Home ಜಿಲ್ಲೆ ಪೆಟ್ರೋಲ್ ಬಂದ್ ವದಂತಿ: ಯಾದಗಿರಿಯಲ್ಲಿ ಮುಗಿಬಿದ್ದ ವಾಹನ ಸವಾರರು, ಪಂಪ್‍ಗಳ ಮುಂದೆ ಉದ್ದ ಸಾಲು

ಪೆಟ್ರೋಲ್ ಬಂದ್ ವದಂತಿ: ಯಾದಗಿರಿಯಲ್ಲಿ ಮುಗಿಬಿದ್ದ ವಾಹನ ಸವಾರರು, ಪಂಪ್‍ಗಳ ಮುಂದೆ ಉದ್ದ ಸಾಲು

ಯಾದಗಿರಿ, ಮಾ.25: ಪೆಟ್ರೋಲ್ ಪೂರೈಕೆ ನಿಲ್ಲಲಿದೆ ಎಂಬ ಸುಳ್ಳು ವದಂತಿ ಯಾದಗಿರಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಆತಂಕ ಸೃಷ್ಟಿಸಿತು. ವದಂತಿ ಹರಡುತ್ತಿದ್ದಂತೆಯೇ ನೂರಾರು ವಾಹನ ಸವಾರರು ಪೆಟ್ರೋಲ್ ಬಂಕ್‍ಗಳತ್ತ ಧಾವಿಸಿ, ಇಂಧನ ತುಂಬಿಸಿಕೊಳ್ಳಲು ಮುಗಿಬಿದ್ದರು.

ನಗರದ ಪ್ರಮುಖ ಪೆಟ್ರೋಲ್ ಬಂಕ್‍ಗಳಲ್ಲಿ ಬೆಳಗ್ಗೆಯಿಂದಲೇ ಉದ್ದ ಸಾಲುಗಳು ಕಾಣಿಸಿಕೊಂಡವು. ಕೆಲವೆಡೆ ಟ್ರಾಫಿಕ್ ದಟ್ಟಣೆ ಉಂಟಾಗಿ, ಸಾರ್ವಜನಿಕರಿಗೆ ತೊಂದರೆ ಎದುರಾಯಿತು. ವಾಹನ ಸವಾರರು ಆತಂಕದಿಂದ ಹೆಚ್ಚಿನ ಪ್ರಮಾಣದಲ್ಲಿ ಪೆಟ್ರೋಲ್ ಸಂಗ್ರಹಿಸಲು ಯತ್ನಿಸಿದ ಕಾರಣ, ಕೆಲವು ಬಂಕ್‍ಗಳಲ್ಲಿ ತಾತ್ಕಾಲಿಕವಾಗಿ ಇಂಧನ ಕೊರತೆಯ ಪರಿಸ್ಥಿತಿ ನಿರ್ಮಾಣವಾಯಿತು.

ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿದ ಸಂಬಂಧಿತ ಅಧಿಕಾರಿಗಳು, “ಪೆಟ್ರೋಲ್ ಪೂರೈಕೆ ನಿರಂತರವಾಗಿ ನಡೆಯುತ್ತಿದೆ. ಯಾವುದೇ ರೀತಿಯ ಕೊರತೆ ಇಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿ ಸಂಪೂರ್ಣ ಸುಳ್ಳು” ಎಂದು ತಿಳಿಸಿದ್ದಾರೆ.

ಪೆÇಲೀಸರು ಸಹ ಜನತೆಗೆ ಮನವಿ ಮಾಡಿದ್ದು, ವದಂತಿಗಳಿಗೆ ಕಿವಿಗೊಡದೆ, ಅಗತ್ಯವಿರುವಷ್ಟೇ ಇಂಧನವನ್ನು ಪಡೆಯುವಂತೆ ಸೂಚಿಸಿದ್ದಾರೆ. ಅನಾವಶ್ಯಕವಾಗಿ ಗಾಬರಿಗೊಂಡು ಸಂಗ್ರಹಿಸುವುದರಿಂದ ಇತರರಿಗೆ ತೊಂದರೆ ಉಂಟಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಘಟನೆಯಿಂದ ವದಂತಿಗಳು ಎಷ್ಟು ವೇಗವಾಗಿ ಹರಡುತ್ತವೆ ಹಾಗೂ ಸಾರ್ವಜನಿಕರಲ್ಲಿ ಹೇಗೆ ಆತಂಕ ಉಂಟುಮಾಡುತ್ತವೆ ಎಂಬುದು ಮತ್ತೊಮ್ಮೆ ಸ್ಪಷ್ಟವಾಗಿದೆ.