ಕಲಬುರಗಿ: ಅ.10:ಟೋಕರೆ, ಕೋಲಿ ಬಿಟ್ಟುಹೋದ ಪರ್ಯಾಯ ಪದಗಳಾದ ಕೋಲಿ, ಕಬ್ಬಲಿಗ, ಅಂಬಿಗ, ಬೆಸ್ಕ ಇವುಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ನವೆಂಬರ್ 17 ರಂದು ವೈಜ್ಞಾನಿಕವಾಗಿ ಪ್ರಸ್ತಾವ ಸಲ್ಲಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ
ಈಡೇರಿಕೆಗೆ ಒಂದು ತಿಂಗಳು ಗಡುವು ನೀಡಲಾಗುವುದು ಎಂದು ರಾಜ್ಯ ಕೋಲಿ ಕಬ್ಬಲಿಗ – ಎಸ್.ಟಿ ಹೋರಾಟ ಸಮಿತಿ ರಾಜ್ಯಾದ್ಯಕ್ಷ ಲಚ್ಚಪ್ಪ ಎಸ್. ಜಮಾದಾರ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಲಗುರು ನಿಜಶರಣ ಅಂಬಿಗರ ಚೌಡಯ್ಯನವರಿಗೆ ಯಾದಗಿರಿ ಜಿಲ್ಲೆಯಲ್ಲಿ ಹಗುರವಾಗಿ ಮಾತನಾಡಿದ ಕಿಡಿಗೇಳಿಗಳ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಸೆ.25ರಂದು ಮತ್ತೆ ಅವಮಾನ ಮಾಡಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿ, ಗಡಿಪಾರು ಮಾಡಬೇಕು. ಕೋಲಿ ಕಬ್ಬಲಿಗ ಮತ್ತು ತಳವಾರ ಜನಾಂಗದ ಹೋರಾಟಗಾರರ ವಿರುದ್ಧ ಕಲಬುರಗಿ, ಯಾದಗಿರಿ ಸೇರಿ ರಾಜ್ಯದಲ್ಲಿ ದಾಖಲಾಗಿರು ಎಫ್‍ಐಆರ್‍ಗಳನ್ನು ಸರ್ಕಾರ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಎಲ್ಲ ಜಿಲ್ಲೆಗಳಂತೆ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ತಳವಾರರಿಗೆ ಎಸ್‍ಟಿ ಮತ್ತು ಸಿಂಧುತ್ವ ಪ್ರಮಾಣಪತ್ರ ನೀಡಬೇಕು. ಆದರೆ, ಪರಿಶಿಷ್ಟ ಪಂಗಡ-
ದಲ್ಲಿರುವ ಕೆಲ ಪಟ್ಟಭದ್ರ ಹಿತಾಸಕ್ತಿಗಳು, ರಾಜಕೀಯ ಪ್ರಭಾವಿಗಳು ಮುಖ್ಯಮಂತ್ರಿ ಮತ್ತು ಜಿಲ್ಲಾಧಿಕಾರಿಗಳ ಮೇಲೆ ಒತ್ತಡ ಹೇರಿ ಅನ್ಯಾಯ ಮಾಡುತ್ತಿದ್ದಾರೆ. ಸರ್ಕಾರ ಇದಕ್ಕೆ ಮಣಿಯಬಾರದು. ಈ ಎಲ್ಲ ವಿಷಯಗಳ ಕುರಿತು ಈಚೆಗೆ ಸಮಾಜದ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಿ, ಗಡುವು ನೀಡಿ ಹೋರಾಟದ ನಿರ್ಣಯಕ್ಕೆ ಬರಲಾಗಿದೆ’ ಎಂದರು. ನಮ್ಮೆಲ್ಲ ಬೇಡಿಕೆಗಳಿಗೆ ಸ್ಪಂದಿಸದಿದ್ದಲ್ಲಿ ನವೆಂಬರ್ ತಿಂಗಳಲ್ಲಿ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಜಮಾದಾರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಪ್ರಮುಖರಾದ ರಾಮಲಿಂಗ ನಾಟೆಕರ, ಜಯಶ್ರೀ ಎಂ.ಕಟ್ಟಿಮನಿ, ಅಂಬಾರಾಯ ಜವಳಗಾ, ಸತೀಷ
ಜಮಾದಾರ, ನಿಂಗಣ್ಣ ಹೆಗಲೇರಿ, ಚಂದ್ರಕಾಂತ ನಡಕಟ್ಟಿ,, ನಾಮದೇವ ಶಕಾಪುರ, ಚಂದ್ರಕಾಂತ ಜಮಾದಾರ ಇದ್ದರು.






















