
ಆಳಂದ್: ಜ.24:ಕಲಬುರಗಿ ಗ್ರಾಮೀಣ ಮತಕ್ಷೇತ್ರ ವ್ಯಾಪ್ತಿಯ ತಾಲೂಕಿನ ನರೋಣಾ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಾಸಿಸುವ ಜನರು ಸಂಪರ್ಕ ರಸ್ತೆ ತೀರಾ ಹದಗೆಟ್ಟಿದ್ದರಿಂದ ದಿನನಿತ್ಯದ ಪ್ರಯಾಣಕ್ಕೆ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ.
ಹೋಬ್ಬಳಿ ಸರ್ಕಲ್‍ಗೆ ಸೇರಿರುವ ನರೋಣಾ ಗ್ರಾಮಕ್ಕೆ ಸುತ್ತಲಿನ ಗ್ರಾಮಗಳ ಜನರು ದಿನಾಲು ಸಂಚರಿಸುತ್ತಾರೆ. ಆದರೆ ನರೋಣದಿಂದ ರೀಕಿನ್ ಆಲೂರ್ ಗ್ರಾಮದ ಮೂಲಕ ಕಲಬುರಗಿಗೆ ಸಂಚರಿಸುವ ಸುಮಾರು 20 ಕಿ.ಮೀ. ದೂರವಿದ್ದು, ಈ ಮಾರ್ಗದಲ್ಲಿ ರಸ್ತೆಯ ಸ್ಥಿತಿ ಅತ್ಯಂತ ಕೆಟ್ಟದ್ದಾಗಿದೆ. ಆಲೂರ್ ಕ್ರಾಸ್‍ನಿಂದ ಕೆರೆ ಅಂಬುಲಗಿ ಕ್ರಾಸ್ ವರೆಗೆ ರಸ್ತೆ ಸಂಪೂರ್ಣ ಹದಗೆಟ್ಟು ಹೋದ ಪರಿಣಾಮ ದಿನನಿತ್ಯ ಅಪಘಾತಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ಶಿವಪುತ್ರ ಬಿ. ರಾಗಿ ಅವರು ಶುಕ್ರವಾರ ಈ ವಿಷಯವನ್ನು ಎತ್ತಿ ಹಿಡಿದಿದ್ದಾರೆ. ನರೋಣ ಗ್ರಾಮದಿಂದ ಆಲೂರ್ ಕ್ರಾಸ್ ಮತ್ತು ಕೆರೆ ಅಂಬುಲಗಿ ಕ್ರಾಸ್ ವರೆಗಿನ ರಸ್ತೆಯು ಹದಗೆಟ್ಟು ಹೋಗಿದ್ದು, ಇದರಿಂದ ಸುತ್ತಮುತ್ತಲಿನ ಗ್ರಾಮಗಳ ಜನರು ದಿನಾಲು ತೊಂದರೆಗೊಳಗಾಗುತ್ತಿದ್ದಾರೆ. “ಈ ರಸ್ತೆಯ ಕಾರಣದಿಂದಲೇ ಅನೇಕ ಅಪಘಾತಗಳು ಆಗುತ್ತಿವೆ. ಸಂಬಂಧಿತ ಅಧಿಕಾರಿಗಳು, ಶಾಸಕರು ಮತ್ತು ಉಸ್ತುವಾರಿ ಸಚಿವರು ತಕ್ಷಣ ಗಮನ ಹರಿಸಿ ಹೊಸ ರಸ್ತೆ ಕಾಮಗಾರಿ ಮಾಡಿಸಬೇಕು” ಎಂದು ಅವರು ಆಗ್ರಹಿಸಿದ್ದಾರೆ.
