ಪ್ಲಾಸ್ಟಿಕ್ ಮುಕ್ತ ಬಸವನಗುಡಿ ಕಡಲೆಕಾಯಿ ಪರಿಷೆ

ಬೆಂಗಳೂರು,ನ.೧೨-ಮಲ್ಲೇಶ್ವರಂ ಕಡಲೆಕಾಯಿ ಪರಿಷೆ ಅಂತ್ಯಗೊಳ್ಳುತ್ತಿದ್ದಂತೆ, ಬಸವನಗುಡಿ ಕಡಲೆಕಾಯಿ ಪರಿಷೆಗೆ ಕ್ಷಣಗಣನೆ ಆರಂಭವಾಗಿದೆ.ಬಸವನಗುಡಿ ಕಡಲೆ ಕಾಯಿ ಪರಿಷೆ ಬೆಂಗಳೂರು ನಗರದ ಬಸವನಗುಡಿ ಪ್ರದೇಶದಲ್ಲಿ ನಡೆಯುವ ವಾರ್ಷಿಕ ನೆಲಗಡಲೆ ಜಾತ್ರೆ. ಬಸವನಗುಡಿ ಕಡಲೆ ಕಾಯಿ ಪರಿಷೆಯನ್ನು ಬುಲ್ ಟೆಂಪಲ್ ರಸ್ತೆಯ ಎರಡೂ ಬದಿಗಳಲ್ಲಿ ಮತ್ತುಸುತ್ತಮುತ್ತಲಿನ ಪ್ರದೇಶದಲ್ಲಿ ಎರಡು ದಿನಗಳ ಕಾಲ ನಡೆಸಲಾಗುತ್ತದೆ.


ಎಲ್ಲೆಂದರಲ್ಲಿ ಕಸ ಎಸೆಯುವ ಬೆಂಗಳೂರಿನ ಜನತೆಗೆ ದಂಡ ಮತ್ತು ಕಸ ಎಸೆದವರ ಮನೆ ಮುಂದೆ ಕಸ ಎಸೆದು ಕಸ ಹಬ್ಬ ಆಚರಿಸುವ ಮೂಲಕ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಿದ ಜಿಬಿಎ ಇದೀಗ ಸಾಂಪ್ರದಾಯಿಕ ಹಬ್ಬ ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಯಲ್ಲಿ ಕಸ ಎಸೆದವರಿಗೆ ದಂಡ ವಿಧಿಸಲು ಜಿಬಿಎ ತಯಾರಿ ನಡೆಸಿದೆ. ಇದೇ ೧೭ರಂದು ಬಸವನಗುಡಿಯಲ್ಲಿ ನಡೆಯಲಿರುವ ಕಡಲೆಕಾಯಿ ಪರಿಷೆಗೆ ಭರದ ಪ್ರಾರಂಭವಾಗಿದೆ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ, ಸ್ಥಳೀಯ ಶಾಸಕರು ಮತ್ತು ಜಿಬಿಎ ಅಧಿಕಾರಿಗಳ ನೇತೃತ್ವದಲ್ಲಿ ಪರಿಶೀಲನಾ ಸಭೆ ನಡೆಸಲಾಗಿದೆ ಮತ್ತು ಪ್ಲಾಸ್ಟಿಕ್ ಮುಕ್ತ ಪರಿಷೆ ಆಚರಿಸಲು ನಿರ್ಧರಿಸಲಾಗಿದೆ. ಇದಲ್ಲದೆ, ಪರಿಷೆಗೆ ಭೇಟಿ ನೀಡುವವರು ಎಲ್ಲಿಯೂ ಕಸ ಹಾಕಿದಂತೆ ಜಿಬಿಎ ಈ ಬಗ್ಗೆ ಜಾಗೃತಿ ಮೂಡಿಸಲು ಸಹ ಯೋಜಿಸಿದೆ. ಹೆಚ್ಚುವರಿಯಾಗಿ, ಎಲ್ಲಿಯಾದರೂ ಕಸ ಹಾಕಿದರೆ, ಅಂತವರಿಗೆ ಎರಡು ಸಾವಿರ ರೂಪಾಯಿಗಳವರೆಗೆ ದಂಡ ವಿಧಿಸಬಹುದು. ಮಾರ್ಷಲ್‌ಗಳನ್ನು ಸಹ ನಿಯೋಜಿಸಲಾಗಿದೆ.


ಈ ಬಾರಿ ಈ ಪ್ರದೇಶ ಪ್ಲಾಸ್ಟಿಕ್ ಮುಕ್ತ ವಲಯವಾಗಿದ್ದು, ಅಂಗಡಿಗಳಲ್ಲಿ ಪ್ಲಾಸ್ಟಿಕ್ ಚೀಲಗಳನ್ನು ಬಳಸುವಂತಿಲ್ಲ. ಒಂದು ವೇಳೆ ಬಳಸಿದರೆ ಎರಡು ಸಾವಿರ ರೂಪಾಯಿಗಳವರೆಗೆ ದಂಡ ವಿಧಿಸಬಹುದು ಎಂದು ಜಿಬಿಎ ಪಶ್ಚಿಮ ಪುರಸಭೆ ಆಯುಕ್ತ ಕೆ.ವಿ. ರಾಜೇಂದ್ರ ಎಚ್ಚರಿಸಿದ್ದಾರೆ.