ನಾಳಿನ ಯೋಗ ಮಹೋತ್ಸವದಲ್ಲಿ ಭಾಗವಹಿಸಿ: ಅನಂತ ಬಿರಾದಾರ

ಬೀದರ್ :ಮೇ.31: ಭಾರತ ಸರ್ಕಾರವು ಈ ಸಲ ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ ಎಂಬ ಉದ್ದೇಶದೊಂದಿಗೆ ನಾಳೆ ನಗರದ ನೆಹರು ಕ್ರೀಡಾಂಗಣದಲ್ಲಿ ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ಇಂಟರನ್ಯಾಷನಲ್ ನ್ಯಾಚುರೋಪಥಿ ಆರ್ಗನೈಜೇಷನ್ ರಾಷ್ಟ್ರೀಯ ಅದ್ಯಕ್ಷ, ಸೂರ್ಯಾ ಫೌಂಡೇಷನ್ ಉಪಾಧ್ಯಕ್ಷ ಹಾಗೂ ಆಯುಶ್ ಇಲಾಖೆಯ ಯೋಗ ಸರ್ಟಿಫಿಕೇಶನ್ ಬೋರ್ಡ್ ಸದಸ್ಯ ಅನಂತ ಬಿರಾದಾರ ಅವರು ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಭಾರತ ಸರ್ಕಾರದ ಆಯುಶ್ ಇಲಾಖೆಯ ಸಹಕಾರದೊಂದಿಗೆ ಸೂರ್ಯ ಫೌಂಡೇಶನ್, ಐ.ಎನ್.ಓ ವತಿಯಿಂದ ದೇಶಾದ್ಯಂತ ನೂರು ಕಡೆ ಯೋಗ ಮಹೋತ್ಸವ ಕಾರ್ಯಕ್ರಮ ಆಚರಿಸಲಾಗುತ್ತಿದೆ ಅದೆ ರೀತಿ ಬೀದರ ನಗರದ ನೇಹರು ಕ್ರೀಡಾಂಗಣದಲ್ಲಿ ಸ್ಥಳಿಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಈ ಕಾರ್ಯಕ್ರಮ ಬೆಳಿಗ್ಗೆ 6 ರಿಂದ 8 ಗಂಟೆ ವರೆಗೆ ಜರುಗಲಿದೆ. ಯೋಗಾ ಮಹೋತ್ಸವದ ಉದ್ಘಾಟನೆಯನ್ನು ಕೇಂದ್ರದ ರಾಜ್ಯ ರೈಲ್ವೆ ಮತ್ತು ಜಲಶಕ್ತಿ ಇಲಾಖೆ ಸಚಿವ ವಿ.ಸೋಮಣ್ಣ ನೆರವೇರಿಸಲಿದ್ದಾರೆ. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನ ಚಿದಂಬರಾಶ್ರಮದ ಡಾ.ಶಿವಕುಮಾರ ಸ್ವಾಮಿಗಳು ಹಾಗೂ ಹಿರೇಮಠ ಸಂಸ್ಥಾನ ಭಾಲ್ಕಿಯ ಗುರುಬಸವ ಪಟ್ಟದ್ದೇವರು ವಹಿಸಲಿದ್ದಾರೆ. ಬೀದರ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಪತಂಜಲಿ ಸಂಸ್ಥೆಯ ರಾಜ್ಯ ಪ್ರಭಾರಿ ಭವರಲಾಲ್ ಆರ್ಯ ಅವರು ಯೋಗವನ್ನು ಹೇಳಿಕೊಡಲಿದ್ದು ಬೆಂಗಳೂರಿನ ಆರ್ಟ ಆಫ್ ಲಿವಿಂಗ್ ಸಂಸ್ಥೆಯ ಋಷಿ ದೇವವೃತ ಉಪಸ್ಥಿತರಿರಲಿದ್ದಾರೆ. ಯೋಗವು ದೈಹಿಕ, ಮಾನಸಿಕ, ಭಾವನಾತ್ಮಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಯೋಗಕ್ಷೇಮವನ್ನು ಒಳಗೊಳ್ಳುವ ಸಮಗ್ರ ಸಾಧನವಾಗಿದ್ದು ಈ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯೋಗ ಮಹೋತ್ಸವ ಕಾಯ್ರ್ರಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜೂನ್ 21 ರಂದು ಆಂದ್ರ ಪ್ರದೇಶ ರಾಜ್ಯದ ವಿಶಾಖಪಟ್ಟಣಂ ನಲ್ಲಿ ನಡೆಯುವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ, ಆ ದಿನ ಸೂರ್ಯ ಫೌಂಡೇಶನ್ ಹಾಗೂ ಐ.ಎನ್.ಓ ವತಿಯಿಂದ ದೇಶಾದ್ಯಂತ ಐದು ಸಾವಿರ ಸ್ಥಳಗಳಲ್ಲಿ ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಐ.ಎನ್.ಓ ರಾಜ್ಯ ಸಂಚಾಲಕ ಗುರುನಾಥ ರಾಜಗೀರಾ, ರಾಜ್ಯ ಕಾರ್ಯದರ್ಶಿ ಯೋಗೇಂದ್ರ ಯದಲಾಪುರೆ, ಜಿಲ್ಲಾದ್ಯಕ್ಷ ಗೋರಖನಾಥ ಕುಂಬಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ ಪಾಟೀಲ, ಜಿಲ್ಲಾ ಸಂಚಾಲಕ ಡಾ.ಮಂಜುಳಾ ಮುಚಳಂಬೆ, ತಾಲ್ಲೂಕು ಸಂಚಾಲಕ ವಿನೋದ ಪಾಟೀಲ ಸೇರಿದಂತೆ ಇತರರು ಪತ್ರಿಕಾಗೋಷ್ಟಿಯಲ್ಲಿದ್ದರು.