
ಕಲಬುರಗಿ:ಜೂ.14: ಭಾರತ ದೇಶ ಜಗತ್ತಿನ ಅತೀ ದೊಡ್ಡ ಆರ್ಥಿಕ ದೇಶವಾಗಿ ಹೊರಹೊಮ್ಮಿದೆ. ತ್ರಿವಳಿ ತಲಾಕ್ ತೆಗೆದಿದ್ದಕ್ಕೆ ಮುಸ್ಲಿಮ್ ಹೆಣ್ಮಕ್ಕಳಿಗೆ ಗೌರವ ಸಿಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಮುಸ್ಲಿಮರ ವಿರೋಧಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಹೇಳಿದರು.
ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶವನ್ನು ಒಡೆಯುವವರ ವಿರುದ್ಧ, ಪಾಕಿಸ್ತಾನ್ ಜಿಂದಾಬಾದ್ ಎನ್ನುವವರ ವಿರುದ್ಧ ಮೋದಿ. ಕಾಂಗ್ರೆಸ್ ಥರ ನಾವು ಅಲ್ಪಸಂಖ್ಯಾತರನ್ನು ಒಲೈಕೆ ಮಾಡೋದಿಲ್ಲ ಎಂದರು.
ದಕ್ಷಿಣ ಕನ್ನಡದಲ್ಲಿ ಕೋಮು ನಿಗ್ರಹ ದಳ ಸ್ಥಾಪನೆ ಮಾಡಲಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆನ ಕಾಪಾಡಬೇಕು ಎನ್ನುವ ದೃಷ್ಟಿಯಿಂದ ನಿಗ್ರಹ ದಳ ಮಾಡಿಲ್ಲ. ಬದಲಾಗಿ ಬಿಜೆಪಿ ಕಾರ್ಯಕರ್ತರನ್ನ, ಹಿಂದೂ ಕಾರ್ಯಕರ್ತರ ನಿಗ್ರಹಕ್ಕೆ ಕೋಮು ನಿಗ್ರಹ ದಳ ಮಾಡಲಾಗಿದೆ. ನಿಮ್ಮ ಯಾವುದೇ ಷಡ್ಯಂತ್ರಕ್ಕೆ, ಬೆದರಿಕೆಗೆ ನಮ್ಮ ಕಾರ್ಯಕರ್ತರು ಬಗ್ಗುವುದಿಲ್ಲ ಎಂದು ಅವರು ಎಚ್ಚರಿಸಿದರು.
ಪ್ರಧಾನಿ ನರೇಂದ್ರ ಮೋದಿ ಸರ್ಕಾರದ 11 ವರ್ಷಗಳ ಸಾಧನೆಗೆ ಸಿದ್ದರಾಮಯ್ಯ ಶೂನ್ಯ ಅಂಕ ನೀಡಿದ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಿನ್ನೆ ಸಿದ್ಧರಾಮಯ್ಯ ದೆಹಲಿಗೆ ಹೋಗಿದ್ದರು. ಅದಕ್ಕಾಗಿ ಅವರಿಗೆ ಅಭಿನಂದನೆಗಳನ್ನ ತಿಳಿಸುತ್ತೇನೆ. ಅದ್ಯಾವಾಗ ಸರ್ಕಾರದ ವಿರುದ್ಧ ಬಿಜೆಪಿ ಬೀದಿಗಿಳಿದು ಹೋರಾಟ ಮಾಡುವುದಕ್ಕೆ ಶುರು ಮಾಡ್ತೋ. ಮೋದಿ ಸರ್ಕಾರಕ್ಕೆ ಸಿದ್ಧರಾಮಯ್ಯ ಸರ್ಟಿಫಿಕೇಟ್ ಕೊಡುವ ಅಗತ್ಯವಿಲ್ಲ. ರಾಜ್ಯ ಸರ್ಕಾರದ ಬಗ್ಗೆ ಜನ ಬೀದಿ ಬೀದಿಯಲ್ಲಿ ಮಾತಾಡ್ತಿದಾರೆ. ಸುಳ್ಳನ್ನ ಹೇಳೊದ್ರಲ್ಲಿ ಸಿದ್ಧರಾಮಯ್ಯ ನಿಸ್ಸಿಮರು. ಹಿಂದೆ ನಮ್ಮ ಸರ್ಕಾರಕ್ಕೆ ಶೇಕಡಾ 40ರಷ್ಟು ಕಮಿಷನ್ ಸರ್ಕಾರ ಎಂದು ಆರೋಪಿಸಿದ್ದರು. ಆದರೆ ಆರೋಪ ಸುಳ್ಳಾಯಿತು. ಕೇಂದ್ರ ಸರ್ಕಾರದ ಯೋಜನೆಗಳಿಗೆ ಕಲ್ಲು ಹಾಕೋ ಕೆಲಸ ರಾಜ್ಯ ಸರ್ಕಾರ ಮಾಡುತ್ತಿದೆ. ರಾಜ್ಯ ಸರ್ಕಾರಕ್ಕೆ ಅಭಿವೃದ್ಧಿ ಯೋಜನೆಗಳಿಗೆ ಕೊಡಲು ಹಣವಿಲ್ಲ ಎಂದು ಅವರು ಆರೋಪಿಸಿದರು.
