
ಸೇಡಮ್ : ಶ್ರೀ ಹೇಮರೆಡ್ಡಿ ಮಲ್ಲಮ್ಮನವರ 109 ನೇ ಪುಣ್ಯಾರಾಧನೆ ನಿಮಿತ್ತ ಏರ್ಪಡಿಸಲಾಗಿರುವ “ಶ್ರೀ ಹೇಮರೆಡ್ಡಿ ಮಲ್ಲಮ್ಮನವರ ಚರಿತಾಮೃತ” ಪ್ರವಚನ ಮಾಲಿಕೆಯ 5ನೇ ದಿನದ ಕಾರ್ಯಕ್ರಮವು ಭಕ್ತಿ, ದಾಸೋಹ ಹಾಗೂ ಸತ್ಯಶುದ್ಧ ಕಾಯಕದ ಮಹತ್ವವನ್ನು ಸಾರುವ ಮೂಲಕ ಭಕ್ತಿಭಾವದಿಂದ ಜರುಗಿತು.ಪ್ರವಚನಕಾರರಾದ ಷ.ಬ್ರ. ಶ್ರೀ ಗುರುಸಿದ್ದೇಶ್ವರ ಶಿವಾಚಾರ್ಯರು, ಸುರಗೀಶ್ವರ ಮಠ, ನೂಲ, ಅವರು ಮಾತನಾಡಿ, “ದಾನ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಿದ ದೇಶ ನಮ್ಮದು”ಎಂದು ಭಾರತದ ಶ್ರೇಷ್ಠ ದಾನ ಪರಂಪರೆಯನ್ನು ಸ್ಮರಿಸಿದರು. ದಾನವೆಂದರೆ ಕೇವಲ ಸಂಪತ್ತನ್ನು ಹಂಚುವುದಲ್ಲ, ಶುದ್ಧ ಮನಸ್ಸಿನಿಂದ, ಪ್ರತಿಫಲಾಪೇಕ್ಷೆಯಿಲ್ಲದೆ, ಸಮಾಜದ ಒಳಿತಿಗಾಗಿ ಮಾಡುವ ಸೇವೆಯೇ ನಿಜವಾದ ದಾನ ಎಂದು ವಿವರಿಸಿದರು.ಶ್ರೀ ಹೇಮರೆಡ್ಡಿ ಮಲ್ಲಮ್ಮನವರ ಜೀವನದ ಆದರ್ಶಗಳನ್ನು ಪ್ರಸ್ತಾಪಿಸಿದ ಅವರು, “ಮಲ್ಲಮ್ಮಾಂಬೆ ಕ್ಷಮಾಗುಣಸಂಪನ್ನೆ. ಮಲ್ಲಮ್ಮಾಂಬೆಯ ದಾಸೋಹ ಭಾವದಿಂದ ಮತ್ತೆ ಮನೆತನದ ಸಾಮ್ರಾಜ್ಯ ಮರುಕಳಿಸಿತು” ಎಂಬುದನ್ನು ಉಲ್ಲೇಖಿಸಿ, ಅವರ ಜೀವನದಲ್ಲಿ ಕ್ಷಮೆ, ಕರುಣೆ, ದಾಸೋಹ ಮತ್ತು ಭಕ್ತಿಯು ಹೊಂದಿದ್ದ ಮಹತ್ವವನ್ನು ವಿವರಿಸಿದರು. ಮಲ್ಲಮ್ಮನವರ ಬದುಕು ಕೇವಲ ಒಂದು ವ್ಯಕ್ತಿಯ ಚರಿತ್ರೆಯಲ್ಲ; ಅದು ಸಮಾಜಕ್ಕೆ ದಾಸೋಹ, ಸೇವೆ ಮತ್ತು ಮಾನವೀಯತೆಯ ಪಾಠ ಕಲಿಸುವ ಆದರ್ಶ ಜೀವನ ಎಂದು ಹೇಳಿದರು.ಕಾರ್ಯಕ್ರಮದ ಪಾವನ ಸಾನ್ನಿಧ್ಯವನ್ನು ಷ.ಬ್ರ. ಶಿವಶಂಕರಯ್ಯ ಶಿವಾಚಾರ್ಯರು ವಹಿಸಿದ್ದರು. ಪೂಜ್ಯ ಶ್ರೀ ಡಾ. ಸದಾಶಿವ ಸ್ವಾಮೀಜಿಯವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಸಮ್ಮುಖವನ್ನು ಮ.ನಿ.ಪ್ರ. ಪಂಚಾಕ್ಷರಿ ಮಹಾಸ್ವಾಮಿಗಳು ವಹಿಸಿದ್ದರು.ಈ ದಿನದ ಪ್ರವಚನ ದಾಸೋಹ ಸೇವೆಗೈದ ಶ್ರೀ ಅಶೋಕರಡ್ಡಿ ಕೇರಳ್ಳಿ ಹಾಗೂ ಶ್ರೀ ಶಿವಲಿಂಗರಡ್ಡಿ ಪಾಟೀಲ ಬೆನಕನಹಳ್ಳಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.























