Home ಜಿಲ್ಲೆ ಕಲಬುರಗಿ ವಂದೇ ಮಾತರಂ ಹಾಡದಿರುವುದಕ್ಕೆ ಆಕ್ರೋಶ

ವಂದೇ ಮಾತರಂ ಹಾಡದಿರುವುದಕ್ಕೆ ಆಕ್ರೋಶ

ಕಾಳಗಿ : ಪಟ್ಟಣ ಪಂಚಾಯಿತಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಂದೇ ಮಾತರಂ ಗೀತೆ ಹಾಡಿಸದಿರುವುದು ವಿವಾದಕ್ಕೆ ಕಾರಣವಾಗಿದೆ. ಸರ್ಕಾರದ ಆದೇಶದಂತೆ ಕಾರ್ಯಕ್ರಮದಲ್ಲಿ ವಂದೇ ಮಾತರಂ ಗೀತೆಗೆ ಅವಕಾಶ ಕಲ್ಪಿಸಿ ಗೌರವ ಸಲ್ಲಿಸಬೇಕಾಗಿದ್ದರೂ, ಪಟ್ಟಣ ಪಂಚಾಯಿತಿ ಕಾರ್ಯಕ್ರಮದಲ್ಲಿ ಅದನ್ನು ನಿರ್ಲಕ್ಷಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಸರ್ಕಾರದ ನಿರ್ದೇಶನಗಳನ್ನು ಪಾಲಿಸಬೇಕಾದ ಸ್ಥಳೀಯ ಆಡಳಿತದ ಕಾರ್ಯಕ್ರಮದಲ್ಲಿಯೇ ಇಂತಹ ನಿರ್ಲಕ್ಷ್ಯ ನಡೆದಿರುವುದು ಕನ್ನಡಪರ ಸಂಘಟನೆಗಳು ಆಕ್ರೋಶಕ್ಕೆ ಕಾರಣವಾಗಿದೆ ಎಂದು ಪಟ್ಟಣ ಪಂಚಾಯತಿ ಸದಸ್ಯ ರಮೇಶ ಕಿಟ್ಟದ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ವಂದೇ ಮಾತರಂ ಗೀತೆ ಹಾಡಬೇಕು ಎಂಬ ಕೇಂದ್ರ ಸರ್ಕಾರದ ಸ್ಪಷ್ಟ ಆದೇಶವಿದ್ದರೂ ಪಟ್ಟಣ ಪಂಚಾಯಿತಿ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ಖಂಡನೀಯ. ಕನ್ನಡ ರಾಜ್ಯೋತ್ಸವದಂತಹ ಮಹತ್ವದ ಕಾರ್ಯಕ್ರಮದಲ್ಲಿ ಸರ್ಕಾರದ ಆದೇಶ ಪಾಲಿಸದೆ ಲೋಪ ಎಸಗಿರುವುದರಿಂದ ಪಟ್ಟಣ ಪಂಚಾಯಿತಿಯ ಆಡಳಿತ ವ್ಯವಸ್ಥೆಗೆ ಅಪಖ್ಯಾತಿ ಉಂಟಾಗಿದೆ. ಸರ್ಕಾರಿ ಆದೇಶಗಳನ್ನು ಪಾಲಿಸುವ ಜವಾಬ್ದಾರಿ ಹೊಂದಿರುವ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಗಳೇ ಈ ರೀತಿ ನಿರ್ಲಕ್ಷ್ಯ ತೋರಿದರೆ ಸಾರ್ವಜನಿಕರಿಗೆ ಯಾವ ಸಂದೇಶ ನೀಡಿದಂತಾಗುತ್ತದೆ ಎಂದು ಪ್ರಶ್ನಿಸಿದರು.
ಸರ್ಕಾರದ ಆದೇಶಗಳನ್ನು ಪಾಲಿಸುವಲ್ಲಿ ವಿಫಲರಾದ ಸಂಬAಧಪಟ್ಟವರ ವಿರುದ್ಧ ಮೇಲಾಧಿಕಾರಿಗಳು ಕೂಡಲೇ ತನಿಖೆ ನಡೆಸಿ ಶಿಸ್ತು ಕ್ರಮ ಕೈಗೊಳ್ಳಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಅವರು ಒತ್ತಾಯಿಸಿದರು.

ಜೈ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷ ರೇವಣಸಿದ್ಧ ಪೂಜಾರಿ, ಪುರುಷೋತ್ತಮ ಗುತ್ತೇದಾರ, ಜಿತೇಂದ್ರ ರಾಠೋಡ, ಕಾಶೀನಾಥ ರಾಜಾಪುರ, ಚಂದ್ರಕಾAತ ಜಾಧವ ಇದ್ದರು.