ಯುಪಿಎ ಸರ್ಕಾರದ ಅವಧಿಯಲ್ಲಿ ಭಾರಿ ಹಗರಣಗಳು ನಡೆದಿದ್ದವು. ಬಳಿಕ ಎನ್‍ಡಿಎ ಅವಧಿಯಲ್ಲಿ ಈ ದೇಶಕ್ಕೆ ಉಜ್ವಲ ಭವಿಷ್ಯವಿದೆ; ಭಾರತದಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನೀಡಲು ಸಾಧ್ಯವಿದೆ ಎಂಬುದನ್ನು ನರೇಂದ್ರ ಮೋದಿ ಅವರ ಸರ್ಕಾರ ಸಾಬೀತುಪಡಿಸಿದೆ. ಭಾರತವು ಇತರ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿಗೆ ತಲುಪಬಹುದು ಎಂಬ ವಿಶ್ವಾಸವನ್ನು ನರೇಂದ್ರ ಮೋದಿ ಅವರ ಸರ್ಕಾರ ನೀಡಿದೆ. 11 ವರ್ಷಗಳ ನರೇಂದ್ರ ಮೋದಿ ಅವರ ಸರ್ಕಾರವು ದಿಟ್ಟ ನಿರ್ಧಾರ ತೆಗೆದುಕೊಂಡು ಭಾರತವನ್ನು ಸದೃಢವಾಗಿ ಮುನ್ನಡೆಸಿ ದೇಶದ ಜನತೆಗೆ ಸಂತಸ ಕೊಟ್ಟಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
2047ರಲ್ಲಿ ಈ ದೇಶವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಪರಿವರ್ತನೆ ಆಗಬೇಕೆಂಬ ನಿಟ್ಟಿನಲ್ಲಿ ವಿಶ್ವಾಸ ತುಂಬುವ ರೀತಿಯಲ್ಲಿ ಪ್ರಧಾನಿಯವರು ಭಾರತವನ್ನು ಮುನ್ನಡೆಸುತ್ತಿದ್ದಾರೆ. ಕಳೆದ 11 ವರ್ಷಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವ ಉತ್ತಮ ಆಡಳಿತವನ್ನು ಮೋದಿ ಅವರು ನೀಡಿದ್ದಾರೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸತತವಾಗಿ 3ನೇ ಬಾರಿ ಅಧಿಕಾರಕ್ಕೆ ಬಂದು 11 ವರ್ಷಗಳನ್ನು ಪೂರೈಸಿದ ಶುಭ ಗಳಿಗೆ ಇದು. ಮೋದಿ ಅವರು 2014ರಲ್ಲಿ ಪ್ರಧಾನಿಯಾದರು. ಅದಕ್ಕೂ ಮುಂಚಿತವಾಗಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿ ತಮ್ಮದೇ ಆದ ಅನುಭವವನ್ನು ಪಡೆದವರು ಎಂದು ಅವರು ಹೇಳಿದರು.
