Home ಜಿಲ್ಲೆ ಬೆಂಗಳೂರು ಇ-ಖಾತೆಗಾಗಿ ಅಲೆದಾಟ ಅಧಿಕಾರಿಗಳ ವಿರುದ್ಧ ಆಕ್ರೋಶ

ಇ-ಖಾತೆಗಾಗಿ ಅಲೆದಾಟ ಅಧಿಕಾರಿಗಳ ವಿರುದ್ಧ ಆಕ್ರೋಶ

ಬಂಗಾರಪೇಟೆ.ಜೂ೬: ಸರ್ಕಾರ ಸಾರ್ವಜನಿಕ ಸೇವೆಗಳನ್ನು ಸುಲಭ ಗೊಳಿಸುವ ಉದ್ದೇಶದಿಂದ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಆಡಳಿತ ವ್ಯವಸ್ಥೆಯನ್ನು ಡಿಜಿಟಲೀಕರಣಗೊಳಿಸುತ್ತಿದೆ. ಆದರೆ ಬಂಗಾರಪೇಟೆ ತಾಲೂಕಿನ ಕೆಸರನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ, ಬೇಜವಾಬ್ದಾರಿತನ ಹಾಗೂ ಭ್ರಷ್ಟ ಮನೋಭಾವದಿಂದ ಸಾಮಾನ್ಯನಿಗೆ ಮೂಲಭೂತ ಸೇವೆ ಮರೀಚಿಕೆಯಾಗಿವೆ ಎಂಬ ಆರೋಪ ಕೇಳಿಬಂದಿದೆ.


ತಾಲೂಕಿನ ಕೆಸರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಟ್ನಹಳ್ಳಿ ಮಜರಾ ರಾಮಲಿಂಗಾಪುರ ಗ್ರಾಮದ ನಿವಾಸಿ, ಪೈಂಟ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಪಾಪಯ್ಯ ಬಿನ್ ವೆಂಕಟಪ್ಪ ಅವರು ತಮ್ಮ ಸ್ವಂತ ಮನೆಗೆ ಇ-ಖಾತೆ ಮಾಡಿಕೊಡುವಂತೆ ಸುಮಾರು ಒಂದೂವರೆ ವರ್ಷಗಳ ಹಿಂದೆ ಅರ್ಜಿ ಸಲ್ಲಿಸಿದ್ದರು. ಕಾನೂನುಬದ್ಧವಾಗಿ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಒದಗಿಸಿದ್ದರೂ ಇಂದಿಗೂ ಇ-ಖಾತೆ ಮಂಜೂರಾಗಿಲ್ಲ ಎಂದು ಅವರು ಆರೋಪಿಸಿದ್ದಾರೆ.


ಕುಟುಂಬ ನಿರ್ವಹಣೆ ಹಾಗೂ ಸಾಲದ ಹೊರೆ ತೀರಿಸಲು ತಮ್ಮ ಮನೆಯ ಮೇಲೆ ಬ್ಯಾಂಕ್ ಸಾಲ ಪಡೆಯಬೇಕಿರುವ ಕಾರಣ ಇ-ಖಾತೆ ಅತ್ಯಗತ್ಯವಾಗಿದ್ದರೂ, ಅಧಿಕಾರಿಗಳು ಕಡತವನ್ನು ಉದ್ದೇಶಪೂರ್ವಕವಾಗಿ ವಿಲೇವಾರಿ ಮಾಡದೆ ಸತಾಯಿಸುತ್ತಿದ್ದಾರೆ ಎನ್ನಲಾಗಿದೆ. ಎರಡು ಬಾರಿ ಅಧಿಕೃತವಾಗಿ ಅರ್ಜಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಅವರ ನೋವು. ಈ ಬಗ್ಗೆ ವಿಚಾರಿಸಿದಾಗ ಪಂಚಾಯಿತಿ ಸಿಬ್ಬಂದಿ ಹಾಗೂ ಅಧಿಕಾರಿಗಳು “ನಿಮ್ಮ ಅರ್ಜಿ ಕಳೆದುಹೋಗಿದೆ, ಮತ್ತೊಮ್ಮೆ ಅರ್ಜಿ ಸಲ್ಲಿಸಿ” ಎಂದು ಉತ್ತರಿಸಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಸಾರ್ವಜನಿಕರ ದಾಖಲೆಗಳನ್ನು ಸಂರಕ್ಷಿಸಲು ವಿಫಲವಾದ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.


