ಬೀದರ್: ಅ.31:ಸರ್ದಾರ್ ಪಟೇಲರು ದೇಶದ ಪ್ರಥಮ ಪ್ರಧಾನಿಯಾಗಬಹುದಿತ್ತು, ಪಟೇಲರು ಪ್ರಧಾನಿಯಾಗಬೇಕೆಂಬುದು ದೇಶವಾಸಿಗಳ ಕನಸು ಕೂಡಾ ಆಗಿತ್ತು. ಆದರೆ ಮಹಾತ್ಮ ಗಾಂಧಿ ಅವರ ಮಾತಿಗೆ ಒಪ್ಪಿ ದೇಶಕ್ಕಾಗಿ ಪ್ರಧಾನಿ ಹುದ್ದೆಯನ್ನೇ ತ್ಯಜಿಸಿದರು ಎಂದು ಸರ್ದಾರ್ ವಲ್ಲಭ ಭಾಯಿ ಪಟೇಲ್ ಪ್ರತಿಷ್ಠಾನದ ಅಧ್ಯಕ್ಷರಾದ ಶಿವಶರಣಪ್ಪ ವಾಲಿ ತಿಳಿಸಿದರು.
ಸರ್ದಾರ್ ವಲ್ಲಭ ಭಾಯಿ ಪಟೇಲ್ ಪ್ರತಿಷ್ಠಾನ, ಜಿಲ್ಲಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಸರ್ವೋದಯ ನ್ಯಾಸ, ಭಾರತ ಸೇವಾದಳ, ಬೀದರ್ ಮಹಾನಗರ ಪಾಲಿಕೆ ಮತ್ತು ಭಾರತ ಸಂರಕ್ಷಣಾ ಸಮಿತಿ ಬೀದರ್ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಗರದ ಅಂಬೇಡ್ಕರ್ ವೃತ್ತದ ಬಳಿ ಹಮ್ಮಿಕೊಂಡ ಸರ್ದಾರ್ ವಲ್ಲಭಭಾಯಿ ಪಟೇಲರ 151ನೇ ಜಯಂತಿ ನಿಮಿತ್ಯ 12 ನೇ ರಾಷ್ಟ್ರೀಯ ಏಕತಾ ದಿವಸದ ಸಾಮೂಹಿಕ ಶಪಥ ಗ್ರಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರ್ದಾರ್ ಪಟೇಲ್ ಅವರು ಇಲ್ಲದ್ದಿದ್ದರೆ ನಾವು ಇಲ್ಲಿ ನಿಂತು ಕಾರ್ಯಕ್ರಮ ಮಾಡಲು ಸಾಧ್ಯವಾಗುತ್ತಿದ್ದಿಲ್ಲ. ಇಡೀ ದೇಶ ಸ್ವತಂತ್ರವಾದ ಒಂದು ವರ್ಷದ ಬಳಿಕ ನಮಗೆ ಸ್ವತಂತ್ರ ದೊರೆತಿದ್ದನ್ನು ನಾವೆಂದು ಮರೆಯಲು ಸಾಧ್ಯವಿಲ್ಲ ಎಂದರು.
ಯುವಕರು ಜಾಗೃತರಾಗಬೇಕಿದೆ, ದೇಶದ ಮುಂದಿನ ಭವಿಷ್ಯ ನಿಮ್ಮ ಕೈಯಲ್ಲಿದೆ. ದೇಶದ ಎದುರಿಗಿರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸನ್ನದ್ಧರಾಗಬೇಕು ಎಂದವರು ತಿಳಿಸಿದರು.
ವಿಧಾನ ಪರಿಷತ್ ಮಾಜಿ ಸಭಾಪತಿ ರಘುನಾಥ ರಾವ್ ಮಲ್ಕಾಪುರೆ ಮಾತನಾಡಿ, ಮಹಾತ್ಮ ಗಾಂಧಿಯವರನ್ನು ಇಡೀ ಭಾರತ ದೇಶ ಸ್ಮರಣೆ ಮಾಡುವಂತೆ ನಮ್ಮ ಹೈದ್ರಾಬಾದ್ ಕರ್ನಾಟಕ ಜನತೆ ಸರ್ದಾರ್ ಪಟೇಲರನ್ನು ನೆನೆಯಲೇಬೇಕು. ದೇಶ ಸ್ವಾತಂತ್ರವಾದರೂ ಸಹ ನಾವು ನಿಜಾಮನ ದಬ್ಬಾಳಿಕೆಯಲ್ಲಿ ನಲುಗಿಹೋಗಿದ್ದ ಸಂಧರ್ಭದಲ್ಲಿ ನಮ್ಮೆಲ್ಲರಿಗೂ ಸ್ವಾತಂತ್ರ್ಯ ತಂದುಕೊಟ್ಟ ಕೀರ್ತಿ ಪಟೇಲರಿಗೆ ಸಲ್ಲುತ್ತದೆ ಎಂದರು.
