Home ಜಿಲ್ಲೆ ಕಲಬುರಗಿ ಬೆಂದವರಷ್ಟೇ ಬೇಂದ್ರೆಯಾಗಲು ಸಾಧ್ಯ

ಬೆಂದವರಷ್ಟೇ ಬೇಂದ್ರೆಯಾಗಲು ಸಾಧ್ಯ

ಕಲಬುರಗಿ : ಬೇಂದ್ರೆಯವರು ಜೀವನದಲ್ಲಿ ಅನೇಕ ಕಷ್ಟಗಳನ್ನು
ಅನುಭವಿಸಿ, ಅವುಗಳನ್ನು ಸಾಹಿತ್ಯದಲ್ಲಿ ಕೃಷಿ ಮಾಡಿದ್ದರಿಂದ ಅವರ ಸಾಹಿತ್ಯವು ಹೆಚ್ಚು
ನೈಜತೆ ಹಾಗೂ ಗಟ್ಟಿತನದಿಂದ ಕೂಡಿದೆ. ಅವರಂತೆ ಸಾಹಿತ್ಯಕವಾಗಿ ಮೇರು ಸಾಧನೆ
ಮಾಡಬೇಕಾದರೆ, ಸಾಕಷ್ಟು ಸಮಸ್ಯೆಗಳನ್ನು ಮೆಟ್ಟಿ ನಿಲ್ಲಬೇಕು. ‘ಜೀವನದಲ್ಲಿ
ಬೆಂದವರು ಮಾತ್ರ ಬೇಂದ್ರೆಯಾಗಲು ಸಾಧ್ಯವಿದೆ’ ಎಂದು ಉಪನ್ಯಾಸಕ, ಲೇಖಕ
ಎಚ್.ಬಿ.ಪಾಟೀಲ ಮಾರ್ಮಿಕವಾಗಿ ಅಭಿಮತಪಟ್ಟರು. ನಗರದ ಆಳಂದ ರಸ್ತೆಯ ಶಿವ ನಗರದಲ್ಲಿನ ‘ಶ್ರೀ ಮಲ್ಲಿನಾಥ ಮಹಾರಾಜ ಶಾಲೆ’ಯಲ್ಲಿ
‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಏರ್ಪಡಿಸಿದ್ದ
‘ವರಕವಿ ದ.ರಾ.ಬೇಂದ್ರೆಯವರ 45ನೇ ಪುಣ್ಯಸ್ಮರಣೋತ್ಸವ’
ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಸಮ ಸಮಾಜದ ನಿರ್ಮಾಣಕ್ಕೆ ಅನುಭವ, ನೈಜತೆ, ಮೌಲ್ಯಗಳಿಂದ ಕೂಡಿದ
ಶ್ರೇಷ್ಠ ಸಾಹಿತ್ಯವನ್ನು ರಚಿಸಿ, ಕನ್ನಡವನ್ನು ಶ್ರೀಮಂತಗೊಳಿಸಿದ
ಬೇಂದ್ರೆಯವರ ಸಾಹಿತ್ಯ, ಕೃತಿಗಳು ವಿಮರ್ಶಕರು ಹಾಗೂ ಸಹೃದಯರ
ವಿಮರ್ಶಗೆ ಇಂದಿಗೂ ಕೂಡಾ ದಕ್ಕದಿರುವದು ಗಮನಿಸಿದರೆ, ಅವರ ಮೇರು
ವ್ಯಕ್ತಿತ್ವ ನಮಗೆ ತಿಳಿಯುತ್ತದೆ. ಬೇಂದ್ರೆಯವರು ನವೋದಯ
ಕಾಲಘಟ್ಟದಲ್ಲಿನ ಪ್ರಮುಖವಾದ ಸಾಹಿತಿಯಾಗಿದ್ದಾರೆ. ಮಾನವೀಯ ಮೌನೈಜತೆಗಳಿಂದ ಕೂಡಿದ ಸಾಹಿತ್ಯವನ್ನು ರಚಿಸಿ ಕನ್ನಡಕ್ಕೆ ಅಮೋಘವಾದ
ಕೊಡುಗೆಯನ್ನು ನೀಡಿದ್ದಾರೆ ಎಂದರು.
ಬೇಂದ್ರೆಯವರ ಸಾಹಿತ್ಯದಲ್ಲಿ ದೇಶಿ ಸೊಗಡು ಹಾಸು ಹೊಕ್ಕಿದೆ. ಮರಾಠಿ
ಮಾತೃಭಾಷೆಯಾದರು ಕೂಡಾ, ಕನ್ನಡದ ಮೇಲಿನ ಅಪಾರವಾದ ಪ್ರೀತಿಯಿಂದ
ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ದೊರಕಿಸಿಕೊಟ್ಟಿದ್ದು ಸಾಮಾನ್ಯವಾದ
ಸಂಗತಿಯಲ್ಲ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಮರ ಜಿ.ಬಂಗರಗಿ, ಶಾಲೆಯ ಮುಖ್ಯ ಶಿಕ್ಷಕಿ ಚಂಪಾ ನೆಲ್ಲುರೆ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.