ಹುಳಿಯಾರು, ಅ. ೬- ಇಲ್ಲಿನ ಶ್ರೀ ಪ್ರಸನ್ನ ಗಣಪತಿ ಸೇವಾ ಛಾರಿಟಬಲ್ ಟ್ರಸ್ಟ್ ಹಾಗೂ ಅಭಿ ಎಲೆಕ್ಟ್ರಾನಿಕ್ಸ್ ಮತ್ತು ಅಂಬಾಸುತ ಫರ್ನಿಚರ್ಸ್, ಹೋಮ್ ಅಪ್ಲೆಯನ್ಸಸ್ ವತಿಯಿಂದ ೭೫ ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಕನ್ನಡ ಚಲನಚಿತ್ರಗೀತೆಗಳ ಅಂತ್ಯಾಕ್ಷರಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಮೊದಲ ಸುತ್ತಿನಲ್ಲಿ ಹಾಡಿದ ಗೀತೆಯ ಕೊನೆಯ ಆಕ್ಷರದಿಂದ ಆರಂಭವಾಗುವ ಹಾಡನ್ನು ಮುಂದಿನ ತಂಡದವರು ಹಾಡಬೇಕಾಗಿತ್ತು. ಇದರಲ್ಲಿ ಹುರುಪಿನಿಂದ ಹಾಡಿ ಪ್ರೇಕ್ಷಕರಿಂದ ಶಿಳ್ಳೆ, ಚಪ್ಪಾಳೆ ಗಿಟ್ಟಿಸಿಕೊಂಡು ಎಲ್ಲರೂ ಗರಿಷ್ಠ ಅಂಕಗಳಿಸಿ ಬೀಗುತ್ತಿರುವಂತೆಯೆ ಕಾರ್ಯಕ್ರಮದ ನಿರೂಪಕರಾದ ನಾಗಲಕ್ಷ್ಮಿ ಅವರು ಮುಂದಿನ ಸುತ್ತುಗಳನ್ನು ಕಠಿಣವಾಗಿಸಿ ಸ್ಪರ್ಧಿಗಳಲ್ಲಿ ಆತಂಕ ಮೂಡಿಸಿದರು. ಚಲನಚಿತ್ರ ಗೀತೆಯ ಚರಣ ಹೇಳಿ ಪಲ್ಲವಿ ಹಾಡುವಂತೆಯೂ, ಹಾಡಿನ ಟ್ರ್ಯಾಕ್ ಹಾಕಿ ಹಾಡು ಗುರುತಿಸುವಂತೆಯೂ ಸವಾಲು ಒಡ್ಡಿ ಫೈನಲ್‌ಗೆ ೬ ಮಂದಿಯನ್ನು ಆಯ್ಕೆ ಮಾಡಿಕೊಂಡರು.
ಫೈನಲ್‌ನಲ್ಲಿ ನಿರೂಪಕರು ಹೇಳುವ ಹೊಸ ಚಿತ್ರದಲ್ಲಿನ ಹಾಡೊಂದನ್ನು ಹೇಳುವಂತೆಯೂ, ಅಪರೂಪದ ಜೋಡಿಯ ಹಾಡು ಹೇಳುವಂತೆಯೂ ಅಂದರೆ ರಾಜ್‌ಕುಮಾರ್, ಶಂಕರ್‌ನಾಗ್ ಚಿತ್ರದ ಹಾಡು ‘ಭಾಗ್ಯ ಎನ್ನಲೆ ಪುಣ್ಯ ಎನ್ನಲೆ’ ಹಾಡು. ಥೀಮ್ ಸಾಂಗ್ ಅಂದರೆ ಅಣ್ಣ-ತಂಗಿ, ಮಳೆಹಾಡು, ಶೋಕ ಗೀತೆ, ಹಾಸ್ಯ ಗೀತೆ ಹಾಗೂ ಕೊನೆಯದಾಗಿ ಅದಲು ಬದಲು ಮಾಡಿರುವ ಪಲ್ಲವಿಯನ್ನು ಗುರುತಿಸಿ ಹಾಡುವ ಸುತ್ತುಗಳ ಮೂಲಕ ವಿಜೇತರನ್ನು ಆಯ್ಕೆ ಮಾಡಲಾಯಿತು.
ಅಂಧ ಗಾಯಕರಾದ ಶಿಡ್ಲಕಟ್ಟೆ ನಾಗರಾಜು ಹಾಗೂ ಹುಳಿಯಾರು ಡಿ.ಆರ್.ರಮ್ಯ ತಮ್ಮ ಸುಮಧುರ ಕಂಠದಿಂದ ಹಾಡುಗಳನ್ನು ಹಾಡುವ ಮೂಲಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಅವರು ಹಾಡಿದ ಹಾಡುಗಳನ್ನು ಪೂರ್ತಿಯಾಗಿ ಹಾಡುವಂತೆ ಪ್ರೇಕ್ಷಕರು ಒತ್ತಾಯಿಸಿ ಹಾಡಿಸಿದ್ದುದ್ದು ವಿಶೇಷವಾಗಿತ್ತು. ಕೆಲವೊಮ್ಮೆ ಸ್ಪರ್ಧೆಗಳು ಹಾಡಲಾಗದ ಹಾಡುಗಳನ್ನು ಪ್ರೇಕ್ಷಕರೇ ಅತ್ಯುತ್ಸಾಹದಿಂದ ಹಾಡಿ ಸಂಭ್ರಮಿಸಿದರು.
ಹುಳಿಯಾರಿನ ಪವಿತ್ರ ಪ್ರಥಮ ಸ್ಥಾನ ಪಡೆದು ಬಹುಮಾನವಾಗಿ ಗ್ರೈಂಡರ್, ನಾಗರಾಜು ದ್ವಿತೀಯ ಸ್ಥಾನ ಪಡೆದು ಬಹುಮಾನವಾಗಿ ಮಿಕ್ಸಿ, ರವಿ ತೃತೀಯ ಸ್ಥಾನ ಪಡೆದು ಗ್ಯಾಸ್ ಸ್ಟೌವ್, ಶಿವಪ್ರಕಾಶ್, ರಮ್ಯ, ಚೇತನ ಸಮಾಧಾನಕರ ಬಹುಮಾನವಾಗಿ ದೋಸೆ ತಾವಾ ಬಹುಮಾನ ಪಡೆದುಕೊಂಡರು.
ಬಹುಮಾನ ಪ್ರಾಯೋಜಕರಾದ ಅಭಿ ಎಲೆಕ್ಟ್ರಾನಿಕ್ಸ್ ಮಾಲೀಕರಾದ ರಾಮಪ್ರಸಾದ್ ದಂಪತಿ ಹಾಗೂ ಮನೋಜ್ ದಂಪತಿ, ಶ್ರೀ ಪ್ರಸನ್ನ ಗಣಪತಿ ಸೇವಾ ಟ್ರಸ್ಟ್ ಅಧ್ಯಕ್ಷ ಡಿ.ಎಸ್.ಮೋಹನ್‌ಕುಮಾರ್ ಹೂವಿನ ಬಸವರಾಜು, ಎ.ಡಿ.ತಾಂಡವಾಚಾರ್, ಏಜೆಂಟ್ ಕುಮಾರ್, ತಮ್ಮಯ್ಯ, ಚನ್ನಬಸವಯ್ಯ, ಅಂಜನ್ ಕುಮಾರ್, ಗೌಡಿ ಸೇರಿದಂತೆ ಅನೇಕರು ವಿಜೇತರಿಗೆ ಬಹುಮಾನ ವಿತರಿಸಿದರು.




