ಇದಲ್ಲದೆ, ಆಲೂರ್ ಕ್ರಾಸ್‍ನಿಂದ ನರೋಣ ಗ್ರಾಮದವರೆಗಿನ ಮಧ್ಯಭಾಗದಲ್ಲಿ ಮಾಡಲ್ಪಟ್ಟ ಪ್ಯಾಚ್ ವರ್ಕ್ ಕೆಲಸವೂ ಅತ್ಯಂತ ಕಳಪೆಯಾಗಿದೆ ಎಂದು ಆರೋಪಿಸಲಾಗಿದೆ.
“ಹೆಸರಿಗೆ ಮಾತ್ರ ಕೆಲಸ ಮಾಡಿ ಹಣ ಲಪಟಾಯಿಸಿದ್ದು. ಇದು ಸಂಪೂರ್ಣ ಅಪಹಾಸ್ಯ” ಎಂದು ಶಿವಪುತ್ರ ಬಿ. ರಾಗಿ ಅವರು ಹೇಳಿದ್ದಾರೆ. ಸಂಬಂಧಿತ ಕಾಂಟ್ರಾಕ್ಟರ್‍ಗಳು ಮತ್ತು ಜೂನಿಯರ್ ಇಂಜಿನಿಯರ್ ಅಧಿಕಾರಿಗಳ ಮೇಲೆ ತಕ್ಷಣ ಕ್ರಮ ತೆಗೆದು ಶಿಕ್ಷೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. “ಪ್ಯಾಚ್ ವರ್ಕ್ ಕೆಲಸದ ಫೆÇೀಟೋಗಳು ಮತ್ತು ವಿಡಿಯೋ ದಾಖಲೆಗಳು ನನ್ನ ಬಳಿ ಇವೆ. ಅಧಿಕಾರಿಗಳು ಪರಿಶೀಲಿಸಬಹುದು” ಎಂದು ಅವರು ತಿಳಿಸಿದ್ದಾರೆ.
ಈ ವಿಷಯದಲ್ಲಿ ಯಾರು ಭಾಗಿಯಾಗಿದ್ದಾರೆ ಎಂಬುದನ್ನು ತನಿಖೆ ಮಾಡಿ, ಸೂಕ್ತ ಕ್ರಮ ತೆಗೆದು ತಪ್ಪಿಸ್ಥರಿಗಳನ್ನು ಶಿಕ್ಷೆಗೆ ಒಳಪಡಿಸಬೇಕು ಎಂದು ಸಮಿತಿ ಆಗ್ರಹಿಸಿದೆ.
“ಒಂದು ವೇಳೆ ತಡ ಮಾಡಿದರೆ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಉಗ್ರ ಹೋರಾಟ ನಡೆಸಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಲಾಗಿದೆ. ಗ್ರಾಮೀಣ ಕ್ಷೇತ್ರದ ಶಾಸಕರು ಮತ್ತು ಉಸ್ತುವಾರಿ ಸಚಿವರು ಈ ಸಮಸ್ಯೆಗೆ ತಕ್ಷಣ ಗಮನ ನೀಡಬೇಕು ಎಂದು ಸ್ಥಳೀಯರು ಸಹ ಮನವಿ ಮಾಡಿಕೊಂಡಿದ್ದಾರೆ.
ಈ ರಸ್ತೆಯ ಸಮಸ್ಯೆಯು ಸ್ಥಳೀಯರ ದೈನಂದಿನ ಜೀವನವನ್ನು ಕಷ್ಟಕರಗೊಳಿಸಿದ್ದು, ಸರ್ಕಾರಿ ಅಧಿಕಾರಿಗಳಿಂದ ತ್ವರಿತ ಕ್ರಮದ ಅಗತ್ಯವಿದೆ. ಸಮಿತಿಯು ಈ ವಿಷಯವನ್ನು ಇನ್ನಷ್ಟು ಗಂಭೀರವಾಗಿ ತೆಗೆದುಕೊಂಡು ಹೋರಾಟಕ್ಕೆ ಮುಂದಾಗುವುದಾಗಿ ಸೂಚಿಸಿದೆ.
























