
ಕಲಬುರಗಿ:ಜೂ.20:ಮನುಷ್ಯನ ಜೀವನದಲ್ಲಿ ವಿದ್ಯೆ, ಸಂಪತ್ತು, ಅಧಿಕಾರ ಮತ್ತು ಪ್ರತಿಭೆ ಎಷ್ಟೇ ಮುಖ್ಯವಾದರೂ, ಅವುಗಳಿಗೆ ಸರಿಯಾದ ದಿಕ್ಕನ್ನು ನೀಡುವುದು ಸಂಸ್ಕಾರ ಮಾತ್ರ ಎಂದು ಖ್ಯಾತ ಪ್ರವಚನ ಪಟುಗಳಾದ ಸಂಗಮೇಶ ಶಾಸ್ತ್ರಿ ಮಾಶಾಳ ಹೇಳಿದರು.ನಿನ್ನೆ ಬಸವಕಲ್ಯಾಣ ನಗರದ ನಾರಾಯಣಪುರ ರಸ್ತೆಯಲ್ಲಿರುವ ಶ್ರೀ ರವೀಂದ್ರನಾಥ ಠಾಗೂರ ನವೋದಯ, ಸೈನಿಕ ತರಬೇತಿ ಕೇಂದ್ರದಲ್ಲಿ “ಉತ್ತಮ ಬದುಕಿಗೆ ಸಂಸ್ಕಾರವೇ ಬುನಾದಿ” ವಿಷಯ ಕುರಿತು ವಿಶೇಷ ಉಪನ್ಯಾಸ ನೀಡುತ್ತ ಉತ್ತಮ ಸಂಸ್ಕಾರವಿಲ್ಲದ ಶಿಕ್ಷಣವು ಬೆಳಕಿಲ್ಲದ ದೀಪದಂತಿದೆ. ಸಂಸ್ಕಾರವು ವ್ಯಕ್ತಿಯ ಆಲೋಚನೆ, ನಡತೆ ಮತ್ತು ವ್ಯಕ್ತಿತ್ವವನ್ನು ರೂಪಿಸುತ್ತದೆ.ಮಕ್ಕಳಿಗೆ ಬಾಲ್ಯದಲ್ಲೇ ಕಲಿಸುವ ಸತ್ಯ, ಪ್ರಾಮಾಣಿಕತೆ, ಶಿಸ್ತು, ದಯೆ, ಸಹಾನುಭೂತಿ, ಹಿರಿಯರಿಗೆ ಗೌರವ ಮತ್ತು ದೇಶಭಕ್ತಿ ಮುಂತಾದ ಮೌಲ್ಯಗಳೇ ಅವರ ಭವಿಷ್ಯವನ್ನು ಉಜ್ವಲಗೊಳಿಸುತ್ತವೆ ಎಂದು ಮಾರ್ಮಿಕವಾಗಿ ನುಡಿದರು.ಮುಖ್ಯ ಅಥಿತಿಗಳಾದ ನ್ಯಾಯವಾದಿ ಹಣಮಂತರಾಯ ಅಟ್ಟೂರ ಮಾತನಾಡುತ್ತ ನವೋದಯ ಹಾಗೂ ಇತರ ತರಬೇತಿ ಕೇಂದ್ರಗಳು ಮಕ್ಕಳಲ್ಲಿ ಜ್ಞಾನ, ಕೌಶಲ್ಯ ಮತ್ತು ನೈತಿಕ ಮೌಲ್ಯಗಳನ್ನು ಬೆಳೆಸುವ ಮಹತ್ತರ ಕಾರ್ಯವನ್ನು ಮಾಡುತ್ತಿವೆ. ಇಲ್ಲಿ ಮಕ್ಕಳಿಗೆ ಪಠ್ಯಜ್ಞಾನದ ಜೊತೆಗೆ ಶಿಸ್ತು, ಸಮಯಪಾಲನೆ, ಪರಿಶ್ರಮ ಮತ್ತು ಸಾಮಾಜಿಕ ಜವಾಬ್ದಾರಿಯ ಪಾಠಗಳನ್ನು ಕಲಿಸಲಾಗುತ್ತದೆ.ವಿಶೇಷ ವಾಗಿ ರವೀಂದ್ರನಾಥ
ಠಾಗೂರ ತರಬೇತಿ ಕೇಂದ್ರವು ಅಕ್ಷರದೊಂದಿಗೆ ಸಂಸ್ಕಾರ ನೀಡುವ ಉತ್ತಮ ತರಬೇತಿ ಕೇಂದ್ರವಾಗಿದೆ ಎಂದು ಹೇಳಿದರು.ತರಬೇತಿ ಕೇಂದ್ರದ ಮುಖ್ಯಸ್ಥರಾದ ರತಿಕಾ ಎಸ್. ಮಂಠಾಳೆ ಮಾತನಾಡುತ್ತ
ಬಲವಾದ ಕಟ್ಟಡಕ್ಕೆ ಹೇಗೆ ಗಟ್ಟಿಯಾದ ಅಡಿಪಾಯ ಬೇಕೋ, ಹಾಗೆಯೇ ಉತ್ತಮ ಬದುಕಿಗೆ ಸಂಸ್ಕಾರವೇ ಬುನಾದಿಯಾಗಿದೆ. ವಿದ್ಯೆ ಜೀವನಕ್ಕೆ ಬೆಳಕು ನೀಡಿದರೆ, ಸಂಸ್ಕಾರ ಜೀವನಕ್ಕೆ ಮೌಲ್ಯ ನೀಡುತ್ತದೆ.ಪಾಲಕರ ಹಾಗೂ ಮಾರ್ಗದರ್ಶಕರಿಂದ, ತರಬೇತಿದರಾರ ಪರಿಶ್ರಮದಿಂದ, ಮಕ್ಕಳ ಸತತ ಪ್ರಯತ್ನದಿಂದ ಪ್ರತಿ ವರ್ಷ ತರಬೇತಿ ಕೇಂದ್ರದ ಮಕ್ಕಳು ಉತ್ತಮ ಸಾಧನೆಗೈಯುತ್ತಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಶಶಿಕಾಂತ ಮಾಂಠಾಳೆ, ತರಬೇತಿದಾರರಾದ ರಂಜಿತಾ ಮಾಸೀಮೆಡೆ, ಕವಿತಾ, ಪ್ರಿಯಾಂಕ, ಚಂದ್ರಕಲಾ, ಲಕ್ಷ್ಮೀ, ಸೇರಿದಂತೆ ವಿದ್ಯಾರ್ಥಿಗಳು, ಪಾಲಕರು ಭಾಗವಹಿಸಿದರು. ಇದೆ ಸಂಧರ್ಭದಲ್ಲಿ ಉಪನ್ಯಾಸಕರಿಗೂ ಹಾಗೂ ಅಥಿತಿಗಳಿಗೂ ಸನ್ಮಾನಿಸಿದರು.





























