭಿವೃದ್ಧಿ, ಪಟ್ಟಣ ಪಂಚಾಯತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಲೀಡ್ ಬ್ಯಾಂಕ್, ಎಸ್.ಐ.ಆರ್., ವಿಬಿ-ಜಿ-ರಾಮ್ ಜಿ, ಭಾರತ ಜೋಡೊ ಯುವ ಸಂಘ, ಸಮಾಜ ಕಲ್ಯಾಣ, ಅಲ್ಪಸಂಖ್ಯಾತ, ಹಿಂದುಳಿದ, ಆಹಾರ, ಜೆಸ್ಕಾಂ, ಯುವ ನಿಧಿ, ಸಹಕಾರ ಸೇರಿದಂತೆ ಹೀಗೆ ಒಟ್ಟಾರೆ 40 ಪ್ರಮುಖ ಇಲಾಖೆಗಳ ಸ್ಟಾಲ್ ತೆರೆದು ಇಲಾಖೆ ಯೋಜನೆಗಳ ಕುರಿತು ಅರಿವು ಮೂಡಿಸುವ ಪ್ರಯತ್ನ ಸಹ ಇಲ್ಲಿ ಮಾಡಲಾಯಿತು.
ದೇಶಕ್ಕೆ ಮಾದರಿ ಪ್ರಜಾ ಸೇವೆ:
ವಿಧಾನ ಪರಿಷತ್ ಶಾಸಕ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ ದೇಶದಲ್ಲಿಯೇ ಮಾದರಿಯಾಗಿ ಪ್ರಜಾ ಸೇವೆ ಅಭಿಯಾನ ನಮ್ಮ ಸರ್ಕಾರ ಕೈಗೊಂಡಿದೆ. ಜನ ಸರ್ಕಾರಿ ಕಚೇರಿ, ಡಿ.ಸಿ. ಕಚೇರಿ, ವಿಧಾನಸೌಧಕ್ಕೆ ತಮ್ಮ ಕೆಲಸಕ್ಕೆ ಅಲೆದಾಡಬಾರದು ಎಂಬ ಸದಾಶಯದೊಂದಿಗೆ ನಿಮ್ಮ ಮನೆ ಬಾಗಿಲಿಗೆ ಸರ್ಕಾರ ಬಂದಿದೆ. ನಿಮ್ಮ ಅಹವಾಲು ಆಲಿಸುತ್ತಿದೆ. ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಬಡವರ ಬದುಕು ಕಣ್ಣೀರು ಒರೆಸುವ ಕೆಲಸ ನಮ್ಮ ಸರ್ಕಾರ ಮಾಡುತ್ತಿದೆ ಎಂದರು.
5 ಲಕ್ಷ ರೂ. ವರೆಗೆ ರೈತರ ಸಾಲ ಮನ್ನ ಮಾಡಿ:
ಜಿಲ್ಲೆಯ ಸಂಪೂರ್ಣ 11 ತಾಲೂಕುಗಳು ಬರಗಾಲಕ್ಕೆ ತುತ್ತಾಗಿವೆ. ಬೆಳೆದ ಬೆಳೆಗಳು ರೈತರ ಕೈಗೆ ಹತ್ತಿಲ್ಲ. ಎರಡ್ಮೂರು ಬಾರಿ ಬಿತ್ತಿದರೂ ಮಳೆ ಇಲ್ಲದ ಕಾರಣ ಬೆಳೆಯಲ್ಲಿ ಬೆಳವಣಿಗೆ ಕಂಡಿಲ್ಲ. ಕುಡಿಯುವ ನೀರಿಗೆ ಹಾಹಾಕರ ಇದೆ. ಇತ್ತೀಚೆಗೆ ಜಿಲ್ಲೆಯ 6 ತಾಲೂಕು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆಯಾಗಿದೆ. ಕಮಲಾಪೂರ ಸೇರಿ 5 ತಾಲೂಕು ಬಾಕಿ ಇದ್ದು, ಉಳಿದ ತಾಲೂಕುಗಳನ್ನು ಕೂಡಲೆ ಬರಗಾಲ ಘೋಷಿಸಿ ರೈತರಿಗೆ ಪ್ರತಿ ಎಕರೆಗೆ 50 ಸಾವಿರ ರೂ. ಪರಿಹಾರ ಘೋಷಿಸಬೇಕು ಮತ್ತು ಸಂಕಷ್ಟದಲ್ಲಿರುವ ರೈತರ ಬೆಳೆ ಸಾಲವನ್ನು ಗರಿಷ್ಟ 5 ಲಕ್ಷ ರೂ. ವರೆಗೆ ಸಾಲ ಮನ್ನಾ ಮಾಡಬೇಕೆಂದು ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ ವೇದಿಕೆ ಮೇಲಿದ್ದ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ, ಕರ್ನಾಟಕ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮಹೆಮೂದ್ ಚಿಸ್ತಿ, ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ, ಕೆ.ಕೆ.ಆರ್.ಟಿ.ಸಿ ಅಧ್ಯಕ್ಷ ಅರುಣಕುಮಾರ ಪಾಟೀಲ, ಕುಡಾ ಅಧ್ಯಕ್ಷ ಮಜಹರ್ ಆಲಂ ಖಾನ್, ಕಾಡಾ ಅಧ್ಯಕ್ಷ ಡಾ.ಅಬ್ದುಲ್ ರಶೀದ್, ಪಂಚ ಗ್ಯಾರಂಟಿ ಅನುಷ್ಟಾನ ಪ್ರಾಧಿಕಾರದ ಜಿಲ್ಲಾಧ್ಯಕ್ಣೆ ಚಂದ್ರಿಕಾ ಪರಮೇಶ್ವರ್, ಮಾಜಿ ಸಚಿವ ರೇವುನಾಯಕ್ ಬೆಳಮಗಿ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸುಬೋಧ ಯಾದವ, ಐ.ಜಿ.ಪಿ. ಶಾಂತನು ಸಿನ್ಹಾ, ಕೆ.ಕೆ.ಆರ್.ಟಿ.ಸಿ. ಎಂ.ಡಿ. ಡಾ.ಬಿ.ಸುಶೀಲಾ, ಜಿಲ್ಲಾಧಿಕಾರಿ ಇಕ್ರಂ ಶರೀಫ್, ಎಸ್.ಪಿ. ಅಡ್ಡೂರು ಶ್ರೀನಿವಾಸುಲು, ಜಿಲ್ಲಾ ಪಂಚಾಯತ್ ಸಿ.ಇ.ಓ ರಾಹುಲ್ ಸಂಕನೂರು, ಸಹಾಯಕ ಅಯುಕ್ತರಾದ ಸಾಹಿತ್ಯ ಅಲದಕಟ್ಟಿ, ಪ್ರಭು ರೆಡ್ಡಿ, ಕಮಲಾಪೂರ ತಹಶೀಲ್ದಾರ ಮೊಹಮ್ಮದ್ ಮೋಹಸೀನ್ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗಿಯಾಗಿದ್ದರು. ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಸ್ವಾಗತಿಸಿದರು.























