ಕಲಬುರಗಿ,ಆ.12-ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನರಿಬೋಳಿ ಗ್ರಾಮ ಮತ್ತು ಚಿತ್ತಾಪುರದ ಚಾಮನೂರು ಗ್ರಾಮಕ್ಕೆ ಸಂಪರ್ಕಿಸುವ ನರಿಬೋಳಿ- ಚಾಮನೂರು ಸೇತುವೆಯ ಬಾಕಿ ಶೇ. 30 ರಷ್ಟಿರುವ ಕಾಮಗಾರಿ ಮುಕ್ತಾಯಕ್ಕೆ ಅಗತ್ಯವಾಗಿರುವ 37 . 60 ಕೋಟಿ ರು ಅನುದಾನ ಶೀಘ್ರ ಯಾವುದಾದರೂ ಯೋಜನೆಯಲ್ಲಿ ಹೊಂದಿಸಿಕೊಡುವ ಮೂಲಕ ನೆನೆಗುದಿಗೆ ಬಿದ್ದಿರುವ ಸೇತುವೆ ಕಾಮಗಾರಿ ಕೈಗೂಡುವಂತೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಲೋಕೋಪಯೋಗಿ ಖಾತೆ ಸಚಿವ ಸತೀಶ ಜಾರಕಿಹೊಳಿ ಸದನದಲ್ಲಿಂದು ಭರವಸೆ ನೀಡಿದ್ದಾರೆ.
ಜೇವರ್ಗಿ ಶಾಸಕರು, ಕೆಕೆಆರ್‍ಡಿಬಿ ಅಧ್ಯಕ್ಷರಾಗಿರುವ ಡಾ. ಅಜಯ್ ಧರ್ಮಸಿಂಗ್ ಅವರು ಈ ಕಾಮಗಾರಿ ಕುರಿತಂತೆ ಕೇಳಿದ ಚುಕ್ಕೆ ಗುರಿತಿನ ಪ್ರಶ್ನೆಗೆ ಸದನದ ಮೊದಲ ದಿನ ಉತ್ತರಿಸಿದ ಸಚಿವರು, ಆಗಲೇ ನರಿಬೋಳಿ ಗ3?ಮಸ್ಥರೊಂದಿಗೆ ಶಾಸಕರು ತಮ್ಮ ಗಮನ ಸೆಳೆದಿದ್ದಾರೆ. ಆದಷ್ಟು ಬೇಗ ಯಾವುದಾದರೂ ಯೋಜನೆಯಲ್ಲಿ ಅಗತ್ಯ ಅನುದಾನ ಮೊತ್ತ ಹೊಂದಿಸುವ ಮೂಲಕ ಸದರಿ ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ ಎಂದು ಸಚಿವ ಜಾರಕಿಹೊಳಿ ಹೇಳಿದರು.
ಇದಕ್ಕೂ ಮೊದಲು ಕೆಕೆಆರ್‍ಡಿಬಿ ಅಧ್ಯಕ್ಷರು ಹಾಗೂ ಜೇವರ್ಗಿ ಶಾಸಕರಾದ ಡಾ. ಅಜಯ್ ಧರ್ಮಸಿಂಗ್ ಅವರು ಸದನದ ಮೊದಲ ದಿನವಾದ ಸೋಮವಾರ ಈ ವಿಚಾರವನ್ನ ಗಂಭೀರವಾಗಿ ಪ್ರಸ್ತಾಪಿಸುತ್ತ ಕಾಮಗಾರಿ ಶೇ. 70 ರಷ್ಟು ಮುಗಿದಿದೆ. ಇನ್ನೇನು 3 ಕಂಬಗಳು ಪೂರ್ಣಗೊಂಡಲ್ಲಿ ಸೇತುವೆ ಜನಕ್ಕೆ ಉಪಯೋಗವಾಗಲಿದೆ. ಈ ಸೇತುವೆ ಕಾಮಗಾರಿ ನೆನೆಗುದಿಗೆ ಬಿದ್ದಿದ್ರಿಂದ ಈ ಬಾಗದ ಜನತೆಗೆ ತುಂಬ ತೊಂದರೆಯಾಗುತ್ತಿದೆ ಎಂದು ಸದನದ ಗಮನ ಸೆಳೆದರು.
