Home ಜಿಲ್ಲೆ ಎಸ್‍ಐಆರ್ ಹಾಗೂ ಇವಿಎಂ ವಿರೋಧಿಸಿ ನಡೆಸಿದ “ವೋಟ್ ಸತ್ಯಾಗ್ರಹ”ಕ್ಕೆ ತೆರೆ

ಎಸ್‍ಐಆರ್ ಹಾಗೂ ಇವಿಎಂ ವಿರೋಧಿಸಿ ನಡೆಸಿದ “ವೋಟ್ ಸತ್ಯಾಗ್ರಹ”ಕ್ಕೆ ತೆರೆ

ಔರಾದ್: ಮೇ.24:ಮತದಾರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‍ಐಆರ್) ಹಾಗೂ ಇವಿಎಂ ಸಂಪೂರ್ಣ ರದ್ದುಗೊಳಿಸುವಂತೆ ಆಗ್ರಹಿಸಿ ಔರಾದ್ ಪಟ್ಟಣದ ನಿವಾಸಿ ಗೋಪಾಲ್ ಸಿಂಗ್ ಠಾಕೂರ್ ಅವರು ನಡೆಸುತ್ತಿದ್ದ 21 ದಿನಗಳ ಏಕಾಂಗಿ ಉಪವಾಸ ಸತ್ಯಾಗ್ರಹ ಶನಿವಾರ ಅಂತ್ಯಗೊಂಡಿತು.

ಪಟ್ಟಣದ ಮಿನಿ ವಿಧಾನಸೌಧ ಎದುರು “ವೋಟ್ ಸತ್ಯಾಗ್ರಹ” ಹೆಸರಿನಲ್ಲಿ ಮೇ 3ರಿಂದ ಕೇವಲ ನೀರು ಸೇವಿಸಿ ಗೋಪಾಲ್ ಸಿಂಗ್ ಠಾಕೂರ್ ಉಪವಾಸ ಆರಂಭಿಸಿದ್ದರು. ತಮ್ಮ ಬೇಡಿಕೆಗಳ ಕುರಿತು ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗಳಿಗೆ ಹಕ್ಕೊತ್ತಾಯ ಪತ್ರ ರವಾನಿಸುವಂತೆ ಆಗ್ರಹಿಸಿದ್ದರು. ರಾಷ್ಟ್ರಪತಿಗಳಿಂದ ಸ್ಪಂದನೆ ಸಿಗುವವರೆಗೂ ಹೋರಾಟ ಮುಂದುವರೆಸುವುದಾಗಿ ತಿಳಿಸಿದ್ದರು.

ಸತ್ಯಾಗ್ರಹ 17ನೇ ದಿನಕ್ಕೆ ಕಾಲಿಟ್ಟಾಗ ಗೋಪಾಲ್ ಸಿಂಗ್ ಠಾಕೂರ್ ಅಸ್ವಸ್ಥಗೊಂಡಿದ್ದು, ಅವರನ್ನು ಔರಾದ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಚಿಕಿತ್ಸೆ ಪಡೆದು ಅವರು ಮತ್ತೆ ಧರಣಿ ಸ್ಥಳಕ್ಕೆ ಮರಳಿ ಉಪವಾಸ ಮುಂದುವರೆಸಿದ್ದರು.

ಗೋಪಾಲ್ ಸಿಂಗ್ ಅವರ ಆರೋಗ್ಯದ ಹಿತದೃಷ್ಟಿಯಿಂದ ಬೀದರ್ ಜಿಲ್ಲಾ ಎಸ್‍ಐಆರ್ ವಿರೋಧಿ ಸಮಿತಿಯ ಪ್ರಮುಖರು ಶನಿವಾರ ಧರಣಿ ಸ್ಥಳಕ್ಕೆ ಭೇಟಿ ನೀಡಿ ಸತ್ಯಾಗ್ರಹ ಹಿಂಪಡೆಯುವಂತೆ ಮನವೊಲಿಸಿದರು. ಬಳಿಕ ತಹಸೀಲ್ದಾರ್ ಮಹೇಶ್ ಪಾಟೀಲ್ ಹಾಗೂ ಸಮಿತಿಯ ಪ್ರಮುಖರು ಗೋಪಾಲ್ ಸಿಂಗ್ ಠಾಕೂರ್ ಅವರಿಗೆ ಎಳೆನೀರು ಕುಡಿಸಿ ಸತ್ಯಾಗ್ರಹ ಅಂತ್ಯಗೊಳಿಸಿದರು.

