ಬೆಂಗಳೂರು,ಸೆ.೨- ಗೃಹ ಸಚಿವ ಪರಮೇಶ್ವರ ಅವರನ್ನು ವಿಶೇಷ ತನಿಖಾತಂಡ(ಎಸ್ ಐಟಿ) ಮುಖ್ಯಸ್ಥ ಪ್ರಣಬ್ ಮೋಹಂತಿ ಅವರನ್ನು ನಗರದಲ್ಲಿ ಇಂದು ಭೇಟಿಯಾಗಿ ಚರ್ಚೆ ನಡೆಸಿದರು.
ಸದಾಶಿವನಗರದ ನಿವಾಸದಲ್ಲಿ ಜಿ ಪರಮೇಶ್ವರ ಭೇಟಿಯಾಗಿ ಎಸ್‌ಐಟಿ ಮುಖ್ಯಸ್ಥ ಆಗಿರುವ ಪ್ರಣಬ್ ಮೋಹಂತಿ ಧರ್ಮಸ್ಥಳ ಪ್ರಕರಣದ ಕುರಿತು ಚರ್ಚಿಸಿದರು.
ಧರ್ಮಸ್ಥಳ ಪ್ರಕರಣದಲ್ಲಿ ಈವರೆಗಿನ ತನಿಖಾ ಬೆಳವಣಿಗೆ, ಎಸ್ ಐಟಿ ಕೈಗೊಳ್ಳಲಿರುವ ಮುಂದಿನ ನಡೆ ವಿಚಾರವಾಗಿ ಚರ್ಚೆ ನಡೆಸಿದರು ಎಂದು ತಿಳಿದುಬಂದಿದೆ.
ಎಸ್‌ಐಟಿ ಕಸ್ಟಡಿ ಅಂತ್ಯ:
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಸುಕುಧಾರಿ ಚಿನ್ನಯ್ಯನ ಎಸ್‌ಐಟಿ ಕಸ್ಟಡಿ ನಾಳೆಗೆ ಅಂತ್ಯವಾಗಲಿದೆ. ನಾಳೆ ಚಿನ್ನಯ್ಯನನ್ನು ಕೋರ್ಟ್‌ಗೆ ಹಾಜರುಪಡಿಸಲಾಗುವುದು.
ಚಿನ್ನಯ್ಯ ಕಳೆದ ೧೦ ದಿನಗಳಿಂದ ಎಸ್‌ಐಟಿ ಕಸ್ಟಡಿಯಲ್ಲಿದ್ದ. ನಾಳೆ ಆರೋಪಿಯನ್ನು ಬೆಳ್ತಂಗಡಿ ಕೋರ್ಟಿಗೆ ಹಾಜರುಪಡಿಸಲಾಗುವುದು. ಚಿನ್ನಯ್ಯ ವಾಸವಿದ್ದ ಮಂಡ್ಯ-ತಮಿಳುನಾಡು ಸ್ಥಳ ಮಹಜರು ಬಾಕಿ ಇದೆ. ಹೀಗಾಗಿ, ಮತ್ತೆ ೧೦ ರಿಂದ ೧೫ ದಿನ ಕಸ್ಟಡಿಗೆ ಕೇಳುವ ಸಾಧ್ಯತೆಯಿದೆ.
ವಿಚಾರಣೆ ಮತ್ತಷ್ಟು ತೀವ್ರ,:
ನಿನ್ನೆ ಕೂಡ ಸಂಜೆ ೭ ಗಂಟೆ ಬಳಿಕ ಎಸ್‌ಐಟಿ ಸ್ಥಳ ಮಹಜರು ನಡೆಸಿತ್ತು. ಮತ್ತೆ ವಶಕ್ಕೆ ಪಡೆದು ಮಂಡ್ಯ-ತಮಿಳುನಾಡು ಭೇಟಿ ಸಾಧ್ಯತೆ ಇದೆ. ಇವತ್ತು ಚಿನ್ನಯ್ಯನನ್ನು ಮತ್ತಷ್ಟು ತೀವ್ರ ವಿಚಾರಣೆಗೆ ಒಳಪಡಿಸಲಿದೆ.
ಧರ್ಮಸ್ಥಳದ ಭಾಗದಲ್ಲಿ ಶವಗಳ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿನ್ನಯ್ಯನ ವಿಚಾರಣೆ ನಡೆದಿತ್ತು. ಆತ ತೋರಿಸಿದ ಸ್ಥಳಗಳಲ್ಲಿ ಶವಗಳ ಉತ್ಖನನ ನಡೆದಿತ್ತು. ಎರಡು ಸ್ಥಳಗಳಲ್ಲಿ ಬಿಟ್ಟರೆ, ಇನ್ಯಾವ ಕಡೆಯೂ ಯಾವುದೇ ಕುರುಹು ದೊರೆಯಲಿಲ್ಲ. ಇದಾದ ಬಳಿಕ ಹೆಚ್ಚಿನ ವಿಚಾರಣೆಗೆ ಚಿನ್ನಯ್ಯನನ್ನು ವಶಕ್ಕೆ ಪಡೆಯಲಾಗಿದೆ.


























