
ಔರಾದ್ :ಜ.೨೨: ಉತ್ತರ ಕರ್ನಾಟಕದ ಸಾಂಸ್ಕೃತಿಕ ನಗರಿ ವಿಜಯಪುರದಲ್ಲಿ ಇದೇ ಜನವರಿ ೨೪, ೨೫ ಹಾಗೂ ೨೬ರಂದು ನಡೆಯಲಿರುವ ೪೫ನೇ ಎಬಿವಿಪಿ ಪ್ರಾಂತ ಸಮ್ಮೇಳನದ ಭಿತ್ತಿಪತ್ರವನ್ನು ಮಂಗಳವಾರ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬಿಡುಗಡೆ ಮಾಡಲಾಯಿತು.
ಈ ವೇಳೆ ಮಾತನಾಡಿದ ಸಾಹಿತಿ ಡಾ. ಮನ್ಮಥ ಡೋಳೆ, ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವ ದೃಷ್ಟಿಯಿಂದ ಎಬಿವಿಪಿ ಹಲವು ಆಯಾಮಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು. ಪರಿಸರ, ಕ್ರೀಡೆ, ಸೇವೆ ಹಾಗೂ ಕಲೆ ಸೇರಿದಂತೆ ವಿವಿಧ ಆಸಕ್ತಿಯ ವಿದ್ಯಾರ್ಥಿಗಳಿಗಾಗಿ ಸಂಘಟನೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ ಎಂದು ಹೇಳಿದರು.
ಪಿಯುಸಿ ಕಾಲೇಜಿನ ಪ್ರಾಂಶುಪಾಲ ಓಂಪ್ರಕಾಶ ದಡ್ಡೆ ಮಾತನಾಡಿ, ಕಾಲೇಜು ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳಿಗೆ ಸಮಸ್ಯೆಗಳು ಎದುರಾದಾಗ ಮೊದಲಿಗೆ ಸ್ಪಂದಿಸುವ ಸಂಘಟನೆ ಎಬಿವಿಪಿಯಾಗಿದೆ. ಯಾವುದೇ ಸರ್ಕಾರಗಳು ವಿದ್ಯಾರ್ಥಿ ವಿರೋಧಿ ನೀತಿಗಳನ್ನು ಅನುಸರಿಸಿದರೆ ಅದರ ವಿರುದ್ಧ ಹೋರಾಟ ನಡೆಸಿ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವ ಕೆಲಸವನ್ನು ಎಬಿವಿಪಿ ಮಾಡುತ್ತಿದೆ ಎಂದರು.
ಎಬಿವಿಪಿ ಪ್ರಮುಖರಾದ ಬಸವರಾಜ ಹಳ್ಳೆ, ಅಶೋಕ ಶೆಂಬೆಳ್ಳಿ ಮಾತನಾಡಿ, ವಿದ್ಯಾರ್ಥಿಗಳ ಧ್ವನಿಯಾಗಿ ಪರಿಷತ್ ಕಾರ್ಯನಿರ್ವಹಿಸುತ್ತಿದೆ. ‘ದೇಶ ಮೊದಲು’ ಎಂಬ ಮನೋಭಾವ ವಿದ್ಯಾರ್ಥಿಗಳಲ್ಲಿ ಮೂಡಿಸುವ ಕಾರ್ಯವನ್ನು ಎಬಿವಿಪಿ ನಿರಂತರವಾಗಿ ಮಾಡುತ್ತಿದೆ. ಕಳೆದ ಅನೇಕ ದಶಕಗಳಿಂದ ವಿದ್ಯಾರ್ಥಿ ಸಮೂಹದ ಅಭ್ಯುದಯಕ್ಕಾಗಿ ಶ್ರಮಿಸುತ್ತಿರುವ ಎಬಿವಿಪಿ ವಿಶ್ವದ ನಂ.೧ ವಿದ್ಯಾರ್ಥಿ ಸಂಘಟನೆಯಾಗಿದೆ ಎಂದು ಹೇಳಿದರು. ಸಮ್ಮೇಳನವನ್ನು ಯಶಸ್ವಿಗೊಳಿಸಲು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿಅರ್ ಸಿ ಪ್ರಕಾಶ ರಾಠೋಡ್, ಎಬಿವಿಪಿ ನಗರ ಅಧ್ಯಕ್ಷ ಡಿ.ಡಿ. ಬೊಳೆಗಾವೆ, ಪತ್ರಕರ್ತ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಮೊಕ್ತೆದಾರ್, ಡಾ.ಶಾಲಿವಾನ ಉದಗೀರೆ, ಎಬಿವಿಪಿ ಬೀದರ ತಾಲೂಕು ಸಂಚಾಲಕ ನಿತಿನ ಮೂಲಗೆ, ರಾಜಕುಮಾರ ಡೊಂಗರೆ, ವಿಶ್ವನಾಥ ಬಿರಾದಾರ್, ನಾಗನಾಥ ಮೋರ್ಗೆ,ಸಂಜೀವ ಮೇತ್ರೆ, ಸಂತಕುಮಾರ, ನರಸಿಂಗರಾವ, ಸಂಜುಕುಮಾರ ದಾಮ, ಗಾಯತ್ರಿ, ಗೌರಮ್ಮ, ಕಾವೇರಿ, ಶಾಂತಕುಮಾರ ಕೌಡಗಂವ, ಪ್ರಶಾಂತ ಮೇತ್ರೆ, ಅನಿಲ ಮೇತ್ರೆ, ಮಹಾದೇವ ಶಿಂದೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.























