ಒಂದು ರಾಷ್ಟ್ರ ಒಂದು ಚುನಾವಣೆ ಕಾರ್ಯಾಗಾರ: ಬಿ.ವೈ. ವಿಜಯೇಂದ್ರ, ಪ್ರಲ್ಹಾದ್ ಜೋಶಿ ಭಾಗಿ

ಕಲಬುರಗಿ:ಜೂ.13: ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಜೂನ್ 14ರಂದು ನಗರಕ್ಕೆ ಆಗಮಿಸಲಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು. ಒಂದು ರಾಷ್ಟ್ರ, ಒಂದು ಚುನಾವಣೆ ಕಾರ್ಯಾಗಾರದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಪ್ರಮುಖ ಭಾಷಣ ಮಾಡುವರು ಎಂದು ರಾಜ್ಯ ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಬಿಜೆಪಿ ಹಿರಿಯ ಮುಖಂಡ ಅಮರನಾಥ್ ಪಾಟೀಲ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ.ವೈ. ವಿಜಯೇಂದ್ರ ಅವರು ಜೂನ್ 14ರಂದು ಅಪರಾಹ್ನ 12 ಗಂಟೆಗೆ ನಗರಕ್ಕೆ ವಿಮಾನದಲ್ಲಿ ಆಗಮಿಸುವರು. 12-30ಕ್ಕೆ ಬಿಜೆಪಿ ಕಚೇರಿಯಲ್ಲಿ ಪರಿಸರ ದಿನಾಚರಣೆ ನಿಮಿತ್ಯ ಸಸಿ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದರು.
ಮಧ್ಯಾಹ್ನ 2-30ಕ್ಕೆ ನಗರದ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಿಯರಿಂಗ್ ಕಾಲೇಜಿನ ಆಡಿಟೋರಿಯಂ ಹಾಲ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿನ ಕೇಂದ್ರ ಸರ್ಕಾರದ ಹನ್ನೊಂದು ವರ್ಷಗಳ ಸಾಧನೆ ಕುರಿತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಅದೇ ರೀತಿ ಮಹಾತ್ವಾಕಾಂಕ್ಷೆಯ ಒಂದು ರಾಷ್ಟ್ರ, ಒಂದು ಚುನಾವಣೆಯ ಕಾರ್ಯಾಗಾರದಲ್ಲಿ ಸಹ ಭಾಗವಹಿಸುವರು. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಒಂದು ರಾಷ್ಟ್ರ, ಒಂದು ಚುನಾವಣೆ ಕುರಿತು ಮಾತನಾಡುವರು. ನಂತರ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಾತ್ರಿ 8-15ಕ್ಕೆ ಸೊಲ್ಲಾಪೂರ್- ಹಾಸನ್ ಎಕ್ಸ್‍ಪ್ರೆಸ್ ರೈಲಿನ ಮೂಲಕ ಬೆಂಗಳೂರಿಗೆ ತೆರಳುವರು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ, ಬಿಜೆಪಿ ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಅಶೋಕ ಬಗಲಿ, ನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್, ಮಾಧ್ಯಮ ವಕ್ತಾರ ಸಂತೋಷ ಹಾದಿಮನಿ, ಮಹಾದೇವ ಬೆಳಮಗಿ ಮುಂತಾದವರು ಉಪಸ್ಥಿತರಿದ್ದರು.