ಒಂದೂವರೆ ವರ್ಷಗಳಿಂದ ಕಚೇರಿಗೆ ಅಲೆದಾಡುತ್ತಿರುವ ಬಡ ಕಾರ್ಮಿಕನ ಸಮಸ್ಯೆಯನ್ನು ಪರಿಹರಿಸುವ ಬದಲು, ಅರ್ಜಿ ಕಳೆದುಹೋಗಿದೆ ಎಂಬ ಕಾರಣ ಹೇಳಿ ಮತ್ತೆ ಅರ್ಜಿ ಸಲ್ಲಿಸಲು ಸೂಚಿಸಿರುವುದು ಆಡಳಿತದ ವೈಫಲ್ಯ ಎದ್ದು ಕಾಣುತ್ತಿದೆ. ಸಾರ್ವಜನಿಕರ ದಾಖಲೆಗಳನ್ನು ಕಾಪಾಡಿಕೊಳ್ಳಲು ಸಾಧ್ಯವಾಗದ ಅಧಿಕಾರಿಗಳು ತಮ್ಮ ಹುದ್ದೆಯಲ್ಲಿ ಮುಂದುವರಿಯಲು ನೈತಿಕ ಹಕ್ಕು ಹೊಂದಿದ್ದಾರೆಯೇ ಎಂಬ ಪ್ರಶ್ನೆ ಸ್ಥಳೀಯರಲ್ಲಿ ಮೂಡಿದೆ.


ಈ ಕುರಿತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ಸಂಪರ್ಕಿಸಲು ಅನೇಕ ಬಾರಿ ದೂರವಾಣಿ ಕರೆ ಮಾಡಿದರೂ ಪ್ರತಿಕ್ರಿಯೆ ದೊರೆತಿಲ್ಲ ಎಂದು ಆರೋಪಿಸಲಾಗಿದೆ. ಸಾರ್ವಜನಿಕರ ಕರೆಗಳನ್ನು ಸ್ವೀಕರಿಸದಿರುವುದು ಹಾಗೂ ಸಮಸ್ಯೆಗಳ ಬಗ್ಗೆ ಸ್ಪಂದಿಸದಿರುವುದು ಅಧಿಕಾರಿಗಳ ದರ್ಪವನ್ನು ತೋರಿಸುತ್ತದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಇಂತಹ ಗಂಭೀರ ನಿರ್ಲಕ್ಷ್ಯದ ನಡುವೆಯೂ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ (ಇಒ) ಯಾವುದೇ ಕ್ರಮ ಕೈಗೊಳ್ಳದಿರುವುದು ಆಶ್ಚರ್ಯಕರವಾಗಿದೆ. ಸರ್ಕಾರಿ ಕಚೇರಿಗಳು ಜನಸೇವೆಗೆ ಮೀಸಲಾಗಿವೆಯೋ ಅಥವಾ ಅಧಿಕಾರಿಗಳ ಸ್ವೇಚ್ಛಾಚಾರಕ್ಕೆ ವೇದಿಕೆಯಾಗಿವೆಯೋ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.


ಈ ಪ್ರಕರಣವನ್ನು ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ, ಬಡ ಕಾರ್ಮಿಕನಿಗೆ ನ್ಯಾಯ ಒದಗಿಸಬೇಕು. ಇ-ಖಾತೆ ನೀಡದೆ ವಿಳಂಬ ಹಾಗೂ ನಿರ್ಲಕ್ಷ್ಯ ತೋರಿರುವ ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತು ಕ್ರಮ ಜರುಗಿಸಬೇಕು. ಪಾಪಯ್ಯ ಅವರಿಗೆ ತಕ್ಷಣ ಇ-ಖಾತೆ ಮಂಜೂರು ಮಾಡಬೇಕು ಎಂದು ಕರ್ನಾಟಕ ದಲಿತ ರೈತಸೇನೆ ರಾಜ್ಯಾಧ್ಯಕ್ಷ ಹುಣಸನಹಳ್ಳಿ ಎನ್. ವೆಂಕಟೇಶ್ ಆಗ್ರಹಿಸಿದ್ದಾರೆ.