ವಿಜಯಪುರವನ್ನು ಸ್ಟಾರ್ಟ್‍ಅಪ್ ಹಬ್ ಮಾಡಲು ಯೋಜನೆ: ಸುನೀಲಗೌಡ

ವಿಜಯಪುರ.ಮೇ.18: ಶ್ರೀ ಬಿ. ಎಂ. ಪಾಟೀಲ ಪೌಂಢೇಶನ್ ಪಾರ್ ಇನ್ನೊವೇಶನ್ ಆಂಡ್ ಇನಕ್ಯೂಬೇಶನ್ ವತಿಯಿಂದ ವಿಜಯಪುರವನ್ನು ಸ್ಟಾರ್ಟ್‍ಅಪ್ ಹಬ್ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ಬಿ.ಎಲ್.ಡಿ.ಇ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮತ್ತು ಪೌಂಢೇಶನ್ ನಿರ್ದೇಶಕ ಹಾಗೂ ವಿಧಾನ ಪರಿಷತ್À ಶಾಸಕ ಸುನೀಲಗೌಡ ಪಾಟೀಲ ಹೇಳಿದ್ದಾರೆ.
ಶನಿವಾರ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜಿನೀಯರಿಂಗ್ ಕಾಲೇಜಿನಲ್ಲಿ ಪ್ರಾರಂಭವಾದ ಶ್ರೀ ಬಿ. ಎಂ. ಪಾಟೀಲ ಪೌÀಂಢೇಶನ್ ಹ್ಯಾಕ್ ವ್ಯೂಹ್- 2025 ಎರಡು ದಿನಗಳ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀ ಬಿ. ಎಂ. ಪಾಟೀಲ ಪೌಂಢೇಶನ್ ಪಾರ್ ಇನ್ನೊವೇಶನ್ ಆಂಡ್ ಇನಕ್ಯೂಬೇಶನ್ ಈಗಾಗಲೇ ನಾನಾ ಕಂಪನಿಗಳ ಜೊತೆ ಶೈಕ್ಷಣಿಕ ಒಡಂಬಡಿಕೆ ಮಾಡಿಕೊಂಡಿದ್ದು, ದೇಶದ ಹೆಸರಾಂತ ಕಂಪನಿಗಳಲ್ಲಿ ಉದ್ಯೋಗ ಒದಗಿಸಲು ಯೋಜನೆ ರೂಪಿಸಿದೆ ಎಂದು ಅವರು ತಿಳಿಸಿದರು.
ಇಂಥ ಕಾರ್ಯಕ್ರಮಗಳ ಮೂಲಕ ಯುವಕರಲ್ಲಿ ನಾವಿನ್ಯತೆ ಮತ್ತು ತಂಡವಾಗಿ ಕೆಲಸ ಮಾಡುವುದರಿಂದ ಸಿಗುವ ಲಾಭ ಮತ್ತು ಕನಸುಗಳನ್ನು ನನಸಾಗಿಸುವ ನಿಟ್ಟಿನಲ್ಲಿ ಭವಿಷ್ಯದ ಯೋಜನೆಗಳ ಬಗ್ಗೆ ರೂಪುರೇಷೆ ಕೈಗೊಳ್ಳಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಬಿ.ಎಲ್.ಡಿ.ಇ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದು, ಗುಣಮಟ್ಟದ ಶಿಕ್ಷಣ ಜೊತೆಗೆ ಸಂಸ್ಥೆ ಮತ್ತು ಉದ್ಯಮಗಳ ಮಧ್ಯ ಸೇತುವೆಯಾಗಿ ಕೆಲಸ ಮಾಡುತ್ತಿದೆ. ಅಷ್ಟೆ ಅಲ್ಲ, ವಿದ್ಯಾರ್ಥಿಗಳಿಗೆ ವೃತ್ತಿ ನೈಪುಣ್ಯತೆ ತರಬೇತಿ ನೀಡುವ ಮೂಲಕ ಆಧುನಿಕ ಅಗತ್ಯಗಳಿಗೆ ತಕ್ಕಂತೆ ಅವಕಾಶಗಳತ್ತ ಸಿದ್ದಪಡಿಸುತ್ತಿದೆ. ಈ ಕಾರ್ಯಕ್ರಮ ಕೇವಲ ಸ್ಪರ್ಧೆ ಮಾತ್ರವಲ್ಲ ಭವಿಷ್ಯವನ್ನು ಸಂಭ್ರಮಿಸುವ ಶುಭ ಗಳಿಗೆಯಾಗಿದೆ ಎಂದು ಅವರು ತಿಳಿಸಿದರು.
ಶ್ರೀ ಬಿ. ಎಂ. ಪಾಟೀಲ ಪೌಂಢೇಶನ್ ಉನ್ನತ ಕೌಶಲ್ಯ, ಸ್ಟಾರ್ಟ್‍ಅಪ್ ಅಭಿವೃದ್ಧಿ, ತ್ವರಿತವಾಗಿ ಮಾದರಿಗಳ ತಯಾರಿಕೆ ಕುರಿತು ತರಬೇತಿ ನೀಡುವ ಮೂಲಕ ನವ ಉದ್ಯಮಿಗಳ ಕನಸು ನನಸಾಗಿಸುವ ಗುರಿ ಹೊಂದಿದೆ. ಈ ಮೂಲಕ ಮುಂದಿನ ಮೂರು ವರ್ಷಗಳಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ಮಾತ್ರವಲ್ಲ. ದೇಶದ ಎಲ್ಲ ರಾಜ್ಯಗಳ ಯುವ ಪ್ರತಿಭಾವಂತ ವಿದ್ಯಾರ್ಥಿಗಳು ಗುಣಮಟ್ಟದ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳ ಮೂಲಕ ತಮ್ಮಲ್ಲಿರುವ ಪ್ರತಿಭೆಯನ್ನು ಜಗತ್ತಿಗೆ ಪರಿಚಯಿಸಲು ಬದ್ದವಾಗಿದೆ ಎಂದು ಅವರು ತಿಳಿಸಿದರು.