ಆಂತರಿಕ ಭದ್ರತೆ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹಿರಿಮೆ ಗರಿಮೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಸಾಕ್ಷಿಯಾಗಿದೆ. 10-15 ವರ್ಷಗಳ ಹಿಂದೆ ದೇಶವು ಉಗ್ರಗಾಮಿ ಚಟುವಟಿಕೆಗಳಿಂದ ತತ್ತರಿಸಿ ಹೋಗಿತ್ತು. ನಕ್ಸಲಿಸಂ ಪಿಡುಗು ದೇಶದ ಅನೇಕ ರಾಜ್ಯಗಳಿಗೆ ವಿಸ್ತರಿಸಿ ದೇಶದಲ್ಲಿ ಅಸ್ಥಿರತೆ ಕಾಡುತ್ತಿತ್ತು. ಭಾರತದ ಬಗ್ಗೆ ಜಗತ್ತಿನಲ್ಲಿ ವಿಶ್ವಾಸ ಬರುತ್ತಿರಲಿಲ್ಲ ಎಂದು ಬಿ.ವೈ. ವಿಜಯೇಂದ್ರ ತಿಳಿಸಿದರು. ನರೇಂದ್ರ ಮೋದಿ ಅವರು ಮತ್ತು ಅಮಿತ್ ಶಾ ಅವರ ದಿಟ್ಟ ನಿರ್ಧಾರದಿಂದ ನಕ್ಸಲಿಸಂ ಬಹುತೇಕ ಬುಡಸಮೇತ ಕಿತ್ತು ಹಾಕಲು ಸಾಧ್ಯವಾಗಿದೆ. 370ನೇ ವಿಧಿ ರದ್ದು ಮಾಡುವ ಕುರಿತು ಬಿಜೆಪಿ ಪ್ರಣಾಳಿಕೆಯಲ್ಲಿ ಘೋಷಿಸಿತ್ತು. 370ನೇ ವಿಧಿ ರದ್ದು ಮಾಡುವ ಮೂಲಕ ಜಮ್ಮು- ಕಾಶ್ಮೀರದಲ್ಲಿ ಶಾಂತಿ ಕಾಪಾಡುವ ಸ್ಥಿತಿ ನಿರ್ಮಾಣವಾಗಿದೆ. ಲಕ್ಷ ಲಕ್ಷ ಸಂಖ್ಯೆಯ ಪ್ರವಾಸಿಗರು ಅಲ್ಲಿಗೆ ಭೇಟಿ ಕೊಡುತ್ತಿದ್ದಾರೆ ಎಂದು ಅವರು ಕೇಂದ್ರದ ಸಾಧನೆಗಳನ್ನು ವಿವರಿಸಿದರು.
ಜಿಎಸ್‍ಟಿ ಮೂಲಕ 1 ಲಕ್ಷದ 12 ಸಾವಿರ ಕೋಟಿ ಮೊತ್ತ ಕರ್ನಾಟಕಕ್ಕೆ ಬಂದಿದೆ. ಕರ್ನಾಟಕವು ಗರಿಷ್ಠ ಜಿಎಸ್‍ಟಿ ಮೊತ್ತವನ್ನು ಪಡೆದ ರಾಜ್ಯ ಎಂದು ತಿಳಿಸಿದ ಅವರು, ಕೇಂದ್ರ ಸರ್ಕಾರದ ಯೋಜನೆಗಳಿಗೆ ಕಲ್ಲು ಹಾಕುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಟೀಕಿಸಿದರು.
ಬಹಿರಂಗ ಚರ್ಚೆಗೆ ಸವಾಲು:
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‍ಸಿಬಿ ವಿಜಯೋತ್ಸವದ ಕಾಲಕ್ಕೆ ಕಾಲ್ತುಳಿತದಲ್ಲಿ ಹನ್ನೊಂದು ಜನರ ಸಾವಿನ ಪ್ರಕರಣಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ನೇರ ಹೊಣೆಗಾರರು. ಈ ಕುರಿತು ಅವರಿಬ್ಬರೂ ಬಹಿರಂಗ ಚರ್ಚೆಗೆ ಬರಲಿ ಎಂದು ಬಿ.ವೈ. ವಿಜಯೇಂದ್ರ ಅವರು ಸವಾಲು ಹಾಕಿದರು.
