
ತುಮಕೂರು, ಅ. ೬- ಅಂತರ್ಗತ ಚೈತನ್ಯಗಳ ಸೃಜನಶೀಲ ಐಕ್ಯತೆಯ ಕುರುಹೇ ಒಂದು ಹೃದ್ಯಕಾವ್ಯದ ಸತ್ವ. ಏಕಾಗ್ರತೆ, ತನ್ಮಯತೆ, ಕವಿಯ ಆಕರಗಳ ಅಭಿವ್ಯಕ್ತಿಯಾದಾಗ ಕಾವ್ಯರೂಪದ ಬೆಳಕು ಅಕ್ಷರಗಳನ್ನು ತುಂಬುತ್ತದೆ. ಸಹೃದಯರನ್ನು ಸೆಳೆಯುತ್ತದೆ. ಮತ್ತೆ, ಮತ್ತೆ ಅಂತಹ ಕವಿತೆಗಳನ್ನು ಮನಸ್ಸು ಗುನುಗುತ್ತದೆ ಎಂದು ಖ್ಯಾತ ಕವಯತ್ರಿ ಡಾ. ಬಿ.ಸಿ. ಶೈಲಾ ನಾಗರಾಜ್ ಹೇಳಿದರು.
ನಗರದಲ್ಲಿ ಜಿಲ್ಲಾ ಮಹಿಳಾ ಸಂಘಟನೆ ಮತ್ತು ಶೈನಾ ಅಧ್ಯಯನ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ದಸರಾ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಧ್ಯಾನಸ್ಥ ಭಾವದ ಕವಿಯು ಮಾತ್ರ ಇಷ್ಟು ಸಾಂದ್ರವಾದ ಸ್ಥಿತಿ, ಪರಿಸ್ಥಿತಿಗಳನ್ನು ಕಾವ್ಯಾತ್ಮಕ ಸೌಂದರ್ಯದ ಮೂಲಕ ಹೊರಹಾಕಲು ಸಾಧ್ಯ. ದಸರಾ ಕವಿಗೋಷ್ಠಿಯಲ್ಲಿ ಓದಿದ ಕವಿತೆಗಳಿಗೂ ಅಂತಹ ಹೃದ್ಯತೆ ಇದೆ. ಕಾವ್ಯಾತ್ಮಕ ಸೌಂದರ್ಯ ಇದೆ. ದಸರಾ ಕವಿಗೋಷ್ಠಿಗೆ ಒಂದು ಸಾಂಸ್ಕೃತಿಕ ಹಿನ್ನೆಲೆ ಇದೆ. ಮೈಸೂರು ಅಷ್ಟೇ ಅಲ್ಲ, ರಾಜ್ಯದ ಎಲ್ಲೆಡೆ ದಸರಾ ಕವಿಗೋಷ್ಠಿ ನಡೆಯುತ್ತದೆ. ಕಾವ್ಯದ ವೈವಿಧ್ಯಮಯ ಅಭಿವ್ಯಕ್ತಿಗೆ ಕವಿಗೋಷ್ಠಿಗಳು ಸಾಕ್ಷಿಯಾಗುತ್ತವೆ ಎಂದರು.
ಕವಿಗೋಷ್ಠಿ ಉದ್ಘಾಟಿಸಿದ ಡಾ. ದೇವಮ್ಮ ಮಾತನಾಡಿ, ಸಾಹಿತ್ಯದ ಸಂವೇದನೆ, ಕಾವ್ಯಗಳಲ್ಲಿ ಹೆಚ್ಚು ಪ್ರಕಟಗೊಳ್ಳುತ್ತದೆ. ಕವಿಗೋಷ್ಠಿಗಳು ಎಲ್ಲರಿಗೂ ಅನುಕರಣೀಯ ಹಾಗೂ ಆಪ್ತ ಕಾರ್ಯಕ್ರಮ, ಕವಿಗಳಂತೂ ಅತ್ಯುತ್ಸಾಹದಿಂದ ಇದರಲ್ಲಿ ಪಾಲ್ಗೊಳ್ಳುವುದೇ ಇದರ ಯಶಸ್ಸಿಗೆ ಕಾರಣ ಎಂದರು.
ಲೇಖಕಿ ಪಿ.ಜಿ. ಶಕುಂತಲ ಆಶಯ ನುಡಿಗಳನ್ನಾಡಿದರು.
ಕವಿಗೋಷ್ಠಿಯಲ್ಲಿ ಎಂ. ಪ್ರವೀಣ, ಪಿ. ಉಮಾದೇವಿ, ನಿರ್ಮಲ ಗೂಳರವೆ, ಪರಿಮಳ ಪಾರ್ವತಿ, ನಾಗರತ್ನ ಈಶ್ವರಯ್ಯ, ಉಷಾರಾಣಿ, ಮುತ್ಯಾಲಮ್ಮ, ಚಂದ್ರಕಲಾ, ಶಾಂತಕುಮಾರಿ, ಲಕ್ಷ್ಮೀದೇವಮ್ಮ, ಪ್ರಮೀಳಾ, ಸುಶೀಲಮ್ಮ, ಸಾವಿತ್ರಿ ಮತ್ತಿತರರು ಭಾಗವಹಿಸಿದ್ದರು.
ವಿ. ಜಯಮ್ಮ ದೇವಿಗೀತೆಗಳನ್ನು ಹಾಡಿದರು. ಪ್ರವೀಣಾ ಕಾರ್ಯಕ್ರಮ ನಿರೂಪಿಸಿದರು.

