ಈಗಾಗಲೇ ಪಿಡಬ್ಲೂಡಿ ಸಚಿವರಾದ ಸತೀಶ ಜಾರಕಿಹೊಳಿ ಅವರಿಗೆ ಕಂಡು 37 ಕೋಟಿ ರು ಅನುದಾನ ಒದಗಿಸುವ ಮೂಲಕ ಸದರಿ ಕಾಮಗಾರಿ ಪೂರ್ಣಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡುವಂತೆ ಆಗ್ರಹಿಸಿದ್ದೇನೆ. 2017 ರಲ್ಲೇ ಈ ಕಾಮಗಾರಿಗೆ 50 ಕೋಟಿ ರು ಮಂಜೂರಾತಿ ನೀಡಲಾಗಿತ್ತು. ಈ ಸೇತುವೆ ಕಾಮಗಾರಿಗೆ ಸಂಬಂಧಪಟ್ಟಂತೆ ನರಿಬೋಳದಲ್ಲಿ 12. 29 ಎಕರೆ, ಚಾಮನೂರಲ್ಲಿ 10. 32 ಎಕರೆ ರೈತರ ಜಮೀನು ಸ್ವಾಧೀನ ಪ್ರಕ್ರಿಯೆ ಚಾಲ್ತಿಯಲ್ಲಿದೆ. ರೈತರಿಗೆ ಯಾವುದೇ ತೊಂದರೆ ಯಾಗದಂತೆ ಭೂ ಸ್ವಾಧೀನದ ಈ ಕೆಲಸವೂ ತ್ವರಿತವಾಗಬೇಕು ಎಂದು ಡಾ. ಅಜಯ್ ಸಿಂಗ್ ಅವರು ಸಚಿವರ ಗಮನ ಸೆಳೆದರು.
48 ಕೋಟಿ ರು ವೆಚ್ಚದಲ್ಲಿ ಹೈದ್ರಾಬಾದ್ ಗುತ್ತಿಗೆದಾರ ಇದನ್ನು ಟೆಂಡರ್ ಪಡೆದು ಅರೆಬರೆ ಮಾಡಿ ಬಿಟ್ಟು ಹೋಗಿದ್ದಾನೆ. ಈ ಸಮಸ್ಯೆಗೆ ಬೇಗ ಪರಿಹಾರ ನೀಡಬೇಕಿದೆ. ರೈತರ ಭೂ ಸ್ವಾಧೀನ ಕೂಡಾ ರೈತರ ಬೇಡಿಕೆಯಂತೇ ಸರಕಾರ ನಡೆಸಲಿ ಎಂದು ಡಾ. ಅಜಯ್ ಸಿಂಗ್ ಆಗ್ರಹಿಸಿದರು.
ನರಿಬೋಳ- ಚಾಮನೂರು ಸೇತುವೆಯ ಕಾಮಗಾರಿಗೆ 37. 60 ಕೋಟಿ ರು ಅನುದಾನ ಅಗತ್ಯವಿದೆ. ಪಿಡಬ್ಲೂಡಿ ಈಅನುದನ ಹೊಂದಿಸುವ ಮೂಲಕ ಜನರ ಬಹು ವರ್ಷಗಳ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದ್ದರು.
……….
ಹೊನ್ನಾಳ- ತಿನ್ನೂರ ಸೇತುವೆ ಕೂಡಾ ನೆನೆಗುದಿಗೆ
ಇದೇ ಸಂದ್ರಭದಲ್ಲಿ ಡಾ. ಅಜಯ್ ಸಿಂಗ್ ಅವರು ತಮ್ಮ ಕ್ಷೇತ್ರದಲ್ಲಿ ಬರುವ ಹೊನ್ನಾಳ- ತಿನ್ನೂರ ಸೇತುವೆ ಕೂಡಾ ನೆನೆಗುದಿಗೆ ಬಿದ್ದಿದೆ. ನೆನೆಗುದಿಗೆ ಬಿದ್ದಿರುವ ಈ ಸೇತುವೆ ಕಾಮಗಾರಿಯಿಂದಾಗಿ ಇಲ್ಲಿಯೂ ಭಾರಿ ತೊಂದರೆ ಜನ ಎದುರಿಸುತ್ತಿದ್ದಾರೆ. ಈ ಕಾಮಗಾರಿಗೂ ಅಗತ್ಯ ಅನುದಾನ ಒದಗಿಸುವಂತೆ ಶಾಸಕರಾದ ಡಾ. ಅಜಯ್ ಸಿಂಗ್ ಧರ್ಮಸಿಂಗ್ ಅವರು ಸದನದ ಗಮನ ಸೆಳೆದರು.

