ಜೆಡಿಎಸ್ ಮುಖಂಡ ಸೂರ್ಯಕಾಂತ ನಾಗಮಾರಪಳ್ಳಿ ಮಾತನಾಡಿ, ಕೇಂದ್ರ ಸರ್ಕಾರ ಏಕತಾ ದಿನ ಹಾಗೂ ಗುಜರಾತ್ ನಲ್ಲಿ ಪಟೇಲರ ಮೂರ್ತಿ ನಿರ್ಮಾಣ ಮಾಡುವ ಮೊದಲೇ ಶಿವಶರಣಪ್ಪ ವಾಲಿಯವರು ಸರ್ದಾರ್ ಪಟೇಲರ ಜಯಂತಿಯನ್ನು ಸರ್ಕಾರಗಳು ನಾಚುವ ರೀತಿಯಲ್ಲಿ ಅದ್ಧೂರಿಯಾಗಿ ಆಚರಿಸುತ್ತಾ ಬಂದಿದ್ದಾರೆ ಎಂದರು.
ಗ್ಲೋಬಲ್ ಸೈನಿಕ ಅಕಾಡೆಮಿ ಅಧ್ಯಕ್ಷರಾದ ಕರ್ನಲ್ ಶರಣಪ್ಪ ಸಿಕೆನಪುರೆ, ಬೀದರ್ ವಾಣಿಜ್ಯ ಹಾಗೂ ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಬಿ.ಜಿ ಶಟಕಾರ, ಉಪಾಧ್ಯಕ್ಷ ಡಾ.ರಜನೀಶ ವಾಲಿ, ಉದ್ಯಮಿ ದೀಪಕ ವಾಲಿ, ಆಧೀಶ ವಾಲಿ, ಶಿಕ್ಷಣ ತಜ್ಞ ರೇವಣಸಿದ್ದಪ್ಪ ಜಲಾದೆ, ಕೆ.ಆರ್.ಇ ಟ್ರಸ್ಟ್ ಅಧ್ಯಕ್ಷ ಡಾ.ಬಸವರಾಜ.ಜಿ ಪಾಟೀಲ, ಇತರೆ ಪ್ರಮುಖರಾದ ಬಿ.ಎಸ್ ಕುದುರೆ, ಜಗನ್ನಾಥ ಜಮಾದಾರ, ಕೃಷಿಕ ಸಮಾಜ ಜಿಲ್ಲಾಧ್ಯಕ್ಷ ಸಿದ್ರಾಮಯ್ಯ ಸ್ವಾಮಿ, ರಾಮಕೃಷ್ಣ ಸಾಳೆ ಸೇರಿದಂತೆ ಬಿ.ವಿ.ಬಿ ಕಾಲೇಜು, ಬಸವೇಶ್ವರ ಬಿಇಡಿ ಕಾಲೇಜು, ಕರ್ನಾಟಕ ಕಾಲೇಜು,ಜನಸೇವಾ ಶಾಲೆ, ಶಾಹಿನ್ ಕಾಲೇಜು ಸೇರಿದಂತೆ ಜಿಲ್ಲೆಯ ವಿವಿಧ ಶಾಲಾ. ಕಾಲೇಜುಗಳ ಮುಖ್ಯಸ್ಥರು, ಶಿಕ್ಷಕ ವೃಂದ, ವಿದ್ಯಾರ್ಥಿಗಳು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಅಲಂಕೃತ ವಾಹನದಲ್ಲಿ ಸರ್ದಾರ ವಲ್ಲಭಭಾಯಿ ಪಟೇಲರ ಭಾವಚಿತ್ರದ ಮೆರವಣಿಗೆ ಜರುಗಿತು. ಮೆರವಣಿಗೆಯು ನಗರದ ಸರ್ದಾರ ಪಟೇಲರ ಬಡಾವಣೆಯಿಂದ ಅಂಬೇಡ್ಕರ್ ವೃತ್ತದ ವರೆಗೆ ಸಾಗಿತ್ತು. ಅಂಬೇಡ್ಕರ್ ವೃತ್ತದಲ್ಲಿವೇದಿಕೆ ಕಾರ್ಯಕ್ರಮ ಜರುಗಿತು.

























