
ಶಿವಮೊಗ್ಗ, ಜು. ೫: ಪೊಲೀಸ್ ಠಾಣೆ ಆವರಣದ ಅರಳಿ ಮರವೇರಿ ಕುಳಿತ ಯುವಕನೋರ್ವ, ಕೆಳಗಿಳಿಯಲು ನಿರಾಕರಿಸಿ ಹೈಡ್ರಾಮಾ ಸೃಷ್ಟಿಸಿದ ಕುತೂಹಲಕಾರಿ ಘಟನೆ, ಶಿವಮೊಗ್ಗ ನಗರದ ಕೋಟೆ ಪೊಲೀಸ್ ಠಾಣೆ ಆವರಣದಲ್ಲಿ ಇಂದುಮುಂಜಾನೆ ನಡೆದಿದೆ.
ಲಷ್ಕರ್ ಮೊಹಲ್ಲಾದ ನಿವಾಸಿ, ೨೪ ವರ್ಷದ ಯುವಕನೇ ಮರವೇರಿ ಕುಳಿತ್ತಿದ್ದ ವ್ಯಕ್ತಿಯಾಗಿದ್ದಾನೆ. ಈತನನ್ನು ಮರದಿಂದ ಕೆಳಗಿಳಿಸಲು ಪೊಲೀಸರು ಸಾಕಷ್ಟು ಹರಸಾಹಸ ನಡೆಸಿದ್ದಾರೆ. ಮನವೊಲಿಸಿದ್ದಾರೆ. ಆದರೆ ಮರದಿಂದ ಕೆಳಗಿಳಿಯಲು ಯುವಕ ನಿರಾಕರಿಸಿದ್ದಾನೆ.
ಅಂತಿಮವಾಗಿ ಅಗ್ನಿಶಾಮಕ ದಳಕ್ಕೆ ಮಾಹಿತಿ ರವಾನಿಸಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಅಧಿಕಾರಿ ಸಿಬ್ಬಂದಿಗಳು ಯುವಕನನ್ನು ಸುರಕ್ಷಿತವಾಗಿ ಮರದಿಂದ ಕೆಳಗಿಳಿಸಿ, ಪೊಲೀಸರ ವಶಕ್ಕೊಪ್ಪಿಸುವಲ್ಲಿ ಸಫಲರಾಗಿದ್ದಾರೆ.
ಏನಾಯ್ತು? : ಮುಂಜಾನೆ ಪೊಲೀಸ್ ಠಾಣೆಗೆ ಆಗಮಿಸಿದ್ದ ಯುವಕ, ನಂತರ ದಿಢೀರ್ ಆಗಿ ಅರಳಿ ಮರವೇರಿ ಕುಳಿತುಕೊಂಡಿದ್ದಾನೆ. ಇದನ್ನು ಗಮನಿಸಿದ ಪೊಲೀಸರು ಮರದಿಂದ ಕೆಳಗಿಳಿಯುವಂತೆ ಸೂಚಿಸಿದ್ದಾರೆ. ‘ನನಗೆ ಹೊಡೆಯುತ್ತಾರೆ. ನನ್ನನ್ನು ಜೈಲಿಗೆ ಕಳುಹಿಸಿ. ಮರದಿಂದ ಕೆಳಗಿಳಿದರೆ ನನಗೆ ತೊಂದರೆಯಾಗುತ್ತದೆ’ ಎಂದೆಲ್ಲ ಹೇಳಲಾರಂಭಿಸಿದ್ದಾನೆ.
ಈತನ ಮನವೊಲಿಕೆಗೆ ಪೊಲೀಸರು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಆದಾಗ್ಯೂ ಯುವಕ ಮರದಿಂದ ಕೆಳಗಿಳಿಯಲು ನಿರಾಕರಿಸಿದ್ದಾನೆ. ಇದು ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅಂತಿಮವಾಗಿ ಅಗ್ನಿಶಾಮಕ ದಳಕ್ಕೆ ಮಾಹಿತಿ ರವಾನಿಸಿದ್ದಾರೆ. ಮುಂಜಾನೆ ೫ ಗಂಟೆ ವೇಳೆಗೆ ಆಗಮಿಸಿದ ಅಗ್ನಿಶಾಮಕ ತಂಡ ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ, ಯುವಕನ ಮನವೊಲಿಕೆಯ ಕಾರ್ಯ ನಡೆಸಿದೆ.
ಅಂತಿಮವಾಗಿ ಬೆಳಿಗ್ಗೆ ೭ ಗಂಟೆ ಸರಿಸುಮಾರಿಗೆ ಮರಕ್ಕೆ ಏಣಿ ಹಾಕಿ, ಯುವಕನನ್ನು ಸುರಕ್ಷಿತವಾಗಿ ಮರದಿಂದ ಕೆಳಗಿಳಿಸುವಲ್ಲಿ ಸಫಲವಾಗಿದೆ. ಇದರಿಂದ ಪೊಲೀಸರು ನಿಟ್ಟುಸಿರು ಬಿಡುವಂತಾಗಿದೆ.
ಅಗ್ನಿಶಾಮಕ ದಳದ ಡಿಎಫ್‌ಓ ಅಶೋಕ ಕುಮಾರ್, ಐಸಿಎಎಫ್‌ಎಸ್ಟಿಓ ಹುಸೇನ್, ಎಎಫ್‌ಎಸ್ಟಿಓ ವಿಲ್ ಫ್ರೇಡ್, ಎಲ್ ಎಫ್ ಲೋಹಿತ್ ಕುಮಾರ್, ಎಫ್ ಡಿ ಶರತ್ ಕುಮಾರ್, ಎಫ್ ಎಂ ಮಾರುತಿ, ಎರ್ರಿಸ್ವಾಮಿ, ಕಿರಣ್ ಕುಮಾರ್ ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಕಾರಣವೇನು? : ಯುವಕ ದಿಢೀರ್ ಆಗಿ ಪೊಲೀಸ್ ಠಾಣೆ ಆವರಣದ ಮರವೇರಿ ಕುಳಿತುಕೊಳ್ಳಲು ಕಾರಣವೇನು? ಆತನಿಗೆ ಯಾರಾದರೂ ಬೆದರಿಕೆ ಹಾಕಿದ್ದಾರೆಯೇ? ಆತ ಮಾನಸಿಕವಾಗಿ ಸ್ಥಿರವಾಗಿದ್ದಾನೆಯೇ? ಎಂಬಿತ್ಯಾದಿ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ.