ಬೀದರ್: ಹೊಸದಾಗಿ ರಚಿಸಲಾದ ಗಾದಗಿ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಪರಿಶಿಷ್ಟ ಜಾತಿ (ಎಸ್ಸಿ) ಮೀಸಲಾತಿ ಕಲ್ಪಿಸದೆ ದಲಿತ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ. ಕೂಡಲೇ ಹಿಂದುಳಿದ ವರ್ಗ-ಅ (ಮಹಿಳೆ) ಮೀಸಲಾತಿ ರದ್ದುಪಡಿಸಿ, ಪರಿಶಿಷ್ಟ ಜಾತಿಗೆ ಮೀಸಲಿಡಬೇಕು. ಇಲ್ಲವಾದರೆ ಬೃಹತ್ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ದಲಿತ ಮುಖಂಡರಾದ ಪೀಟರ್ ಶ್ರೀಮಂಡಲ ಹಾಗೂ ಶಿವರಾಜ ಹಮಿಲಾಪುರ ಎಚ್ಚರಿಕೆ ನೀಡಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘೧೯೯೫ರಿಂದ ಈವರೆಗೂ ಮಳೆಗಾಂವ್ (ಪ್ರಸ್ತುತ ಗಾದಗಿ) ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಗೆ ಒಮ್ಮೆಯೂ ಮೀಸಲಾತಿ ಕಲ್ಪಿಸಿಲ್ಲ. ಕ್ಷೇತ್ರದಲ್ಲಿ ೧೫ ಸಾವಿರಕ್ಕೂ ಹೆಚ್ಚು ಪರಿಶಿಷ್ಟ ಜಾತಿಯ ಮತದಾರರಿದ್ದರೂ ರಾಜಕೀಯ ಪ್ರಾತಿನಿಧ್ಯದಿಂದ ವಂಚಿಸಲಾಗುತ್ತಿದೆ’ ಎಂದು ಆರೋಪಿಸಿದರು.
‘ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಪುನರ್ವಿಂಗಡಣೆ ಸಂದರ್ಭದಲ್ಲಿ ಗಾದಗಿ ಕ್ಷೇತ್ರವನ್ನು ಹೊಸದಾಗಿ ರಚಿಸಲಾಗಿದೆ. ಹೊಸ ಕ್ಷೇತ್ರಕ್ಕೆ ಮೊದಲ ಆದ್ಯತೆಯಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾತಿ ನೀಡಬೇಕೆಂಬುದು ನಮ್ಮ ಬೇಡಿಕೆ. ಆದರೆ, ಹಿಂದುಳಿದ ವರ್ಗ-ಅ (ಮಹಿಳೆ) ಮೀಸಲಾತಿ ನಿಗದಿಪಡಿಸಿರುವುದು ದಲಿತ ಸಮುದಾಯಕ್ಕೆ ಮಾಡಿದ ಅನ್ಯಾಯವಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಅಕ್ಟೋಬರ್ ೯ರಂದು ಪ್ರಕಟಿಸಲಾದ ಕರಡು ಮೀಸಲಾತಿ ಪಟ್ಟಿಗೆ ಆಕ್ಷೇಪ ವ್ಯಕ್ತಪಡಿಸಿ, ಅಕ್ಟೋಬರ್ ೧೫ರಂದು ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಲಾಗಿತ್ತು. ಆದರೂ ಆಕ್ಷೇಪಣೆಗಳನ್ನು ಪರಿಗಣಿಸದೆ ಅಕ್ಟೋಬರ್ ೧೯ರಂದು ಮೀಸಲಾತಿ ನಿಗದಿಪಡಿಸಲಾಗಿದೆ. ಸಮುದಾಯದ ಜನಸಂಖ್ಯೆ ಹಾಗೂ ಹಿಂದಿನ ಮೀಸಲಾತಿ ವ್ಯವಸ್ಥೆಯನ್ನು ಪರಿಗಣಿಸದೆ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ದೂರಿದರು.
‘ಚುನಾವಣೆ ಸಂದರ್ಭದಲ್ಲಿ ದಲಿತರ ಮತಗಳನ್ನು ಪಡೆಯುವ ಜನಪ್ರತಿನಿಧಿಗಳು, ರಾಜಕೀಯ ಅಧಿಕಾರ ನೀಡುವ ವಿಷಯದಲ್ಲಿ ಸಮುದಾಯವನ್ನು ಕಡೆಗಣಿಸುತ್ತಿದ್ದಾರೆ. ಸ್ಥಳಿಯ ಶಾಸಕ ರಹಿಮ್ ಖಾನ್ ಹಾಗೂ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಖಾತೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿ ಈಶ್ವರ ಖಂಡ್ರೆ ಅವರÀ ಧೋರಣೆಯಿಂದ ದಲಿತರು ರಾಜಕೀಯ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ’ ಎಂದು ಆರೋಪಿಸಿದರು.
‘ಸರ್ಕಾರ ಕೂಡಲೇ ಮೀಸಲಾತಿ ಪಟ್ಟಿಯನ್ನು ಮರು ಪರಿಶೀಲಿಸಿ, ಗಾದಗಿ ಜಿಲ್ಲಾ ಪಂಚಾಯಿತಿ ಕ್ಷೇತ್ರವನ್ನು ಪರಿಶಿಷ್ಟ ಜಾತಿಗೆ ಮೀಸಲು ಕ್ಷೇತ್ರವೆಂದು ಘೋಷಿಸಬೇಕು. ಇಲ್ಲದಿದ್ದರೆ ಕ್ಷೇತ್ರದ ವ್ಯಾಪ್ತಿಯ ಎಲ್ಲ ಗ್ರಾಮಗಳ ಜನರನ್ನು ಒಗ್ಗೂಡಿಸಿ ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಬೃಹತ್ ಧರಣಿ ಸತ್ಯಾಗ್ರಹ ನಡೆಸಲಾಗುವುದು. ಮುಂದಿನ ಬೆಳವಣಿಗೆಗಳಿಗೆ ಸರ್ಕಾರ ಮತ್ತು ಜಿಲ್ಲಾಡಳಿತವೇ ನೇರ ಹೊಣೆಯಾಗಬೇಕಾಗುತ್ತದೆ’ ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸ್ಯಾಮ್ಸನ್ ಚಿಲ್ಲರ್ಗಿ, ಜಸ್ಟಿನ್ ಚಿಮಕೋಡ, ಯಾದವ ಮಲ್ಕಾಪುರ, ಯೇಸುದಾಸ್ ಚಿಲ್ಲರ್ಗಿ, ರಾಹುಲ್ ರಾಯ್, ಸ್ಟೀವನ್ ಶ್ರೀಮಂಡಲ, ಬೆಂಜಮಿನ್ ಶ್ರೀಮಂಡಲ, ಸಂದೀಪ ಮಿರ್ಜಾಪುರ ಸೇರಿದಂತೆ ಇತರರು ಉಪಸ್ಥಿತರಿದ್ದರು.




















