ಕೋಲಾರ,ಸೆ,೧೦-ಮಕ್ಕಳ ಶೈಕ್ಷಣಿಕ ಬೆಳವಣಿಗೆ ಪೋಷಕರೊಂದಿಗೆ ಶಿಕ್ಷಕರ ಭಾಂಧವ್ಯ ಮುಖ್ಯ, ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಚರ್ಚಿಸಲು ಪೋಷಕರು ಕಾಲೇಜಿನ ಉಪನ್ಯಾಸಕರೊಂದಿಗೆ ಸಂಪರ್ಕದಲ್ಲಿರಬೇಕು. ಮಕ್ಕಳ ಉತ್ತಮ ಭವಿಷ್ಯ ರೂಪಿಸಲು ಶಿಕ್ಷಕರಿಗೆ ಪೋಷಕರು ಸಹಕಾರ ನೀಡುವಂತೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪರಶುರಾಮ್ ಎನ್.ಉಂಕಿ ಮನವಿ ಮಾಡಿದರು.
ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪೋಷಕರ ಸಭೆಗೆ ಚಾಲನೆ ನೀಡಿ ಮಾತನಾಡಿ, ನಮ್ಮ ಸರ್ಕಾರಿ ಕಾಲೇಜಿನಲ್ಲಿ ಉತ್ತಮ ಅನುಭವಿ, ಗುಣಮಟ್ಟದ ಉಪನ್ಯಾಸಕರಿದ್ದು, ಬೋಧನೆಗಿಂತ ವಿದ್ಯಾರ್ಥಿಗಳ ಕಲಿಕೆಯ ಮೇಲೆ ಹೆಚ್ಚಿನ ಗಮನ ನೀಡಲಾಗುತ್ತದೆ. ಮಾಸಿಕ ಪರೀಕ್ಷೆಗಳು, ಮಧ್ಯಂತರ ಪರೀಕ್ಷೆಗಳ ನಂತರ ಪೋಷಕರ ಸಭೆ ನಡೆಸಲಾಗುವುದು ಪೋಷಕರು ಮಕ್ಕಳ ಪ್ರಗತಿ ಬಗ್ಗೆ ಚರ್ಚಿಸಲು ತಪ್ಪದೇ ಸಭೆಗಳಲ್ಲಿ ಭಾಗವಹಿಸಿ ಸಲಹೆಗಳನ್ನು ನೀಡುವಂತೆ ಕೋರಿದರು.
ಪ್ರತಿ ದಿನ ಬೆಳಿಗ್ಗೆ ೮ ಗಂಟೆಯಿಂದ ೧೦ ಗಂಟೆಯವರೆಗೆ ಸಿಇಟಿ ಹಾಗೂ ನೀಟ್, ಕೌಶಲ್ಯ ಪರೀಕ್ಷೆಗಳ ಬಗ್ಗೆ ವಿಶೇಷ ತರಗತಿಗಳು ನಡೆಯುತಿವೆ ಹಾಗೂ ಪ್ರತಿ ಶನಿವಾರ ಒಂದು ಗಂಟೆಕಾಲ ಕಾಲೇಜಿನ ಮಕ್ಕಳೊಂದಿಗೆ ಶೈಕ್ಷಣಿಕ ಪ್ರಗತಿಯ ಬಗ್ಗೆ ಚರ್ಚಿಸಲು ಸಂವಾದ ಇತರೆ ಚಟುವಟಿಕೆಗಳನ್ನು ನಡೆಸಲಾಗುತಿದೆ ಎಂದು ಪೋಷಕರಿಗೆ ಮಾಹಿತಿ ನೀಡಿದರು.
ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಪೋಷಕರು ದಿನಕ್ಕೆ ಒಂದು ಗಂಟೆ ಸಮಯವಾದರು ಮೀಸಲಿಡಿ, ಮಕ್ಕಳು ಕಾಲೇಜಿಗೆ ಗೈರು ಹಾಜರಾಗದಂತೆ ನೋಡಿಕೊಳ್ಳಬೇಕು, ಅತಿಯಾದ ಮೊಬೈಲ್ ಬಳಕೆ ಸೇರಿದಂತೆ ಇತರೆ ವ್ಯಸನಗಳಿಂದ ಮಕ್ಕಳನ್ನು ದೂರವಿಡಿ ಎಂದು ಪೋಷಕರಿಗೆ ತಿಳಿಸಿದರು. ನಿಮ್ಮ ಮಕ್ಕಳ ಶೈಕ್ಷಣಿಕ ಸಾಧನೆಗಳು, ಸಾಮರ್ಥ್ಯಗಳು ಮತ್ತು ಸುಧಾರಣೆಯ ಬಗ್ಗೆ ಮಾಹಿತಿ ಬೇಕಾದರೇ ತರಗತಿ ಶಿಕ್ಷಕರ ಮೊಬೈಲ್ ಸಂಖ್ಯೆಗೆ ಕರೆಮಾಡಿ ಅಥವಾ ನೇರವಾಗಿ ಕಾಲೇಜಿಗೆ ಬಂದು ಪಡೆಯಬಹುದು ಎಂದರು.
ಉಪನ್ಯಾಸಕರಾದಪಾರ್ವತಮ್ಮ, ರುಕ್ಮಣಿ, ಪದ್ಮ, ಕೃಷ್ಣಪ್ಪ, ಆನಂದ್ ಕುಮಾರ್, ಲತಾ, ಶ್ರೀನಾಥ್, ಗೋವಿಂದ, ಭಾನು, ತಜಮುಲ್ ಅಹಮದ್, ಶೋಭ, ರೂಪ, ಭಾರತಿ, ಶಾಹನಾಜ್, ನೇತ್ರಾವತಿ, ಅಶ್ವಿನಿ, ಸೌಂದರ್ಯ, ಅನಸೂಯ ಇದ್ದರು.


























