
ಬೆಂಗಳೂರು, ಡಿ. ೫- ಮದ್ಯ ಮತ್ತು ಮಾದಕವಸ್ತುಗಳಿಂದ ಆಗುವಂತ ದುಷ್ಪರಿಣಾಮದ ಕುರಿತು ಅತ್ಯಂತ ಪರಿಣಾಮಕಾರಿಯಾಗಿ ಇಂದಿನ ಪೀಳಿಗೆಗೆ ನಿರಂತರವಾಗಿ ಜಾಗೃತಿ ಮೂಡಿಸುವ ಕಾರ್ಯ ಮತ್ತು ದೃಢ ಸಂಕಲ್ಪದಿಂದ ಮಾತ್ರ ವ್ಯಸನ ಮುಕ್ತ ಸಮಾಜದ ಕನಸು ನನಸಾಗಲು ಸಾಧ್ಯ ಎಂದು ಇಳಕಲ್ ನ ಚಿತ್ತರಗಿ ವಿಜಯಮಾಂತೇಶ್ವರ ಮಠದ ಗುರುಮಹಾಂತ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಗಾಂಧಿ ಭವನದಲ್ಲಿ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಕಾರ್ಯ ಚಟುವಟಿಕೆ ಕುರಿತು ಸಮಾಲೋಚನೆ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಭವಿಷ್ಯತ್ತಿನಲ್ಲಿ ಮದ್ಯಪಾನ, ಮಾದಕ ವಸ್ತುಗಳ ವ್ಯಸನ ಮುಕ್ತ ಸಮಾಜಕ್ಕಾಗಿ ಶಿಕ್ಷಕರು, ವಿದ್ಯಾರ್ಥಿಗಳನ್ನು ಸಕ್ರಿಯವಾಗಿ ಪಾಲ್ಗೊಳ್ಳುವ ಕಾರ್ಯವಾಗಬೇಕು. ಪ್ರತಿ ಶಿಕ್ಷಕರು ಒಂದೊಂದು ವಿದ್ಯಾರ್ಥಿಗಳಿಂದ ಮದ್ಯಪಾನ ಮತ್ತು ಮಾದಕ ವಸ್ತುಗಳ ವ್ಯಸನಕ್ಕೆ ಬದುಕಿನಲ್ಲಿ ಆಸ್ಪದ ಕೊಡುವುದಿಲ್ಲವೆಂಬ ಪ್ರಮಾಣವನ್ನು ಮಾಡಿಸಿಕೊಳ್ಳಬೇಕು. ಅಲ್ಲದೇ ವಿದ್ಯಾರ್ಥಿಗಳು ಸಹ ಪೋಷಕರಿಗೆ, ಅಕ್ಕಪಕ್ಕದ ನಿವಾಸಿಗಳಿಗೆ ಮದ್ಯಪಾನ ಮಾಡದಂತೆ ಭಾವನಾತ್ಮಕವಾಗಿ ಅವರನ್ನು ಕಟ್ಟಿಹಾಕಬೇಕು ಎಂದು ಸಲಹೆ ನೀಡಿದರು.
ಮದ್ಯ ಮಾರಾಟ ನಿಷೇಧ ಮಾಡಿಸುವುದು ನಮ್ಮಿಂದ ಅಸಾಧ್ಯವಾಗಬಹುದೇನು. ಆದರೆ ಕುಡಿತಕ್ಕೆ ಬಲಿಯಾಗುವವರನ್ನು ತಡೆಯುವುದು ಎಲ್ಲಾ ಧರ್ಮ ಗುರುಗಳಿಂದ, ಪ್ರಜ್ಞಾವಂತರಿಂದ ಸಾಧ್ಯವಿದೆ. ವ್ಯಸನಿಗಳು ಕಡಿಮೆಯಾದಂತೆ ಮದ್ಯದ ಅಂಗಡಿ, ಇತರೆ ಮಾದಕ ವಸ್ತುಗಳ ಮಾರಾಟ ಕ್ಷೀಣಿಸುತ್ತದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲದಾಪುರ ಅವರು ಮಾತನಾಡಿ, ಅಧಿಕಾರ ಸ್ವೀಕರಿಸಿದ ದಿನದಿಂದ ನಿರಂತರವಾಗಿ ವ್ಯಸನ ಮುಕ್ತ ಸಮಾಜಕ್ಕಾಗಿ ಶ್ರಮಿಸಲಾಗುತ್ತಿದೆ. ನಕಲಿ, ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲು ಎಲ್ಲಾ ಜಿಲ್ಲೆಯ ಅಬಕಾರಿ ಡಿಸಿಗಳಿಗೆ ಪತ್ರದ ಮೂಲಕ ಸೂಚಿಸಲಾಗಿದೆ. ಪಠ್ಯಪುಸ್ತಕಗಳಲ್ಲಿ ಮದ್ಯ, ಮಾದಕ ವಸ್ತುಗಳ ವ್ಯಸನಗಳಿಂದ ಆಗುವ ಅತ್ಯಂತ ಕೆಟ್ಟ ಪರಿಣಾಮ ಕುರಿತು ಸಂಭಾಷಣೆ ರೂಪದಲ್ಲಿ ಪಾಠಗಳನ್ನು ಸೇರಿಸಬೇಕಿದೆ.
ವಿದ್ಯಾರ್ಥಿಗಳೇ ಭವಿಷ್ಯದ ಪ್ರಜೆಗಳು. ಆದ್ದರಿಂದ ಅವರನ್ನು ಜಾಗ್ರತಗೊಳಿಸಲು ಇನ್ನಷ್ಟು ಪ್ರಖರವಾದ ಕಾರ್ಯಕ್ರಮ, ಅಭಿಯಾನ ಮತ್ತು ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷರಾದ ನಾಡೋಜ ಡಾ. ವೂಡೇ ಪಿ .ಕೃಷ್ಣ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶೀಧರ ಕೋಸಂಭೆ, ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಸದಸ್ಯ ಅಲಿಬಾಬಾ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್, ಕರ್ನಾಟಕ ರಾಜ್ಯ ಪತ್ರಕರ್ತ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ್, ಎಚ್.ಬಿ.ದಿನೇಶ್, ಡಾ.ನೋಟಕಾರ್ ಎಸ್. ಸತೀಶ್ ಮಂಗ್ಳೂರು ವಿಜಯ, ಪತ್ರಕರ್ತ ಪ್ರಕಾಶ ದೊರೆ .
ಮಂಡಳಿಯ ಕಾರ್ಯದರ್ಶಿ ಮಹೇಶ್ ಇದ್ದರು.



























