ಬೀದಿ ನಾಯಿಗಳ ಉಪಟಳಕ್ಕೆ ಬೆಚ್ಚಿ ಬಿದ್ದ ಜನ

ಚಿತ್ತಾಪುರ; ಜ.2:ತೊಗರಿ ಕಣಜ ಎಂದೇ ಖ್ಯಾತಿ ಪಡೆದ ತಾಲೂಕಿನಲ್ಲಿ ಬೀದಿ ನಾಯಿಗಳ ಉಪಟಳ ಹೆಚ್ಚಾಗಿದೆ. ಸಾಕು ಮತ್ತು ಬೀದಿ ನಾಯಿಗಳು ನಡೆಸಿದ ದಾಳಿಯಿಂದಾಗಿ ಜನರು ಭಯಭೀತಿಯಿಂದ ಓಡಾಡುವಂತಹ ಪರಿಸ್ಥಿತಿ ಎದುರಾಗಿದೆ.
ಕಳೆದ ಕೆಲ ದಿನಗಳ ಹಿಂದೇ ಪಟ್ಟಣದ ಯರಗಲ್ ರಸ್ತೆಯ ಪುರಸಭೆ ಘನತ್ಯಾಜ್ಯ ವಿಲೇವಾರಿ ಘಟಕದ ಹತ್ತಿರ ಮೇಯುತ್ತಿದ್ದ ಕುರಿಗಳ ಮೇಲೆ ನಾಯಿಗಳು ದಾಳಿ ಮಾಡಿದ್ದರಿಂದ 25 ಕುರಿಗಳು ಸಾವನ್ನಪ್ಪಿದ ಘಟನೆ ನಡೆದಿದ್ದು ಕುರಿಗಾಯಿಗರನ್ನು ದಿಗ್ಧಾಂತಗೊಳಿಸಿದೆ.
ಪಟ್ಟಣದ ಗೊಬ್ಬೂರ್ ಗಲ್ಲಿ, ತಳಗೇರಿ, ವೆಂಕಟೇಶ್ವರ ನಗರ, ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ ರಸ್ತೆ, ಲಾಡ್ಜಿಂಗ್ ಕ್ರಾಸ್, ಭುವನೇಶ್ವರಿ ವೃತ್ತ, ಜನತಾ ವೃತ್ತ, ಚಿತ್ತಾವಲಿ ವೃತ್ತ ಸೇರಿ ನಾನಾ ಕಡೆ ನಾಯಿಗಳ ಹಾವಳಿ ಹೆಚ್ಚಾಗಿದೆ. ಇಷ್ಟಾದರೂ ಇವುಗಳ ಕಡಿವಾಣಕ್ಕೆ ಪುರಸಭೆ ಕ್ರಮಕ್ಕೆ ಮುಂದಾಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಪ್ರಮುಖ ಕಾರಣವಾಗಿದೆ.
ಮಹಿಳೆಯರ, ಮಕ್ಕಳ, ವೃದ್ಧರ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿ ತೀವ್ರ ಗಾಯಗೊಳಿಸಿದ ಉದಾಹರಣೆಗಳು ಸಾಕಷ್ಟಿವೆ. ಎಲ್ಲೆಡೆ ನಾಯಿಗಳ ಹಿಂಡು ದಾಳಿ ನಡೆಸುತ್ತಿವೆ. ಹಲವೆಡೆ ಮಕ್ಕಳ ಮೇಲೆ ನಾಯಿ ದಾಳಿ ಮಾಡಿದ ಪ್ರಕರಣಗಳು ನಡೆದಿವೆ. ಇವುಗಳಿಗೆ ಕಡಿವಾಣ ಹಾಕದಿದ್ದರೆ ಪರಿಸ್ಥಿತಿ ಇನ್ನೂ ಬಿಗಡಾಯಿಸುವ ಆತಂಕ ಹೆಚ್ಚಾಗಿದೆ. ಕೆಲವೊಮ್ಮೆ ರಸ್ತೆ ಮಧ್ಯೆಯೇ ನಾಯಿಗಳ ಕಾಳಗದಿಂದಾಗಿ ಜನ ಬೆಚ್ಚಿಬಿದ್ದು ಜೀವ ರಕ್ಷಣೆಗೆ ಪರದಾಡಿದ ಪ್ರಸಂಗವೂ ನಡೆದಿದೆ ಎನ್ನುತ್ತಾರೆ ಸಾರ್ವಜನಿಕರು.

ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಬೆಳಗಿನಜಾವ ಮತ್ತು ಕತ್ತಲಾದರೆ ಶಾಲಾ ಮಕ್ಕಳು, ಮಹಿಳೆಯರು ಒಬ್ಬಂಟಿಯಾಗಿ ಓಡಾಡುವುದೇ ಕಷ್ಟವಾಗಿದೆ. ಎಲ್ಲೆಡೆ ನಾಯಿಗಳ ಹಿಂಡು ಮಕ್ಕಳ ಮೇಲೆ ದಾಳಿ ನಡೆಸಿದ ಪ್ರಕರಣಗಳು ನಡೆದಿದ್ದು ಕಡಿವಾಣ ಹಾಕದಿದ್ದರೆ ಪರಿಸ್ಥಿತಿ ಇನ್ನೂ ಬಿಗಡಾಯಿಸುವ ಆತಂಕ ಹೆಚ್ಚಾಗಿದೆ.

ಕೈ, ಕನ್ನೆಗೆ ಕಚ್ಚಿದ ನಾಯಿಗಳು

ಕಳೆದ ಅನೇಕ ತಿಂಗಳುಗಳಿಂದ ಬಾಲಕರ ಮೇಲೆ ನಾಯಿಗಳು ದಾಳಿ ನಡೆಸಿವೆ. ಕೈ ಕೆನ್ನೆಗೆ ಕಚ್ಚಿ ಗಾಯಗೊಳಿಸಿವೆ. ಹಣ್ಣಿನ ವ್ಯಾಪಾರಿ ಬಾಬು ಬಂಡಿ ಅವರ ಮೇಲೆ ನಾಯಿ ಮೂರಾಲ್ಕು ಬಾರಿ ಕಚ್ಚಿದೆ. ಹೀಗಾಗಿ ಎಲ್ಲೆಡೆ ಭಯದ ಆತಂಕ ಸೃಷ್ಟಿಸಿದೆ.


ಬೀದಿ ನಾಯಿಗಳ ಹಾವಳಿ ತಡೆಗಟ್ಟಬೇಕೆಂದು ಪುರಸಭೆ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಪತ್ರ ಸಲ್ಲಿಸದರು ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ನಾಯಿಗಳ ಹಾವಳಿ ತಡೆಗಟ್ಟಬೇಕು. ಒಂದು ವೆಳೆ ನಾಯಿಗಳ ಹಾವಳಿ ತಡೆಗಟ್ಟದಿದ್ದರೇ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು.

ನರಹರಿ ಕುಲಕರ್ಣಿ

ಕರವೇ (ಪ್ರವೀಣ ಶೆಟ್ಟಿ ಬಣ) ತಾಲೂಕು ಅಧ್ಯಕ್ಷ.

ನಾಸರ್ ಜಂಗ್, ಗೊಬ್ಬುರ್ ಗಲ್ಲಿ ಸೇರಿ ಹಲವು ಬಡಾವಣೆಗಳಲ್ಲಿ ಸಾಕು ಮತ್ತು ಬೀದಿ ನಾಯಿಗಳ ಆಟಹಾಸ ಹೆಚ್ಚಾಗಿದ್ದರಿಂದ ಸಾರ್ವಜನಿಕರಿಗೆ ಬಹಳ ತೊಂದರೆಯಾಗುತ್ತಿದೆ. ಪುರಸಭೆಯವರು ತಕ್ಷಣ ನಾಯಿಗಳ ಹಾವಳಿ ತಡೆಗೆ ಮುಂದಾಗಬೇಕು.

ವಿಜಯಕುಮಾರ್ ಗೊಬ್ಬುರ್ ಗಲ್ಲಿ ನಿವಾಸಿ.