ಸತ್ಯಾಗ್ರಹ ಹಿಂಪಡೆದ ಬಳಿಕ ಮಾತನಾಡಿದ ಗೋಪಾಲ್ ಸಿಂಗ್ ಠಾಕೂರ್, “ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಹಕ್ಕು ಕಸಿಯುವ ಕೆಲಸ ಆಗಬಾರದು. ಎಸ್‍ಐಆರ್ ಹಾಗೂ ಇವಿಎಂ ಮೂಲಕ ಪ್ರಜಾತಂತ್ರ ದುರ್ಬಲಗೊಳಿಸುವ ನೀತಿಯ ವಿರುದ್ಧ ಗಾಂಧೀಜಿಯವರ ಅಹಿಂಸಾ ಮಾರ್ಗದಲ್ಲಿ ಹೋರಾಟ ನಡೆಸಿದ್ದೇನೆ. ಯುವಜನತೆ ದೇಶದ ವಿದ್ಯಮಾನಗಳ ಕುರಿತು ಆಳವಾಗಿ ಚಿಂತಿಸಬೇಕು. ಗಾಂಧಿ, ಅಂಬೇಡ್ಕರ್ ಹಾಗೂ ಭಗತ್ ಸಿಂಗ್ ಆದರ್ಶಗಳೊಂದಿಗೆ ಪ್ರಜಾತಂತ್ರ ಉಳಿವಿಗಾಗಿ ಹೋರಾಟ ಅಗತ್ಯವಿದೆ” ಎಂದರು.

ಎಸ್‍ಐಆರ್ ಹೆಸರಿನಲ್ಲಿ ಮತಹಕ್ಕು ಕಸಿಯುವ ಪ್ರಯತ್ನ ನಡೆಯಬಾರದು. ಇವಿಎಂ ಬದಲಿಗೆ ಬ್ಯಾಲೆಟ್ ಪೇಪರ್ ಪುನಃ ಜಾರಿಗೆ ತರಬೇಕು. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಶಾಹಿದ್ ಭಗತ್ ಸಿಂಗ್ ಅವರಿಗೆ ‘ಭಾರತ ರತ್ನ’ ನೀಡಬೇಕು ಎಂದು ಅವರು ಆಗ್ರಹಿಸಿದರು. ಸಮಾಜದಲ್ಲಿ ನಡೆಯುವ ಅನ್ಯಾಯಗಳ ವಿರುದ್ಧ ಹೋರಾಟವನ್ನು ವಿವಿಧ ರೀತಿಯಲ್ಲಿ ಮುಂದುವರೆಸುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಪೂಜ್ಯ ಸಿದ್ಧರಾಮ ಶರಣರು ಬೆಲ್ದಾಳ, ಅಬ್ದುಲ್ ಮನ್ನಾನ್ ಸೇಠ್, ಬಾಬುರಾವ್ ಹೊನ್ನಾ, ಓಂಪ್ರಕಾಶ ರೊಟ್ಟೆ ಹಾಗೂ ಮಹೇಶ್ ಗೋರನಾಳಕರ್ ಮಾತನಾಡಿ, “ದೇಶದಲ್ಲಿ ಪ್ರಜಾತಂತ್ರಕ್ಕೆ ಗಂಡಾಂತರ ಎದುರಾಗಿದೆ. ಎಸ್‍ಐಆರ್ ಮತ್ತು ಇವಿಎಂ ಹೆಸರಿನಲ್ಲಿ ಜನರ ಹಕ್ಕು ಕಸಿಯುವ ವ್ಯವಸ್ಥಿತ ಹುನ್ನಾರ ನಡೆಯುತ್ತಿದೆ. ಪ್ರಜಾಪ್ರಭುತ್ವ ದೇಶದಲ್ಲಿ ಸರ್ವಾಧಿಕಾರ ಆಡಳಿತಕ್ಕೆ ವಿರೋಧವಾಗಿ ಸಂಘಟಿತ ಹೋರಾಟ ಅಗತ್ಯವಾಗಿದೆ” ಎಂದು ಹೇಳಿದರು.

21 ದಿನಗಳ ನಿರಂತರ ಉಪವಾಸ ಸತ್ಯಾಗ್ರಹ ದೇಶದ ಪ್ರಜಾತಂತ್ರ ಮೌಲ್ಯಗಳ ರಕ್ಷಣೆಗೆ ಮಾದರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಈ ವೇಳೆ ಮಾಜಿ ವಿಧಾನ ಪರಿಷತ್ ಸದಸ್ಯ ಕೆ. ಪುಂಡಲಿಕರಾವ್, ಅರವಿಂದಕುಮಾರ ಅರಳಿ, ಮಾರುತಿ ಬೌದ್ಧೆ, ಡಾ. ಫಯಾಜ್, ಬಂಟಿ ದರ್ಬಾರೆ, ಶರಣಪ್ಪ ಪಾಟೀಲ್, ಅಮೀರೋದ್ದಿನ್, ಜಗದೀಶ್ವರ ಬಿರಾದಾರ, ರಜೀಯಾ ಬಳಬಟ್ಟಿ, ಮಂಜುಳಾ, ರಾಮಣ್ಣ ಒಡೆಯರ್, ಶಿವಮೂರ್ತಿ ಸುಬಾನೆ, ಓಂಪ್ರಕಾಶ ರೊಟ್ಟೆ, ಬಾಬುರಾವ್ ಹೊನ್ನಾ, ಪ್ರಕಾಶ ರಾವಣ, ಚಂದ್ರಶೇಖರ್ ಪಾಟೀಲ್ ಹೊಚಕನಳ್ಳಿ, ಸುಭಾಷ ಲಾಧಾ, ಗಣಪತಿ ವಾಸುದೇವ ಸೇರಿದಂತೆ ಹಲವರು ಉಪಸ್ಥಿತರಿದ್ದರು.