ಅಷ್ಟೇ ಅಲ್ಲ, ಬಿ.ಎಲ್.ಡಿ.ಇ ಸಂಸ್ಥೆಯು ಎರಡು ಕಡೆ ಅಟಲ್ ಟಿಂಕರಿಂಗ್ ಲ್ಯಾಬ್ ಪ್ರಾರಂಭಿಸುವ ಮೂಲಕ ಐದನೇ ತರಗತಿಯಿಂದಲೇ ವಿದ್ಯಾರ್ಥಿಗಳನ್ನು ಸಂಶೋಧನೆಯತ್ತ ಆಕರ್ಷಿಸಲು ಕ್ರಮ ಕೈಗೊಂಡಿದೆ. ಅಲ್ಲದೇ, ಬೇರೆ ಶಾಲೆಗಳ ವಿದ್ಯಾರ್ಥಿಗಳಿಗೆ ಲ್ಯಾಬ್‍ನಲ್ಲಿ ಕಾರ್ಯ ನಿರ್ವಹಿಸುವ ನುರಿತ ಶಿಕ್ಷಕರ ಮೂಲಕ ತರಬೇತಿ ಒದಗಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಸುನೀಲಗೌಡ ಪಾಟೀಲ ತಿಳಿಸಿದರು.
ಸ್ಪ್ರಿಂಗ್‍ಅಪ್ ಲ್ಯಾಬ್ಸ್‍ನ ಸಂಸ್ಥಾಪಕ ಮತ್ತು ಸಿ.ಇ.ಓ ಸಂತೋಷ ಕೊಟ್ನಿಸ್ ಮಾತನಾಡಿ, ಇಂಥ ಕಾರ್ಯಕ್ರಮಗಳು ಯುವಕರ ಸಣ್ಣ ಕನಸುಗಳನ್ನು ದೊಡ್ಡ ಯೋಜನೆಗಳಾಗಿ ಮಾರ್ಪಡಿಸಲು ಸಹಾಯ ಮಾಡುತ್ತದೆ. ಅಲ್ಲದೇ, ಯುವಕರಿಗೆ ಹೊಸ ಅವಕಾಶಗಳತ್ತ ಮಾರ್ಗ ತೋರಿಸುತ್ತವೆ. ಈ ಮುಂಚೆ ದೇಶದ ಶೇ 95 ರಷ್ಟು ಯುವ ಎಂಜಿನೀಯರಗಳು ಉದ್ಯೋಗಕ್ಕಾಗಿ ಅಮೇರಿಕಾ ಸೇರಿದಂತೆ ನಾನಾ ದೇಶಗಳಿಗೆ ಹೋಗುತ್ತಿದ್ದರು. ಆದರೆ ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದ್ದು, ಶೇ. 95 ರಷ್ಟು ಪ್ರತಿಭಾವಂತರು ಭಾರತದಲ್ಲಿಯೇ ಉದ್ಯಮ ಪ್ರಾರಂಭಿಸುತ್ತಿದ್ದಾರೆ. ಕೇವಲ ಶೇ. 5 ರಷ್ಟು ಜನರು ಮಾತ್ರ ವಿದೇಶಗಳಿಗೆ ಹೋಗುತ್ತಿದ್ದಾರೆ. ದೇಶದ ಪ್ರತಿಭೆಗಳ ಲಾಭ ನಮಗೆ ಸಿಗುತ್ತಿರುವುದು ಸಂತೋಷ ವಿಷಯವಾಗಿದೆ ಎಂದು ಹೇಳಿದರು.
ಎಂಜಿನೀಯರಿಂಗ್ ಕಾಲೇಜಿನ ನಿರ್ದೇಶಕ ಮತ್ತು ಪ್ರಾಚಾರ್ಯ ಡಾ. ವಿ. ಜಿ ಸಂಗಮ ಮಾತನಾಡಿ, ಇಂಥ ಕಾರ್ಯಕ್ರಮಗಳು ಯುವಕರ ಆಲೋಚನೆಗಳಿಗೆ ಪೂರಕವಾಗಿದ್ದು, ಮುಂದಿನ ಹಂತದ ಸ್ಪರ್ಧೆಗೆ ಸಹಕಾರಿಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಇನ್ನೋವಾಸ್ಕೇಪ್ ಸಂಸ್ಥಾಪಕ ಎಸ್. ಬದರಿ ನಾರಾಯಣ, ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಸಚಿವ ಡಾ. ಆರ್.ವಿ. ಕುಲಕರ್ಣಿ ಉಪಸ್ಥಿತರಿದ್ದರು.
ಅಮೃತಾ ಹಿರೇಮಠ ಮತ್ತು ಸಂಘಡಿಗರು ಪ್ರಾರ್ಥಿಸಿದರು, ಡಾ. ಆಶಾ ಪಾಟೀಲ ಪರಿಚಯಿಸಿದರು. ಡಾ. ವೈ. ಎ. ಕುಲಕರ್ಣಿ ನಿರೂಪಿಸಿದರು.