Home ಜಿಲ್ಲೆ ಬೆಂಗಳೂರು ಪಿಸಿ ಬಡಾವಣೆ ರೇಣುಕಾ ಯಲ್ಲಮ್ಮದೇವಿ ಕರಗದ ವಸಂತೋತ್ಸವ

ಪಿಸಿ ಬಡಾವಣೆ ರೇಣುಕಾ ಯಲ್ಲಮ್ಮದೇವಿ ಕರಗದ ವಸಂತೋತ್ಸವ

ಕೋಲಾರ,ಮೇ,೪- ನಗರದ ಪಿ.ಸಿ.ಬಡಾವಣೆಯ ರೇಣುಕಾಂಭ ಸೇವಾ ಸಮಿತಿ ವತಿಯಿಂದ ರೇಣುಕಾ ಯಲ್ಲಮ್ಮ ದೇವಿಯ ಕರಗ ಮಹೋತ್ಸವದ ಸಮಾರೋಪದ ಅಂಗವಾಗಿ ಭಾನುವಾರ ಸಂಜೆ ನಡೆದ ಒನಕೆ ಕರಗದ ನೃತ್ಯ ಜನಮನ ಸೂರೆಗೊಂಡಿದ್ದು, ರಸ್ತೆ ಇಕ್ಕೆಲಗಳಲ್ಲಿ ಕಟ್ಟಡಗಳ ಮೇಲೆನಿಂತು ಸಹಸ್ರಾರು ಮಂದಿ ಈ ಅದ್ಭುತ ನೃತ್ಯವನ್ನು ಕಣ್ತುಂಬಿಕೊಂಡರು.


ಸುಮಾರು ೫ ಅಡಿ ಉದ್ದದ ಒನಕೆ ಮೇಲೆ ನೀರು ತುಂಬಿದ ತಾಮ್ರದ ಪಾತ್ರೆಯನ್ನಿಟ್ಟು ಒನಕೆಯನ್ನು ತಲೆಯ ಮೇಲಿಟ್ಟುಕೊಂಡು ಅದರಲ್ಲಿನ ವಸಂತದ ನೀರನ್ನು ನೃತ್ಯ ಪ್ರದರ್ಶನದ ಮೂಲಕ ಹೊರಚೆಲ್ಲುವ ಕರಗದ ಪೂಜಾರಿ ಮಂಜುನಾಥ್‌ರ ಕಲಾ ಪ್ರೌಢಿಮೆಯ ಸಾಹಸಕ್ಕೆ ಜನ ತಲೆದೂಗಿದರು.


ಒನಕೆಯನ್ನು ಕೈಯಿಂದ ಹಿಡಿಯದೇ ಒಂದು ತುದಿಯ ಮೇಲೆ ನೀರು ತುಂಬಿದ ಪಾತ್ರೆಯಿಟ್ಟು, ಮತ್ತೊಂದು ತುದಿಯನ್ನು ತಲೆ ಮೇಲಿಟ್ಟುಕೊಂಡು ನರ್ತಿಸುವ ಮೂಲಕ ಜನತೆ ನಿಬ್ಬೆರಗಾಗುವಂತೆ ಮಾಡಿದರು.
೩೪ನೇ ವರ್ಷದ ಕರಗ ಮಹೋತ್ಸವದ ಅಂಗವಾಗಿ ಒನಕೆ ಕರಗ ನೃತ್ಯಕ್ಕೂ ಮುನ್ನಾ ವಸಂತದ ನೀರು ತುಂಬಿದ ಏಳು ಕಳಸಗಳನ್ನು ಒಂದರ ಮೇಲೊಂದರಂತೆ ಜೋಡಿಸಿಕೊಂಡು ತಲೆಯ ಮೇಲಿಟ್ಟು ಮಾಡಿದ ನೃತ್ಯ ಮನಮೋಹಕವಾಗಿತ್ತು.


