
ಸೇಡಂ,ಆ,೩೦-:ಮಾನವ ಬದುಕಿನ ಸೋಪಾನ ಶ್ರಾವಣ ಸತ್ಸಂಗ -೧೩ರ ಕಾರ್ಯಕ್ರಮವು ಸೇಡಮ್ ನಗರದ ಶರಣ ಶ್ರೀ ರಾಜಶೇಖರ್ ಮಿತ್ತಲ್ಕೋಡ ಅವರ ನಿವಾಸದಲ್ಲಿ ಭಕ್ತಿ ಪೂರ್ವಕವಾಗಿ ಜರುಗಿತು.ಸತ್ಸಂಗ ೧೩ರ ಸರಣಿ ಕಾರ್ಯಕ್ರಮದಲ್ಲಿ ಅನುಭಾವದ ನುಡಿಯು ನಗರದ ಆರಾಧ್ಯ ದೈವ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಪೂಜ್ಯರಾದ ಡಾ ಸದಾಶಿವ ಸ್ವಾಮಿಗಳು ಪಂಚಾಚಾರದ ಇನ್ನೊಂದು ಪವಿತ್ರ ಆಚಾರವಾದ ಬ್ರತ್ಯಾಚಾರ ತತ್ವ ಕುರಿತು ಪ್ರವಚನ ನೀಡುತ್ತಾ, ಅಹಂಕಾರವನ್ನು ಬಿಟ್ಟು, ತನ್ನ ಕಾಯಕವನ್ನು ಶಿವಸೇವೆಯೆಂಬ ಭಾವ ತೋರುವವನೆ ಬ್ರತ್ಯಾಚಾರಿ ಎನ್ನುತ್ತಾ, ಶರಣ ಪರಂಪರೆಯಲ್ಲಿ ಬ್ರತ್ಯಾಚಾರ ಎಂದರೆ ಕೇವಲ ಭಕ್ತನಾಗಿ ಬದುಕುವುದಲ್ಲ; ತಾನು ಭಗವಂತನ ಸೇವಕನೆಂಬ ಭಾವದಿಂದ, ವಿನಯ-ಸೇವೆ-ಸತ್ಯ ದಾಸೋಹದ ಮೂಲಕ ಶರಣರ ಸೇವೆಯಲ್ಲಿ ಜೀವನವನ್ನು ಸಾರ್ಥಕಗೊಳಿಸುವದಾಗಿದ್ದು, ಬ್ರತ್ಯಾಚಾರಿಯು ತಾನು ದೊಡ್ಡವನೆಂಬ ಭಾವವಿಲ್ಲದೆ, ಶಿವ ಮತ್ತು ಶರಣರ ಸೇವಕನಾಗಿ ಬದುಕುವುದರ ಜೊತೆಗೆ ಕಾಯಕನಿಷ್ಠೆ, ವಿನಯ, ಸತ್ಯ ಮತ್ತು ಶುದ್ಧತೆಯೊಂದಿಗೆ ಸದಾ ಸಮಭಾವದೊಂದಿಗೆ ಲಿಂಗಸ್ಮರಣೆ ಮತ್ತು ಶಿವಚಿಂತನೆ ನಿರತನಾಗಿರುತ್ತಾನೆ ಎಂದರು.ಶ್ರೀಗಳು ಮುಂದುವರೆದು ಬ್ರತ್ಯಾಚಾರಿಯು ತನ್ನ ಬದುಕಿನಿಂದ ಇತರರಿಗೆ ನೆಮ್ಮದಿ, ಪ್ರೀತಿ, ಸೇವೆ ಮತ್ತು ಸನ್ಮಾರ್ಗವನ್ನು ತೋರಿಸುವವನೆ ನಿಜವಾದ ಬ್ರತ್ಯಾಚಾರಿ ಎನ್ನುತ್ತಾ ಸತ್ಸಂಗಿಗಳಲ್ಲಿ ತಾವೆಲ್ಲರೂ ಭಗವಂತನ ಸೇವಕನೆಂಬ ಭಾವ ಮೂಡಿಸಿದರು.































