ಪೋಲಿಯೋ ಮುಕ್ತ ಸಮಾಜ ನಮ್ಮೆಲ್ಲರ ಗುರಿ

ಸೈದಾಪುರ:ಡಿ.೨೨:ಪ್ರತಿಯೊಬ್ಬ ಪಾಲಕರು ಅತ್ಯಂತ ಜವಾಬ್ದಾರಿಯುತವಾಗಿ ತಮ್ಮ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸುವ ಮೂಲಕ ಪೋಲಿಯೋ ಮುಕ್ತ ಸಮಾಜ ನಿರ್ಮಾಣಕ್ಕೆ ಜೋಡಿಸುವುದು ಅತ್ಯಗತ್ಯವಾಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಲಕ್ಷ್ಮಣ ನಾಯಕ ಅಭಿಪ್ರಾಯಪಟ್ಟರು.
ಸಮೀಪದ ಕೂಡ್ಲೂರು ಗ್ರಾಮದಲ್ಲಿ ಭಾನುವಾರ ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನದ ನಿಮಿತ್ತ ಭಾನುವಾರ ಪುಟಾಣಿ ಮಕ್ಕಳಿಗೆ ಪೋಲಿಯೋ ಲಸಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ರಾಷ್ಟ್ರೀಯ ಪಲ್ಸ್ ಪೊಲೀಯೋ ಕಾರ್ಯಕ್ರಮದಡಿಯಲ್ಲಿ ಡಿ-೨೧ ರಿಂದ ೨೪ರ ವರೆಗೆ ೦-೫ ವರ್ಷದೊಳಗಿನ ಮಕ್ಕಳಿಗೆ ಲಸಿಕಾ ಕೇಂದ್ರಗಳಲ್ಲಿ ಪೊಲೀಯೋ ಹನಿಗಳನ್ನು ಹಾಕಲಾಗುತ್ತಿದ್ದು, ಯಾವುದೇ ಮಕ್ಕಳು ಪಲ್ಸ್ ಪೊಲೀಯೋ ಲಸಿಕೆಯಿಂದ ತಪ್ಪಿ ಹೋಗದಂತೆ ನೋಡಿಕೊಳ್ಳಬೇಕು. ಪೋಲಿಯೋ ಒಂದು ವೈರಲ್ ರೋಗವಾಗಿದೆ. ಮುಖ್ಯವಾಗಿ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದು ಶಾಶ್ವತ ಅಂಗವೈಕಲ್ಯಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಇದಕ್ಕೆ ಪೂರ್ಣ ಪ್ರಮಾಣದ ಚಿಕಿತ್ಸೆ ಲಭ್ಯವಿಲ್ಲ, ಆದ್ದರಿಂದ ಪಲ್ಸ್ ಪೋಲಿಯೋ ಹನಿಯ ಮೂಲಕ ತಡೆಗಟ್ಟುವುದು ಉತ್ತಮ ಪರಿಹಾರವಾಗಿದೆ. ಈ ಪೋಲಿಯೋ ಹನಿಯು ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಭವಿಷ್ಯದಲ್ಲಿ ಸೋಂಕು ತಗುಲದಂತೆ ರಕ್ಷಿಸುತ್ತದೆ. ಹೀಗಾಗಿ ಪೋಷಕರು ಯಾವುದೇ ಆತಂಕ ಭಯವಿಲ್ಲದೆ ಪೋಲಿಯೋ ಮುಕ್ತ ಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬ ಪಾಲಕರ ಸಹಕಾರ ಅತ್ಯವಶ್ಯಕವಾಗಿದೆ ಎಂದು ತಿಳಿಸಿದರು.
ಈ ವೇಳೆ ಗ್ರಾ.ಪಂ ಸದಸ್ಯರಾದ ಕಲ್ಲಪ್ಪ, ಮುಖಂಡರಾದ ಮಲ್ಲೇಶ ನಾಯಕ ನಾಗರಬಂಡಿ, ಅಂಗನವಾಡಿ ಕಾರ್ಯಕರ್ತೆಯಾರದ ಶರಭಮ್ಮ, ಮಾಲಾಶ್ರೀ ಹಾಗೂ ಆಶಾ ಕಾರ್ಯಕರ್ತೆ ಶಿವಬಸಮ್ಮ ಸಹಾಯಕಿ ಸುಮಂಗಲಾ ಮತ್ತಿತರರಿದ್ದರು.