ಮಧುಗಿರಿ, ಏ. ೧೧- ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ನೆರೆಯ ಆಂಧ್ರಪ್ರದೇಶದ ಪ್ರಯಾಣಿಕರು ಕಳೆದುಕೊಂಡಿದ್ದ ೩೦ ಗ್ರಾಂ ಚಿನ್ನಾಭರಣಗಳನ್ನು ೧೨ ಗಂಟೆಯೊಳಗೆ ಸಂತ್ರಸ್ತರಿಗೆ ಹುಡುಕಿಕೊಡುವಲ್ಲಿ ಮಧುಗಿರಿ ಪೊಲೀಸರು ಯಶಸ್ವಿಯಾಗಿದ್ದಾರೆ.
ನೆರೆಯ ಆಂಧ್ರ ಮೂಲದ ದಂಪತಿ ಬೆಂಗಳೂರಿನಿಂದ ಕಲ್ಯಾಣ ದುರ್ಗಾಕ್ಕೆ ತೆರಳಲು ಕೆ ಎಸ್ ಆರ್ ಟಿ ಸಿ ಬಸ್ ಹತ್ತಿದ್ದರು. ಆದರೆ ಮಧ್ಯರಾತ್ರಿ ಮಧುಗಿರಿಯ ಬಸ್ ನಿಲ್ದಾಣದಲ್ಲಿ ಬಸ್‌ನಲ್ಲಿಯೇ ಬ್ಯಾಗ್ ಬಿಟ್ಟು ಕೆಳಗಿಳಿದಿದ್ದರು. ನಂತರ ಬಸ್ ಮಧುಗಿರಿ ಬಿಟ್ಟು ಹೊರಟಾಗ ಬಸ್‌ನಲ್ಲಿ ಬ್ಯಾಗ್ ಕಾಣೆಯಾಗಿತ್ತು. ರಾತ್ರಿಯ ವೇಳೆಯೇ ಪತಿ ಮಣಿಕಂಠ ಠಾಣೆಗೆ ಬಂದು ದೂರು ನೀಡಿದಾಗ ಕಾರ್ಯ ಪ್ರವೃತ್ತರಾದ ಪೊಲೀಸ್ ಸಿಬ್ಬಂದಿ ಮಧುಗಿರಿ ಬಸ್ ನಿಲ್ದಾಣದಲ್ಲಿ ಬಸ್‌ನಿಂದ ಇಳಿದ ಪ್ರಯಾಣಿಕರ ಮಾಹಿತಿಯನ್ನು ಸ್ಥಳೀಯರಿಂದ ಪಡೆದು ನಂತರ ಮಧುಗಿರಿಯ ಶಂಕರ ಮಠದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದ ಕಡೆ ಗಮನಹರಿಸಿ ಬೆಂಗಳೂರಿನಿಂದ ಬಂದಂತಹ ಪ್ರಯಾಣಿಕರ ಲಗೇಜ್ ಬ್ಯಾಗ್‌ಗಳನ್ನು ಪರಿಶೀಲಿಸಿದಾಗ ಆಂಧ್ರ ಮೂಲದವರ ಬ್ಯಾಗ್ ಮತ್ತು ಅದರಲ್ಲಿದ್ದ ಒಡವೆಗಳು ಸಹ ಪತ್ತೆಯಾಗಿವೆ. ಕತ್ತಲೆಯ ಸಮಯದಲ್ಲಿ ಆಕಸ್ಮಿಕವಾಗಿ ಬ್ಯಾಗ್ ಬದಲಾಗಿ ತಂದಿರುವುದಾಗಿ ಕಾರ್ಯಕ್ರಮದಲ್ಲಿದ್ದವರು ತಿಳಿಸಿದ್ದಾರೆ.
ಪೊಲೀಸರ ಸಮಯ ಪ್ರಜ್ಞೆಯಿಂದಾಗಿ ಮಾಲೀಕರಿಗೆ ಆಭರಣಗಳನ್ನು ೧೨ ಗಂಟೆಯೊಳಗೆ ಮರಳಿಸಿ ಪೊಲೀಸರು ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.
ದಂಪತಿಗಳು ಸೇರಿದಂತೆ ಸಾರ್ವಜನಿಕರು ಪೊಲೀಸರ ಕಾರ್ಯವನ್ನು ಶ್ಲಾಘಿಸಿದ್ದಾರೆ.























