
ಸಂಜೆ ವಾಣಿ ವಾರ್ತೆ
ಜಮಖಂಡಿ: ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಜೀವನದಲ್ಲಿ ಅತ್ಯಂತ ಮಹತ್ವದ ಘಟ್ಟವಾಗಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಶಿಕ್ಷಕರ ಜೊತೆಗೆ ಪಾಲಕರೂ ವಿಶೇಷ ಕಾಳಜಿ ವಹಿಸಬೇಕು. ಮಕ್ಕಳ ಚಲನವಲನದ ಮೇಲೆ ನಿಗಾವಹಿಸುವ ಮೂಲಕ ಅವರ ಭವಿಷ್ಯ ರೂಪಿಸಲು ಮುಂದಾಗಬೇಕು ಎಂದು ಪಿ.ಎಂ.ಶ್ರೀ ಕರ್ನಾಟಕ ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕ ನಾರಾಯಣ ಶಾಸ್ತ್ರಿ ಹೇಳಿದರು.
ತಾಲೂಕಿನ ಕುಂಬಾರಹಳ್ಳದ ಪಿ.ಎಂ.ಶ್ರೀ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆದ ‘ಸಮುದಾಯದತ್ತ ಶಾಲೆ ಮತ್ತು ಪಾಲಕರ ಸಭೆ’ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಸರ್ಕಾರ ಮತ್ತು ಪಾಲಕರು ಅಗತ್ಯ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ ಅವರ ಕಲಿಕೆ ಹಾಗೂ ಬೆಳವಣಿಗೆಯ ಬಗ್ಗೆ ನಿರಂತರ ಕಾಳಜಿ ವಹಿಸಬೇಕು. ರೈತರ ಭಾಷೆಯಲ್ಲಿ ಹೇಳುವುದಾದರೆ ಎಸ್ಎಸ್ಎಲ್ಸಿ ಎಂಬುದು ಫಸಲು ಬರುವ ಕಾಲವಿದ್ದಂತೆ. ಈ ಸಮಯದಲ್ಲಿ ಮೈಯೆಲ್ಲ ಕಣ್ಣಾಗಿಸಿಕೊಂಡು ಮಕ್ಕಳ ಬಗ್ಗೆ ಗಮನಹರಿಸಬೇಕು ಎಂದರು.
ತರಗತಿ ಶಿಕ್ಷಕಿ ಸವಿತಾ ಬೆನಕಟ್ಟಿ ಮಾತನಾಡಿ, ಹತ್ತನೇ ತರಗತಿಯಲ್ಲಿ ಒಟ್ಟು ೯೨ ವಿದ್ಯಾರ್ಥಿಗಳಿದ್ದು, ಅವರ ಶೈಕ್ಷಣಿಕ ಪ್ರಗತಿ ನಿರೀಕ್ಷಿತ ಮಟ್ಟದಲ್ಲಿಲ್ಲ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಅಭ್ಯಾಸಕ್ಕೆ ಆದ್ಯತೆ ನೀಡಬೇಕು ಹಾಗೂ ಸಮಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಿಕ್ಷಕ ಸಂಗನಬಸವ ಉಟಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳು ಶಿಕ್ಷಕರು ಮತ್ತು ಪಾಲಕರೊಂದಿಗೆ ಹೆಜ್ಜೆ ಹಾಕಬೇಕು. ಪಾಲಕರು, ಬಾಲಕರು ಹಾಗೂ ಶಿಕ್ಷಕರ ತ್ರಿವೇಣಿ ಸಂಗಮವೇ ಉತ್ತಮ ಶಿಕ್ಷಣದ ಆಧಾರವಾಗಿದೆ ಎಂದರು.
ದೈಹಿಕ ಶಿಕ್ಷಕ ಬಾಹುಬಲಿ ಮುತ್ತೂರ ಮಾತನಾಡಿ, ಮಕ್ಕಳು ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದರ ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಬೆಳಿಗ್ಗೆ ಬೇಗನೆ ಎದ್ದು ಅಭ್ಯಾಸ ಮಾಡುವ ರೂಢಿ ಬೆಳೆಸಿಕೊಳ್ಳಬೇಕು. ಪಾಲಕರು ಮಕ್ಕಳಿಗೆ ಅಗತ್ಯ ಸೌಲಭ್ಯ ಕಲ್ಪಿಸುವುದರ ಜೊತೆಗೆ ಓದಿನ ಕಡೆಗೆ ಗಮನಹರಿಸುವಂತೆ ಪ್ರೇರೇಪಿಸಬೇಕು ಎಂದರು.
ಎಸ್ಡಿಎAಸಿ ಸದಸ್ಯರಾದ ಹಣಮಂತ ಮರನೂರ, ಅಲ್ಲಾಸಾಬ್ ನದಾಫ, ಪದ್ಮವ್ವ ಹುದಲಿ ಹಾಗೂ ಶೈಲಾ ಮಾಳಿ ಸಭೆಯಲ್ಲಿ ಪಾಲ್ಗೊಂಡಿದ್ದರು.
ಅರ್ಧವಾರ್ಷಿಕ ಪರೀಕ್ಷೆಯಲ್ಲಿ ಹತ್ತನೇ ತರಗತಿಯ ‘ಎ’ ಮತ್ತು ‘ಬಿ’ ವಿಭಾಗಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಪ್ರೋತ್ಸಾಹಿಸಲಾಯಿತು.
ಶಿಕ್ಷಕರಾದ ಅಶೋಕ ಬಿರಾದಾರ ಪಾಟೀಲ, ಚಂದ್ರಕಾAತ ಪೋಲೀಸ್, ಮಂಜುಳಾ ಕಡಕೋಳ, ಆಸೀಫಾಭಾನು ಮೋಮಿನ್, ಶಕುಂತಲಾ ಬಿರಾದಾರ, ಸಗರೆಪ್ಪ ಸೊನ್ನದ, ಸೌಜನ್ಯಾ ಬಾಳಿಗಿಡದ ಹಾಗೂ ಕರೆಪ್ಪ ವಾಜಂತ್ರಿ ಉಪಸ್ಥಿತರಿದ್ದರು.
ಮೂವತ್ತಕ್ಕೂ ಅಧಿಕ ಪಾಲಕರು ಹಾಗೂ ಮಾತೆಯರು ಸಭೆಯಲ್ಲಿ ಭಾಗವಹಿಸಿದ್ದರು. ಸಹನಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಶಾರದಾ ಮಠ ಕಾರ್ಯಕ್ರಮ ನಿರೂಪಿಸಿ ವಂದಿಸಿದರು




















