ಪ್ರಯಾಣಿಕನ ಮೇಲೆ ನಿರ್ವಾಹಕನಿಂದ ಹಲ್ಲೆ

ಕಲಬುರಗಿ,ಮೇ.19-ಪ್ರಯಾಣಿಕನ ಮೇಲೆ ನಿರ್ವಾಹಕನೊಬ್ಬ ಹಲ್ಲೆ ನಡೆಸಿರುವ ಬಗ್ಗೆ ಇಲ್ಲಿನ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಗರದ ಬಿದ್ದಾಪುರ ಕಾಲೋನಿ ನಿವಾಸಿಯಾದ ವೃತ್ತಿಯಲ್ಲಿ ಸಹ ಶಿಕ್ಷಕರಾಗಿರುವ ಸಂಗಪ್ಪ ಸೇದಿಮನಿ ಎಂಬುವವರ ಮೇಲೆ ಹಲ್ಲೆ ನಡೆಸಲಾಗಿದೆ.
ಸಂಗಪ್ಪ ಸೇದಿಮನಿ ಅವರು ತಮ್ಮ ಪುತ್ರನೊಂದಿಗೆ ನಗರದ ಕೇಂದ್ರ ಬಸ್ ನಿಲ್ದಾಣದಿಂದ ಸೇಡಂ ಘಟಕದ ಕಲಬುರಗಿ ಟೂ ದಾಂಡೇಲಿ ಬಸ್ಸಿನಲ್ಲಿ ಲಿಂಗಸೂರಿಗೆ ಪ್ರಯಾಣ ಬೆಳೆಸಿದ್ದರು. ನಿರ್ವಾಹಕ ಟಿಕೆಟ್ ಕೇಳಿದಾಗ ಲಿಂಗಸೂರಿಗೆ ಒಂದು ಫುಲ್, ಒಂದು ಹಾಫ್ ಟಿಕೆಟ್ ಕೊಡಲು ನಿರ್ವಾಹಕನಿಗೆ 500 ರೂ.ಕೊಟ್ಟಿದ್ದಾರೆ. ಆಗ ನಿರ್ವಾಹಕ ಸಂಗಪ್ಪ ಅವರಿಗೆ ಅವರ ಮಗನ ಆಧಾರ್ ಕಾರ್ಡ್ ತೋರಿಸಲು ಹೇಳಿದ್ದು, ಆಧಾರ್ ಕಾರ್ಡ್ ಇಲ್ಲ ಆತನ ಶಾಲೆಯ ಅಂಕಪಟ್ಟಿ ಇದೆ ಎಂದು ಅವರು ತೋರಿಸಲು ಹೋದಾಗ ನಿರ್ವಾಹಕ ಅವಾಚ್ಯ ಶಬ್ಧಗಳಿಂದ ಬೈಯ್ದಿದ್ದಾನೆ ಎನ್ನಲಾಗಿದೆ. ಆಗ ಸಂಗಪ್ಪ ಅವರು “ನಾನು ಒಬ್ಬ ಸರ್ಕಾರಿ ನೌಕರನಾಗಿದ್ದು, ಪ್ರಯಾಣಿಕರೊಂದಿಗೆ ಅಸಭ್ಯವಾಗಿ ವರ್ತಿಸಬಾರದು” ಎಂದು ಹೇಳಿದಕ್ಕೆ ನಿರ್ವಾಹಕ ಅವರ ಮೇಲೆ ಹಲ್ಲೆ ನಡೆಸಿದಲ್ಲದೆ ಅವರ ಪುತ್ರನ ಮೇಲೂ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಸಂಗಪ್ಪ ಅವರು ನಿರ್ವಾಹಕನ ವಿರುದ್ಧ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಪ್ರಕರಣ ದಾಖಲಾಗಿದೆ.