
ಚನ್ನಮ್ಮನ ಕಿತ್ತೂರು,ಜ25: ತಾಲೂಕಿನ ಪರಸನಟ್ಟಿ ಸರ್ಕಾರಿ ಗೋಮಾಳದಲ್ಲಿ ಸುಮಾರು ವರ್ಷಗಳಿಂದ ಉಳುಮೆ ಮಾಡುತ್ತಿರುವ ರೈತರನ್ನು ಒಕ್ಕಲೆ ಬೀಸಿ ಅವರನ್ನು ಹೊರಹಾಕಲು ಸರ್ಕಾರ ಹುನ್ನಾರ ನಡೆಸುತ್ತಿದೆ ಎಂದು “ಕಿತ್ತೂರು ಕರ್ನಾಟಕ ರೈತ ಜಾಗೃತಿ ಸಂಘಟನೆ” ದೂರಿದೆ.
ಪಟ್ಟಣದ ರಾಷ್ಟ್ರೀಯ ಹೆದ್ದಾರಿ 4ರ ಪಕ್ಕದ ಚನ್ನಮ್ಮಾಜೀ ವರ್ತುಳದಲ್ಲಿ ರೈತರೆಲ್ಲರೂ ಸೇರಿ ಪ್ರತಿಭಟಿಸಿ ಅಲ್ಲಿಂದ ತಹಶೀಲ್ದಾರ ಕಛೇರಿಗೆ ತೆರಳಿ ತಹಶೀಲ್ದಾರ ಕಲ್ಲನಗೌಡ ಪಾಟೀಲರಿಗೆ ಮನವಿ ಸಲ್ಲಿಸಿದರು.
ಕಿತ್ತೂರ ಕರ್ನಾಟಕ ರೈತ ಜಾಗೃತಿ ಸಂಘದ ಅಧ್ಯಕ್ಷ ಎಂ.ಎಫ್. ಜಕಾತಿ ಮಾತನಾಡಿ 1999ರಲ್ಲಿ ನಮೂನೆ 53ರಲ್ಲಿ 158 ಸಿಸಿ ನಿಯಮದ ಪ್ರಕಾರ ರೈತರು ಭೂಮಿ ಮಂಜೂರಾತಿಗೆ ಅರ್ಜಿ ಸಲ್ಲಿಸಿದ್ದು ಇದೆ. ಈ ಭಾಗದಲ್ಲಿ ಬಡರೈತ ಕುಟುಂಬಗಳೇ ಜಾಸ್ತಿಯಿದ್ದು ಈ ಗೋಮಾಳದಲ್ಲಿ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ಜನರೇ ಅಲ್ಲಿ ವಾಸವಾಗಿ ಉಳುಮೆ ಮಾಡುತ್ತಿದ್ದಾರೆ. ಸುಮಾರು 70 ವರ್ಷಗಳಿಂದ ಅವರೇ ಭೂಮಿ ಸಾಗುವಳಿ ಮಾಡುತ್ತಾ ಬಂದಿದ್ದಾರೆ. ಅವರೇನೂ ನೂರಾರು ಎಕರೆ ಸಾಗುವಳಿ ಮಾಡುತ್ತಿಲ್ಲ ಕೇವಲ 5 ಎಕರೆವರೆಗೆ ಸಾಗುವಳಿ ಮಾಡಿಕೊಂಡು ತಮ್ಮ ಜೀವನ ಸಾಗಿಸುತ್ತಿದ್ದಾರೆ. ಅಂತಹದರಲ್ಲಿ ಒಕ್ಕಲೆ ಬೀಸುವ ಹುನ್ನಾರ ನಡೆಸಿ ಸೋಲಾರ್ ಪ್ಲಾಂಟ್ ಹಾಕಿದರೆ ನಾವೇನೂ ಸುಮ್ಮನಿರುವುದಿಲ್ಲವೆಂದು ಸರ್ಕಾರವನ್ನೆಚ್ಚರಿಸಿದರು..
ರೈತ ಮುಖಂಡ ಅಪ್ಪೇಶ ದಳವಾಯಿ ಮಾತನಾಡಿ ಸರ್ಕಾರ ಗುತ್ತಿಗೆದಾರರ ಮೂಲಕ ಈ ಗೋಮಾಳದಲ್ಲಿ ಉಳುಮೆ ಮಾಡುತ್ತಿರುವ ರೈತರ ಹೊಲಗಳಲ್ಲಿ ಸೋಲಾರ್ ಪ್ಲಾಂಟ್ ಹಾಕುವುದು ಎಷ್ಟರ ಮಟ್ಟಿಗೆ ಸರಿ ಆ ಬಡಪಾಯಿ ರೈತರ ಗೋಣು ಮುರಿದಂತೆ ಜೀವನವಾದರೂ ಹೇಗೆ ನಡೆಸುವುದು ಇದು ಸರ್ಕಾರಕ್ಕೆ ಅರವಿಲ್ಲವೇ ಅದಕ್ಕಾಗಿ ಬೇರೆ ಜಮೀನಿನಲ್ಲಿ ಸೋಲಾರ್ ಪ್ಲಾಂಟ್ ನಿರ್ಮಾಣ ಮಾಡಬೇಕು. ಇದನ್ನೆ ಮುಂದುವರೆಸಿದರೆ ನಾವೇನೂ ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಮುಖಂಡ ಪ್ರವೀಣ ಸರದಾರ ಮಾತನಾಡಿದರು.
ನಾಗರತ್ನಾ ಪಾಟೀಲ ಸೇರಿದಂತೆ ಇತರ ರೈತ ಮುಖಂಡರು ಮಾತನಾಡಿದರು.
ಈ ವೇಳೆ ನಿಂಗಪ್ಪ ತಡಕೋಡ, ಅಪ್ಪೇಶ ದಳವಾಯಿ, ಗಂಗಯ್ಯಾ ಹಿರೇಮಠ, ಪ್ರವೀಣ ಸರ್ದಾರ, ಚಂದ್ರಶೇಖರ ಹಡಪದ, ಎಂ.ಎಫ್.ಜಕಾತಿ, ಬಸವಣ್ಣೆಪ್ಪ ಚಲವಾದಿ, ಅಣ್ಣಪ್ಪ ಗುಂಜಿ, ನಾರಾಯಣ ಭಾಸ್ಕರಿ, ಭೀಮಪ್ಪ ಗರಗ, ಸಬ್ಬೀರಗೌಸ್ ಬೀಡಿ, ಸಂತರಾಮ ಭಾಸ್ಕರಿ, ಸೇರಿದಂತೆ ಅನೇಕ ರೈತರಿದ್ದರು.
























