
ಬೆಂಗಳೂರು,ಮೇ.೯-ಹೋಟೆಲ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಓರ್ವ ಸಾವನ್ನಪ್ಪಿ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ನಿನ್ನೆ ಮಧ್ಯರಾತ್ರಿ ನಾಗರಬಾವಿಯ ಮಾಳಗಾಳದ ಹೋಟೆಲ್‌ವೊಂದರಲ್ಲಿ ನಡೆದಿದೆ.
ಹೊಟೇಲ್ ನಲ್ಲಿ ಕಳೆದ ೧೫ ದಿನಗಳ ಹಿಂದಷ್ಟೇ ಕೆಲಸಕ್ಕೆ ಸೇರಿದ್ದ ಮಧ್ಯಪ್ರದೇಶ ಮೂಲದ ರಾಜ್ ಕುಮಾರ್ (೪೦) ಸಾವನ್ನಪ್ಪಿದ್ದರೆ,ಗಾಯಗೊಂಡಿರುವ ಭೀಮಾ, ಶಿವಾನಂದ್, ಸತೀಶ್ ರಾಜಕುಮಾರ್ ಸೇರಿ ನಾಲ್ವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು,ಅವರ ಸ್ಥಿತಿ ಚಿಂತಾಜನಕವಾಗಿದೆ. ಬೆಂಕಿಯಿಂದ ಲಕ್ಷಾಂತರ ರೂಗಳ ನಷ್ಟ ಸಂಭವಿಸಿದೆ.
ಹೋಟೆಲ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲೇ ಅದು ವ್ಯಾಪಕವಾಗಿ ಹರಡಿ ಮೇಲ್ಮಹಡಿಯಲ್ಲಿ ವಾಸವಾಗಿದ್ದ ಸಿಬ್ಬಂದಿ ಕೊಠಡಿಗಳಿಗೂ ಬೆಂಕಿ ತಗುಲಿರುವುದರಿಂದ ಪರಿಸ್ಥಿತಿ ಗಂಭೀರವಾಗಿದೆ.
ಘಟನೆಯ ವೇಳೆ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಐವರು ಕಾರ್ಮಿಕರು ಮೇಲ್ಮಹಡಿಯಲ್ಲಿ ನಿದ್ರಿಸುತ್ತಿದ್ದರು. ರಾತ್ರಿ ಹೊತ್ತಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಕಾರಣ, ನಿದ್ರೆಯಲ್ಲಿದ್ದ ಅವರಿಗೆ ಹೊರಬರಲು ಸಾಧ್ಯವಾಗದೆ ಒಳಗೇ ಸಿಲುಕಿಕೊಂಡಿದ್ದಾರೆ. ಬೆಂಕಿಯ ತೀವ್ರತೆ ಹೆಚ್ಚಾದಂತೆ, ಮೇಲಿನ ಮಹಡಿಯನ್ನೇ ಆವರಿಸಿಕೊಂಡಿದ್ದು, ಒಳಗಿದ್ದವರ ರಕ್ಷಣೆ ಕಷ್ಟಕರವಾಗಿತ್ತು.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟು ಐವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆ ವೇಳೆಗಾಗಲೇ ಗಂಭೀರವಾಗಿ ಗಾಯಗೊಂಡಿದ್ದ ರಾಜ್ ಕುಮಾರ್ ಸಾವನ್ನಪ್ಪಿದ್ದು,ಅಸ್ವಸ್ಥಗೊಂಡ ಭೀಮಾ, ಶಿವಾನಂದ್, ಸತೀಶ್ ಸೇರಿ ನಾಲ್ವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೊಸ ಬೈಕ್‌ಗಳು ಭಸ್ಮ:
ಕೆ.ಆರ್ ಪುರಂ ಟಿನ್ ಫ್ಯಾಕ್ಟರಿ ಪ್ರದೇಶದ ಸಮೀಪದಲ್ಲಿರುವ ಹೋಂಡಾ ಬೈಕ್ ಶೋ ರೂಮ್‌ನಲ್ಲಿ ಮತ್ತೊಂದು ಬೆಂಕಿ ಅವಘಡ ಸಂಭವಿಸಿದೆ. ನಿನ್ನೆ ಮಧ್ಯರಾತ್ರಿ ನಡೆದ ಈ ಘಟನೆಯಲ್ಲಿ ಶೋ ರೂಮ್‌ನೊಳಗೆ ಇರಿಸಲಾಗಿದ್ದ ಸುಮಾರು ೨೦ ಹೊಸ ಬೈಕ್‌ಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ.
ಬೆಂಕಿ ಕಾಣಿಸಿಕೊಂಡ ತಕ್ಷಣ ಮಹಾದೇವಪುರ ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ಕೈಗೊಂಡವು. ಅಗ್ನಿ ಅವಘಡದಿಂದ ಉಂಟಾದ ನಷ್ಟದ ಅಂದಾಜು ಇನ್ನಷ್ಟೇ ತಿಳಿದುಬರಬೇಕಿದೆ. ಪ್ರಾಥಮಿಕವಾಗಿ ಇಲ್ಲಿ ಕೂಡ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣವೆಂದು ಶಂಕಿಸಲಾಗಿದೆ.



























