ಛಾಯಾಗ್ರಾಹಕರು ಅಸಂಘಟಿತ ಕಾರ್ಮಿಕರು

ಕೋಲಾರ.ಆ,೨೦- ಸರಕಾರ ಛಾಯಾಗ್ರಾಹಕರನ್ನು ಅಸಂಘಟಿತ ಕಾರ್ಮಿಕರನ್ನಾಗಿ ಪರಿಗಣಿಸಿದ್ದು, ಪ್ರತಿಯೊಬ್ಬ ಛಾಯಾಗ್ರಾಹಕರು ನೋಂದಣಿಯಾಗಿ ಗುರುತಿನ ಚೀಟಿ ಪಡೆದುಕೊಂಡು ಸರಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದು ಕೋಲಾರ ಜಿಲ್ಲಾ ಛಾಯಾಗ್ರಾಹಕರ ಸಂಘದ ಜಿಲ್ಲಾಧ್ಯಕ್ಷ ವಿ.ಕೃಷ್ಣ ಹೇಳಿದರು.


ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ೧೮೬ ನೇ ವಿಶ್ವ ಛಾಯಾಗ್ರಾಹಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ಕಳೆದವರ್ಷ ಛಾಯಾಗ್ರಾಹಕರ ದಿನಾಚರಣೆಗೆ ಅತಿಥಿಯಾಗಿ ಆಗಮಿಸಿದ್ದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್‌ಗೆ ನೀಡಿದ ಮನವಿಯಂತೆ ಸರಕಾರ ಛಾಯಾಗ್ರಾಹಕರನ್ನು ಅಸಂಘಟಿತ ಕಾರ್ಮಿಕರನ್ನಾಗಿ ಗುರುತಿಸಿದೆ ಎಂದು ಧನ್ಯವಾದ ಅರ್ಪಿಸಿದರು.


ಕೋಲಾರ ಜಿಲ್ಲೆಯಲ್ಲಿ ಸುಮಾರು ೧ ಸಾವಿರ ಮಂದಿ ಛಾಯಾಗ್ರಾಹಕರಿದ್ದು, ಪ್ರತಿ ತಿಂಗಳು ಛಾಯಾಗ್ರಾಹಕರು ಗ್ರಾಮೀಣ ಬ್ಯಾಂಕ್ ಮೂಲಕ ೧ ಕೋಟಿ ರೂಪಾಯಿ ವಹಿವಾಟು ನಡೆಸುತ್ತಿದ್ದಾರೆ, ಛಾಯಾಗ್ರಾಹಕರ ಸಂಘಟಿತರಾಗಿ ಮತ್ತಷ್ಟು ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದರು.


ಕಾರ್ಯಕ್ರಮ ಉದ್ಘಾಟಿಸಿದ್ದ ಜಿಲ್ಲಾ ಕಾರ್ಮಿಕ ಅಧಿಕಾರಿ ಆರ್.ವರಲಕ್ಷ್ಮಿ ಮಾತನಾಡಿ, ಪ್ರಸ್ತುತ ಛಾಯಾಗ್ರಾಹಕರನ್ನು ಅಸಂಘಟಿತ ಕಾರ್ಮಿಕರನ್ನಾಗಿ ಸರಕಾರ ಗುರುತಿಸಿದ್ದು, ೧೬ ವರ್ಷದಿಂದ ೬೦ ವಯಸ್ಸಿನೊಳಗಿನ ಪ್ರತಿಯೊಬ್ಬರೂ ಸ್ಮಾರ್ಟ್ ಕಾರ್ಡ್ ಪಡೆದುಕೊಳ್ಳುವ ಮೂಲಕ ಅಪಘಾತ ವಿಮೆ, ಅಂತ್ಯಸಂಸ್ಕಾರ ನೆರವು ಇತ್ಯಾದಿಗಳನ್ನು ಪಡೆದುಕೊಳ್ಳಬೇಕು, ಸದ್ಯಕ್ಕೆ ಕೋಲಾರ ಜಿಲ್ಲೆಯಲ್ಲಿ ೧೩೦ ಮಂದಿ ಮಾತ್ರ ನೋಂದಣಿಯಾಗಿದ್ದಾರೆ, ಸ್ಮಾರ್ಟ್ ಕಾರ್ಡ್ ಜೊತೆಗೆ ಇ-ಶ್ರಮ್ ನೋಂದಣಿಯನ್ನು ಮಾಡಬೇಕೆಂದು ಸಲಹೆ ನೀಡಿದರು.


ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ, ಛಾಯಾಗ್ರಾಹಕರ ಸಂಘವು ಸ್ವಂತ ದುಡಿಮೆಯ ೨೮ ಲಕ್ಷ ರೂಪಾಯಿಗಳನ್ನು ವಿನಿಯೋಗಿಸಿ ನಿವೇಶನವನ್ನು ಪಡೆದುಕೊಂಡಿದ್ದು, ಮುಂದಿನ ವರ್ಷದೊಳಗಾಗಿ ಇದೇ ನಿವೇಶನದಲ್ಲಿ ಭರ್ಜರಿ ಛಾಯಾ ಭವನ ನಿರ್ಮಾಣ ಮಾಡಿ ಛಾಯಾಗ್ರಾಹಕರ ದಿನಾಚರಣೆ ಮಾಡಬೇಕೆಂಬ ಗುರಿ ಹೊಂದಬೇಕು, ಛಾಯಾಗ್ರಾಹಕರು ಬದಲಾಗುವ ಕಾಲಮಾನದ ಸವಾಲುಗಳನ್ನು ಎದುರಿಸಬೇಕಾದರೆ ಕ್ರಿಯಾಶೀಲರಾದರೆ ಭವಿಷ್ಯದ ಆತಂಕವನ್ನು ನಿವಾರಣೆ ಮಾಡಬಹುದು ಎಂದರು.