
ಯಾದಗಿರಿ:ಮಾ.೧: ಸಗರ ಪ್ರದೇಶದ ಮಹಲ್ ರೋಜಾ ಮಲ್ಲಿಕಾರ್ಜುನ ಮುತ್ಯಾರ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣದ ಬಗ್ಗೆ ಸಮಾಜದಲ್ಲಿ ವಿವಿಧ ರೀತಿಯ ಚರ್ಚೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ, ಸಂಪೂರ್ಣ ತನಿಖೆ ಪೂರ್ಣಗೊಳ್ಳುವವರೆಗೆ ಯಾರೂ ತೀರ್ಪು ನೀಡಬಾರದು ಎಂದು ಸಮಾಜಸೇವಕ ಮಹೇಶ್ ಜಾರಕಿಹೋಳಿ ಹೇಳಿದ್ದಾರೆ.ಈ ಕುರಿತು ಪ್ರಕಟಿಸಿದ ಹೇಳಿಕೆಯಲ್ಲಿ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಹಾಗೂ ಆರೋಪಗಳ ಆಧಾರದ ಮೇಲೆ ತಕ್ಷಣವೇ ನಿರ್ಣಯಕ್ಕೆ ಬರುವುದು ಸರಿಯಲ್ಲ. ಪ್ರಕರಣ ಕಾನೂನಿನ ವ್ಯಾಪ್ತಿಯಲ್ಲಿ ಇರುವುದರಿಂದ ತನಿಖಾ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ವಿಚಾರಣೆ ನಡೆಸಿ ಸತ್ಯವನ್ನು ಹೊರತರುವುದು ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು.ಯಾವುದೇ ಧಾರ್ಮಿಕ ಅಥವಾ ಸಾಮಾಜಿಕ ವ್ಯಕ್ತಿಯ ವಿರುದ್ಧ ಆರೋಪ ಬಂದಾಗ ಸಮಾಜದಲ್ಲಿ ಭಾವನಾತ್ಮಕ ಪ್ರತಿಕ್ರಿಯೆಗಳು ಸಹಜ. ಆದರೆ ಕಾನೂನು ವ್ಯವಸ್ಥೆಯ ಮೇಲೆ ವಿಶ್ವಾಸ ಇಟ್ಟು ಶಾಂತವಾಗಿ ನಡೆದುಕೊಳ್ಳಬೇಕು. ಅಪಪ್ರಚಾರ, ಊಹಾಪೋಹಗಳಿಂದ ಗೊಂದಲ ಉಂಟುಮಾಡುವುದು ಸರಿಯಲ್ಲ ಎಂದು ಮನವಿ ಮಾಡಿದರು.ಪೊಲೀಸ್ ಇಲಾಖೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದೆ. ಸಂಬAಧಪಟ್ಟವರ ಹೇಳಿಕೆಗಳನ್ನು ದಾಖಲಿಸಿ, ಸಾಕ್ಷ್ಯಾಧಾರಗಳನ್ನು ಪರಿಶೀಲಿಸಲಾಗುತ್ತಿದೆ. ಅಂತಿಮ ವರದಿ ಬಂದ ನಂತರವೇ ನಿಜಸ್ಥಿತಿ ಸ್ಪಷ್ಟವಾಗಲಿದೆ.ಭಕ್ತರು ಮತ್ತು ಸಾರ್ವಜನಿಕರು ಶಾಂತಿ ಕಾಪಾಡಿಕೊಂಡು ಕಾನೂನು ಪ್ರಕ್ರಿಯೆಗೆ ಸಹಕರಿಸಬೇಕು. ಸತ್ಯ ಹೊರಬರುವವರೆಗೆ ಯಾವುದೇ ರೀತಿಯ ಉದ್ವಿಗ್ನತೆ ಅಥವಾ ಗೊಂದಲಕ್ಕೆ ಅವಕಾಶ ನೀಡಬಾರದು ಎಂದು ಮಹೇಶ್ ಜಾರಕಿಹೋಳಿ ತಿಳಿಸಿದ್ದಾರೆ.



























