ಮೋದಿ ೩.೦ ಸರ್ಕಾರಕ್ಕೆ ಒಂದು ವರ್ಷ

ನವದೆಹಲಿ, ಜೂ.೯- ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ಸತತ ಮೂರನೇ ಅವಧಿಗೆ ಅಧಿಕಾರಕ್ಕೆ ಮರಳಿ ಇಂದಿಗೆ ಒಂದು ವರ್ಷ ತುಂಬಿದ್ದು, ಒಂದು ವರ್ಷದ ಅವಧಿಯಲ್ಲಿ ಹಲವಾರು ಯೋಜನೆ ಹಾಗೂ ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ.


ಪ್ರಮುಖವಾಗಿ ದೇಶವನ್ನು ವಿಕಸಿತ ಭಾರತ (ಅಭಿವೃದ್ಧಿ ಹೊಂದಿದ ಭಾರತ) ಆಗಿ ಪರಿವರ್ತಿಸುವ ಮತ್ತು ಜಾಗತಿಕ ವೇದಿಕೆಯಲ್ಲಿ ತನ್ನ ಪಾತ್ರವನ್ನು ಪ್ರತಿಪಾದಿಸುವತ್ತ ನಿರಂತರ ಗಮನ ಹರಿಸಲಾಗಿದೆ. ಕಾರ್ಯತಂತ್ರದ ಮಿಲಿಟರಿ ಕ್ರಮ ಮತ್ತು ಸಾಮಾಜಿಕ ಕಲ್ಯಾಣ ಸುಧಾರಣೆಗಳಿಂದ ಹಿಡಿದು ಗಮನಾರ್ಹ ಆರ್ಥಿಕ ಪರಿಹಾರ ಮತ್ತು ಪೂರ್ವಭಾವಿ ಜಾಗತಿಕ ರಾಜತಾಂತ್ರಿಕತೆಯವರೆಗೆ ಗಮನ ಕೇಂದ್ರಿಕರಿಸಲಾಗಿದೆ.


ಮೋದಿ ಸರ್ಕಾರದ ೩.೦ ರ ಮೊದಲ ವರ್ಷದ ನಿರ್ಣಾಯಕ ಕ್ಷಣಗಳಲ್ಲಿ ಆಪರೇಷನ್ ಸಿಂಧೂರ ಪ್ರಮುಖವಾದ ಬೆಳವಣಿಗೆ. ಏಪ್ರಿಲ್ ೨೨ ರಂದು ೨೬ ಜೀವಗಳನ್ನು ಬಲಿ ಪಡೆದ ವಿನಾಶಕಾರಿ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತ್ಯುತ್ತರವಾಗಿ ೨೦೨೫ರ ಮೇ ೭ ರಂದು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ಶಿಬಿರಗಳನ್ನು ಭಾರತ ಧ್ವಂಸಗೊಳಿಸಿತು.


ಇನ್ನೂ, ಬ್ರಿಟಿಷ್ ಕಾಲದ ಕಾನೂನಿಗೆ ಇತಿಶ್ರಿ ಹಾಡಿ ಹೊಸ ಮೂರು ಕ್ರಿಮಿನಲ್ ಕಾನೂನುಗಳ ಪರಿಚಯ, ಒಂದು ದೇಶ, ಒಂದು ಚುನಾವಣೆ ಪರಿಕಲ್ಪನೆ ಪರಿಚಯ, ಕಾಶ್ಮೀರದಲ್ಲಿ ಐತಿಹಾಸಿಕ ವಿಧಾನಸಭಾ ಚುನಾವಣೆ, ಆಯುಷ್ಮಾನ್ ಯೋಜನೆಯಡಿ ೭೦ ವರ್ಷ ಮೇಲ್ಪಟ್ಟವರಿಗೆ ಉಚಿತ ಚಿಕಿತ್ಸೆ, ಮುಂಬೈ ದಾಳಿ ಮಾಸ್ಟರ್‌ಮೈಂಡ್ ಉಗ್ರ ರಾಣಾ ಭಾರತಕ್ಕೆ ಹಸ್ತಾಂತರ, ಆಡಳಿತದ ಪಾರದರ್ಶಕತೆಗೆ ವಕ್ಫ್ ತಿದ್ದುಪಡಿ ಕಾಯ್ದೆ, ವಿಶ್ವದಾಖಲೆಯ ಕುಂಭಮೇಳ ಅಭೂತಪೂರ್ವ ಯಶಸ್ಸು ಮೊದಲಾದ ಸುಧಾರಣಾ ಕ್ರಮಗಳೊಂದಿಗೆ ಮೋದಿ ಸರ್ಕಾರ ಗಮನ ಸೆಳೆದಿದೆ.


೧೨ ಲಕ್ಷದ ತನಕ ಆದಾಯ ತೆರಿಗೆಯಲ್ಲಿ ವಿನಾಯ್ತಿ ನೀಡುವ ಮೂಲಕ ಮಧ್ಯಮ ವರ್ಗದ ಜನರಿಗೆ ಅನುಕೂಲ ಮಾಡಿಕೊಡಲಾಯಿತು. ದೆಹಲಿ, ಮಹಾರಾಷ್ಟ್ರ, ಹರಿಯಾಣ ಚುನಾವಣೆಯಲ್ಲಿ ಅಭೂತಪೂರ್ವ ಜಯವನ್ನು ಎನ್‌ಡಿಎ ಮೈತ್ರಿಕೂಟ ಸಾಧಿಸಿತು.


ಲೋಕಸಭಾ ಚುನಾವಣೆಯಲ್ಲಿ ಮತ್ತೊಂದು ನಿರ್ಣಾಯಕ ಗೆಲುವಿನ ನಂತರ ೨೦೨೪ರ ಜೂನ್ ೯ ರಂದು ಮೋದಿ ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು.