Home ಜಿಲ್ಲೆ ನೀರಿಗಾಗಿ ಜನರ ಆಕ್ರಂದನ : ಕೃಷ್ಣಾ ತೀರದಲ್ಲಿ ಹಾಹಾಕಾರ !ಜಲಾಶಯ ಖಾಲಿ – ರೈತ ಕಂಗಾಲು...

ನೀರಿಗಾಗಿ ಜನರ ಆಕ್ರಂದನ : ಕೃಷ್ಣಾ ತೀರದಲ್ಲಿ ಹಾಹಾಕಾರ !ಜಲಾಶಯ ಖಾಲಿ – ರೈತ ಕಂಗಾಲು – ಸಾರ್ವಜನಿಕರಿಗೆ ಕುಡಿಯುವ ನೀರಿಗೂ ಸಂಕಷ್ಟ

ಜಮಖಂಡಿ : ಮೇ 14:ಒಂದು ಕಡೆ ಮಹಾದಾಯಿ ನೀರಿಗಾಗಿ ಸರ್ಕಾರಗಳು ಬೀದಿಗಿಳಿದು ಹೋರಾಟದ ಮಾತು ಆಡುತ್ತವೆ… ಕಾವೇರಿ ನೀರಿಗಾಗಿ ರಾಜಕೀಯ ನಾಯಕರು ಘೋಷಣೆ ಕೂಗುತ್ತಾರೆ… ಆದರೆ ಉತ್ತರ ಕರ್ನಾಟಕದ ಜೀವನಾಡಿಯಾದ ಕೃಷ್ಣೆಗಾಗಿ ಮಾತ್ರ ಯಾಕೆ ಧ್ವನಿ ಎತ್ತುವುದಿಲ್ಲ ಎಂಬ ಪ್ರಶ್ನೆ ಇದೀಗ ಜನರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಕೃಷ್ಣಾ, ಮಲಪ್ರಭಾ ಹಾಗೂ ಘಟಪ್ರಭಾ ನದಿಗಳು ಹರಿದರೂ, ಬೇಸಿಗೆ ಬಂದಾಕ್ಷಣ ಜಮಖಂಡಿ ಸೇರಿದಂತೆ ಜಿಲ್ಲೆಯ ಅನೇಕ ಭಾಗಗಳಲ್ಲಿ ಸಾರ್ವಜನಿಕರು ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ನೀರಿಗಾಗಿ ಮಹಿಳೆಯರು ಬಿಂದಿಗೆ ಹಿಡಿದು ಅಲೆದಾಡುವ ಪರಿಸ್ಥಿತಿ ಎದುರಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಸರ್ಕಾರಗಳು ಸಾವಿರಾರು ಕೋಟಿ ಯೋಜನೆಗಳ ಘೋಷಣೆ ಮಾಡಿದರೂ, ನೆಲಮಟ್ಟದಲ್ಲಿ ಶಾಶ್ವತ ಪರಿಹಾರ ಮಾತ್ರ ಕಾಣುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಸಸಿ ನೆಡುವ ಯೋಜನೆಗಳು ಕಡತಗಳಲ್ಲೇ ಉಳಿದಿದ್ದು, ಬರ ನಿವಾರಣಾ ಕಾರ್ಯಕ್ರಮಗಳು ಕೇವಲ ಹೆಸರಿಗೆ ಸೀಮಿತವಾಗಿವೆ ಎಂಬ ಟೀಕೆ ವ್ಯಕ್ತವಾಗಿದೆ.
ಆಲಮಟ್ಟಿ ಜಲಾಶಯ ಹಾಗೂ ಕೃಷ್ಣಾ ಯೋಜನೆಗಳು ಇನ್ನೂ ಸಂಪೂರ್ಣ ಫಲ ನೀಡದಿರುವುದು ರೈತರ ಆಕ್ರೋಶ ಹೆಚ್ಚಿಸಿದೆ. “ಮಹಾದಾಯಿ, ಕಾವೇರಿ ಬಗ್ಗೆ ಮಾತಾಡುವ ಸರ್ಕಾರ ಕೃಷ್ಣೆಗಾಗಿ ಯಾಕೆ ಗಟ್ಟಿಯಾಗಿ ನಿಲ್ಲುವುದಿಲ್ಲ?” ಎಂದು ರೈತರು ಪ್ರಶ್ನಿಸುತ್ತಿದ್ದಾರೆ.
ಈ ಬಾರಿ ಹಿಪ್ಪರಗಿ ಜಲಾಶಯದ ಕ್ರಸ್ಟ್ ಗೇಟ್ ಹಾನಿಯಿಂದ ನೀರು ಹರಿದುಹೋಗಿದ್ದು, ಬೇಸಿಗೆಯ ನೀರಿನ ಸಮಸ್ಯೆ ಮತ್ತಷ್ಟು ಭೀಕರವಾಗಿದೆ. ಇದರಿಂದ ಕೃಷಿ, ಹೈನುಗಾರಿಕೆ ಹಾಗೂ ಸಾಮಾನ್ಯ ಜನರ ಬದುಕೇ ಸಂಕಷ್ಟಕ್ಕೆ ಸಿಲುಕಿದೆ.
ಕೃಷ್ಣಾ ತೀರದಲ್ಲಿ ಕಬ್ಬು ಬೆಳೆ ಮತ್ತು ಹೈನುಗಾರಿಕೆಯನ್ನು ನಂಬಿಕೊಂಡಿರುವ ರೈತರು, ಜಾನುವಾರುಗಳಿಗೆ ನೀರು ಒದಗಿಸಲೂ ಪರದಾಡುತ್ತಿದ್ದಾರೆ. ನದಿ ತೀರದಲ್ಲೇ ನೀರಿಗಾಗಿ ಹಾಹಾಕಾರ ಕೇಳಿಬರುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ.
“ಮಳೆ ಯಾವಾಗ ಬರುತ್ತದೆ? ಸರ್ಕಾರ ಯಾವಾಗ ಎಚ್ಚೆತ್ತುಕೊಳ್ಳುತ್ತದೆ? ಕೃಷ್ಣೆಗಾಗಿ ಯಾವಾಗ ನ್ಯಾಯ ಸಿಗುತ್ತದೆ?” ಎಂಬ ಪ್ರಶ್ನೆ ಇದೀಗ ಉತ್ತರ ಕರ್ನಾಟಕದ ಜನರ ಬಾಯಲ್ಲಿ ಗಟ್ಟಿಯಾಗಿ ಕೇಳಿಬರುತ್ತಿದೆ.