ಪುಕ್ಕಟೆ ಪ್ರಚಾರ ಗಿಟ್ಟಿಸುವ ಮುಖ್ಯಮಂತ್ರಿ- ಉಪ ಮುಖ್ಯಮಂತ್ರಿಗಳ ಹಪಾಹಪಿಯಿಂದ ಆರ್‍ಸಿಬಿ ವಿಜಯೋತ್ಸವದಲ್ಲಿ ಅಮಾಯಕರನ್ನು ಬಲಿ ತೆಗೆದುಕೊಂಡರು ಎಂದು ಟೀಕಿಸಿದ ಅವರು, ವಿಧಾನಸೌಧಕ್ಕೆ ತನ್ನದೇ ಆದ ಒಂದು ಇತಿಹಾಸವಿದೆ. ಆ ಸ್ಥಳದಲ್ಲಿ ಆರ್‍ಸಿಬಿ ತಂಡವನ್ನು ಅಭಿನಂದಿಸುವ ಕಾರ್ಯಕ್ರಮ ಮಾಡಬಾರದಿತ್ತು. ಆದಾಗ್ಯೂ, ಅಲ್ಲಿ ಸೇರಿದ ಜನರೇ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆಟಗಾರರನ್ನು ನೋಡಲು ಧಾವಿಸಿದೆ. ಹೀಗಾಗಿ ಕಾಲ್ತುಳಿತದಲ್ಲಿ ಹನ್ನೊಂದು ಜನರು ಮೃತಪಟ್ಟರು ಎಂದು ದೂರಿದರು.
ಕಾಲ್ತುಳಿತಕ್ಕೆ ಪೆÇಲೀಸ್ ಅಧಿಕಾರಿಗಳು ಕಾರಣಕರ್ತರಲ್ಲ. ಹಿರಿಯ ಪೆÇಲೀಸ್ ಅಧಿಕಾರಿಗಳನ್ನು ಅಮಾನತು ಮಾಡುವ ಮೂಲಕ ಅವಿವೇಕತನದಿಂದ ನಡೆದುಕೊಂಡಿದ್ದು, ಇದು ಅಕ್ಷಮ್ಯ ಅಪರಾಧ ಎಂದು ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಬಗಲಿ, ನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್, ಶಾಸಕರಾದ ಶಶೀಲ್ ಜಿ. ನಮೋಶಿ, ಸುನೀಲ್ ವಲ್ಲ್ಯಾಪೂರೆ, ಬಸವರಾಜ್ ಮತ್ತಿಮೂಡ್, ಡಾ. ಬಿ.ಜಿ. ಪಾಟೀಲ್, ಡಾ. ಅವಿನಾಶ್ ಜಾಧವ್, ರಾಜ್ಯ ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ್ ಪಾಟೀಲ್, ಮಾಜಿ ಶಾಸಕ ಸುಭಾಷ್ ಆರ್. ಗುತ್ತೇದಾರ್, ಶಿವರಾಜ್ ಪಾಟೀಲ್ ರದ್ದೇವಾಡಗಿ, ನಿತಿನ್ ಗುತ್ತೇದಾರ್, ಮಹಾದೇವ್ ಬೆಳಮಗಿ, ಉಮೇಶ್ ಪಾಟೀಲ್, ಶಿವು ನಾಗನಳ್ಳಿ, ಮಹೇಶರೆಡ್ಡಿ, ಸುಂದರ್ ಕುಲಕರ್ಣಿ, ಶರಣು ಸಜ್ಜನ್, ಅಪ್ಪು ಕಣಕಿ, ವರದಾಶಂಕರಶೆಟ್ಟಿ, ಶ್ರೀನಿವಾಸ್ ದೇಸಾಯಿ, ಮಹೇಶ್ ಚವ್ಹಾಣ್, ಚನ್ನು ಭಗ್ಗಿ, ಗಂಗಾಧರ್ ಬಿಲಗುಂದಿ, ಅಶೋಕ್ ಮನಕರ್, ಸಂಗಮೇಶ್ ಮುನವಳ್ಳಿ, ಶಾಂತು ದುಧನಿ, ಸಂತೋಷ ಹಾದಿಮನಿ, ನಾಗರಾಜ್ ಮಹಾಗಾಂವ್ ಮುಂತಾದವರು ಉಪಸ್ಥಿತರಿದ್ದರು.