ಒನಕೆಯ ಮೇಲಿನ ತಾಮ್ರದ ಪಾತ್ರೆಯಲ್ಲಿರುವ ವಸಂತದ ನೀರು ನಮ್ಮ ಮೇಲೆ ಬಿದ್ದರೆ ಒಳಿತಾಗುತ್ತದೆ ಎಂಬ ನಂಬಿಕೆಯಿಂದ ನಾಗರೀಕರು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದು, ಸುಮಾರು ೧ ಗಂಟೆಗೂ ಹೆಚ್ಚು ಕಾಲ ನಡೆದ ಒನಕೆ, ಕಳಸಗಳನ್ನೊತ್ತ ನೃತ್ಯ ಮನಮೋಹಕವಾಗಿದ್ದು, ಕರಗದ ಪೂಜಾರಿ ಮಂಜುನಾಥ್ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.


ದೇವಾಲಯದ ಮುಂಭಾಗದ ರಸ್ತೆಯಲ್ಲಿ ಒನಕೆ ಕರಗದ ಹಿನ್ನಲೆಯಲ್ಲಿ ವಾಹನ ಸಂಚಾರ ಬಂದ್ ಮಾಡಿದ್ದು, ರಸ್ತೆಯ ಇಕ್ಕೆಲಗಳು, ಮನೆಗಳ ಮೇಲೆ ಸಾವಿರಾರು ಜನ ನಿಂತು ಕರಗ ವೀಕ್ಷಿಸಿದರು.
ಹೂವಿನ ಕರಗ ಮಹೋತ್ಸವದಲ್ಲಿ ಒನಕೆ ಕರಗಕ್ಕೆ ಅತ್ಯಂತ ಮಹತ್ವದ ಸ್ಥಾನವಿದ್ದು, ಕರಗ ಮಹೋತ್ಸವದ ಸಮಾರೋಪವಾಗಿಯೂ ವಸಂತೋತ್ಸವವೂ ಇದೇ ಆಗಿರುತ್ತದೆ. ದೇವಾಲಯ ಸಮಿತಿ ಸದಸ್ಯ ಆರ್‍ಮುಗಂ ಕುಟುಂಬದವರು ಒನಕೆ ಕರಗ ನಡೆಯುವ ದಿನದಂದು ಕಾರ್ಯಕ್ರಮ ವೀಕ್ಷಣೆಗೆ ಆಗಮಿಸುವ ಎಲ್ಲಾ ಭಕ್ತರಿಗೆ ಪ್ರತಿ ವರ್ಷವೂ ಪ್ರಸಾದ ಉಣಬಡಿಸುವ ಕಾರ್ಯ ನಿರಂತರವಾಗಿ ನಡೆಸಿಕೊಂಡು ಬಂದಿದ್ದು, ಈಬಾರಿಯೂ ಮುಂದುವರೆಸಿದರು.


ಕಾರ್ಯಕ್ರಮದಲ್ಲಿ ರೇಣುಕಾಯಲ್ಲಮ್ಮ ದೇವಾಲಯ ಸಮಿತಿ ಅಧ್ಯಕ್ಷ ಕೆ.ಗಣೇಶ್ ಕರಗಮಹೋತ್ಸವದ ನೇತೃತ್ವ ವಹಿಸಿದ್ದು, ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಎಸ್ಸಿಘಟಕದ ಅಧ್ಯಕ್ಷ ಕೆ.ಜಯದೇವ್, ಅರ್ಚಕರಾದ ಸುರೇಶಾಚಾರ್ಯ, ಮೇಸ್ತ್ರೀ ಕೆ.ಆರ್‍ಮುಗಂ, ಪತ್ರಕರ್ತ ದುನಿಯಾ ಮುನಿಯಪ್ಪ, ದೇವಾಲಯ ಸಮಿತಿ ಉಪಾಧ್ಯಕ್ಷ ಚಂದ್ರಪ್ರಕಾಶ್, ಖಜಾಂಚಿ ಕೆ.ಎಸ್.ಮಂಜುನಾಥ್, ಕಾರ್ಯದರ್ಶಿ ಕಲಾ ರಮೇಶ್, ಉಪಕಾರ್ಯದರ್ಶಿ ವಿ.ಸುರೇಶ್,ಟಿ.ಸಂಪತ್,ಮುತ್ತಪ್ಪ, ಗಣೇಶ್ ಹಾಗೂ ರೇಣುಕಾ ಯಲ್ಲಮ್ಮ ಮಿತ್ರಬಳಗದ ಸದಸ್ಯರು ಭಾಗವಹಿಸಿದ್ದರು.